ಕೃಷಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ವಿಫಲ

ಹಿರಿಯೂರು :

      ರೈತರು ಸಂಕಷ್ಟಗಳ ಸುಳಿಯಿಂದ ಹೊರಬರದಿರುವುದು, ಕೃಷಿಯಲ್ಲಿ ಅಂದುಕೊಂಡಷ್ಟು ಸಾಧನೆ ಮಾಡುವಲ್ಲಿ ವಿಫಲವಾಗಿರುವುದಕ್ಕೆ ಸರ್ಕಾರದ ಸೌಲಭ್ಯಗಳು ಪರಿಣಾಮಕಾರಿಯಾಗಿ ಅಧಿಕಾರಿಗಳು ತಲುಪಿಸದೆ ಇರುವುದೇ ಪ್ರಮುಖ ಕಾರಣ ಎಂಬುದಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ನಾಗೇಂದ್ರನಾಯ್ಕ್ ಆರೋಪಿಸಿದರು.

       ತಾಲ್ಲೂಕಿನ ಬಬ್ಬೂರುಫಾರಂನ ಕೃಷಿವಿಜ್ಞಾನ ಕೇಂದ್ರದಲ್ಲಿ ಆತ್ಮ ಯೋಜನೆಯಡಿ ಆಯೋಜಿಸಿದ್ದ ಜಿಲ್ಲಾ ರೈತಮೇಳ 2018-19 ಉದ್ಘಾಟಿಸಿ ಅವರು ಮಾತನಾಡಿದರು.

        ರೈತ ಮೇಳೆಗಳಲ್ಲಿ ಬರೀ ವಸ್ತುಪ್ರದರ್ಶನಗಳನ್ನು ಏರ್ಪಡಿಸಿ, ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಆಹ್ವಾನಿಸಿ ಭಾಷಣ ಮಾಡಿಸುವ ಕಾರ್ಯಕ್ರಮಗಳು ಆಗಬಾರದು. ಬದಲಿಗೆ ರೈತರನ್ನು ಕೃಷಿಯಲ್ಲಿನ ಸಂಕಷ್ಟದಿಂದ ಪಾರುಮಾಡುವ ಕುರಿತು ಮಾರ್ಗದರ್ಶನ ನೀಡುವಂತಿರಬೇಕು. ಕೃಷಿ ಇಲಾಖೆಯಿಂದ ಬರುವ ಸವಲತ್ತುಗಳು ನೇರವಾಗಿ ರೈತರಿಗೆ ತಲುಪಬೇಕು. ಬಯಲುಸೀಮೆಯ ರೈತರು ಸದಾ ಸಂಕಷ್ಟಗಳನ್ನು ಹೊದ್ದು ಮಲಗಿದವರಾಗಿದ್ದಾರೆ. ಅಂತಹವರಿಗೆ ಕಡಿಮೆ ಮಳೆಯಲ್ಲಿ ಆರ್ಥಿಕ ಹೊರೆ ಆಗದಂತೆ ಬೆಳೆ ಬೆಳೆಯುವ ತಾಂತ್ರಿಕತೆಯನ್ನು ಒದಗಿಸಿಕೊಡಬೇಕು. ಆಗಮಾತ್ರ ಇಂತಹ ಕೃಷಿ ಮೇಳೆಗಳು ಸಾರ್ಥಕ ಎಂದರು.

        ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಮ್ಮಯ್ಯ ಮಾತನಾಡಿ, ರೈತರು ದೇಶದ ಬೆನ್ನೆಲುಬು ಎಂದು ಅವಕಾಶ ಸಿಕ್ಕ ಕಡೆಯಲ್ಲಿ ಭಾಷಣ ಮಾಡುವ ಸಚಿವರು, ಶಾಸಕರು, ಸಂಸದರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಇಂತಹ ಮೇಳಗಳಿಗೆ ಬರದೇ ಹೋದಲ್ಲಿ ನಮ್ಮ ನೋವುಗಳನ್ನು ಯಾರಲ್ಲಿ ಹೇಳಿಕೊಳ್ಳಬೇಕು ಎಂದು ಪ್ರಶ್ನಿಸಿದರು.

      ಗದಗ ಜಿಲ್ಲೆಯ ಪ್ರಗತಿಪರ ರೈತ ಸುರೇಶ್‍ಪಾಟೀಲ್, ಮಿತಿಮೀರಿದ ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗಿದೆ. ಜೊತೆಗೆ ಉತ್ಪಾದಿಸಿದ ಬೆಳೆಗಳು ವಿಷಕಾರಿಯಾಗಿವೆ. ರೈತರು ಹೆಚ್ಚಾಗಿ ಸಾವಯವಗೊಬ್ಬರ ಬಳಸುವತ್ತ ಚಿಂತನೆ ಮಾಡಬೇಕು ಎಂಬುದಾಗಿ ರೈತರಿಗೆ ಕರೆನೀಡಿದರು.

       ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಪಂಚಾಯಿತಿ ಸದಸ್ಯ ಸಿ.ಬಿ.ಪಾಪಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಸ್.ಚಂದ್ರಪ್ಪ, ತಾ.ಪಂ.ಸದಸ್ಯ ಕೆ.ಓಂಕಾರಪ್ಪ, ತೋಟಗಾರಿಗೆ ಕಾಲೇಜಿನ ಮುಖ್ಯಸ್ಥ ಡಾ.ಸುರೇಶ್ ಏಕಬೋಟೆ, ಡಾ.ಶರಣಪ್ಪ ಜಂಗಂಡಿ ಡಾ.ಲಕ್ಷ್ಮಣ ಕಳ್ಳೆನ್ನವರು, ಡಾ.ಓಂಕಾರಪ್ಪ, ಡಾತಿಮ್ಮಯ್ಯ, ಎಚ್.ಎಲ್.ಡಾ.ಅಸ್ಲಂ, ಡಾ.ಉಷಾರಾಣಿ ಕೃಷ್ಣಮೂರ್ತ, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link