ಅಧಿಕಾರಿಗಳು ಕೇಂದ್ರಸ್ಥಾನ ಬಿಡುವಂತಿಲ್ಲ;ಡಿಸಿ ಆದೇಶ

ಚಿತ್ರದುರ್ಗ:

      ಲೋಕಸಭೆ ಚುನಾವಣೆ ಘೋಷಣೆಯಾಗಿದ್ದು, ಯಾವುದೇ ಇಲಾಖೆಗಳ ಅಧಿಕಾರಿಗಳು ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.ಲೋಕಸಭೆ ಚುನಾವಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

       ಭಾರತ ಚುನಾವಣಾ ಆಯೋಗ ಈಗಾಗಲೆ ಲೋಕಸಭೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಚುನಾವಣಾ ಕಾರ್ಯಗಳಿಗೆ ಅಧಿಕಾರಿ, ಸಿಬ್ಬಂದಿಗಳನ್ನು ಒಳಗೊಂಡ ವಿವಿಧ ತಂಡಗಳನ್ನು ರಚಿಸಿದ್ದು, ಈ ಎಲ್ಲ ತಂಡಗಳು ತಕ್ಷಣದಿಂದಲೇ ತಮಗೆ ವಹಿಸಲಾದ ಕರ್ತವ್ಯದ ಸೇವೆಗೆ ಹಾಜರಾಗಬೇಕು. ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಗಾ ವಹಿಸಲು ಹಾಗೂ ತಪಾಸಣೆ ಕಯಗೊಳ್ಳುವ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಒಟ್ಟು 40 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ.

        ಚೆಕ್‍ಪೋಸ್ಟ್‍ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಬೇಕು. ಇದಕ್ಕೆಂದೇ 24 ಗಂಟೆಗಳ ಅವಧಿಯಲ್ಲಿ ಮೂರು ಸರದಿಯಂತೆ ಕರ್ತವ್ಯ ನಿರ್ವಹಿಸಲು ಕೂಡ ವ್ಯವಸ್ಥೆ ಮಾಡಲಾಗಿದೆ. ತಕ್ಷಣದಿಂದಲೇ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗಳು ಚೆಕ್‍ಪೋಸ್ಟ್ ಕರ್ತವ್ಯಕ್ಕೆ ಹಾಜರಾಗಿ ಕೆಲಸ ಪ್ರಾರಂಭಿಸಬೇಕು. ಜಿಲ್ಲೆಯ ಯಾವುದೇ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡುವಂತಿಲ್ಲ. ಇದು ರಜೆ ದಿನಗಳಿಗೂ ಅನ್ವಯವಾಗುತ್ತದೆ. ತುರ್ತು ಅಥವಾ ವೈದ್ಯಕೀಯ ಕಾರಣಗಳಿದ್ದಲ್ಲಿ ಕೇಂದ್ರ ಸ್ಥಾನ ಬಿಡಲು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆದುಕೊಳ್ಳಬೇಕು.

       ಅಲ್ಲದೆ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗಳಿಗೂ ರಜೆ ನೀಡಬಾರದು. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಚುನಾವಣಾ ಆಯೋಗ ನೀಡುವ ಸೂಚನೆ ಹಾಗೂ ನಿಯಮಗಳಿಗೆ ಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು.

       ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳೊಂದಿಗೆ ಗುರುತಿಸಿಕೊಳ್ಳುವುದು, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಚಾರ ಅಥವಾ ರಾಜಕೀಯ ಚಟುವಟಿಕೆ ಮಾಡುವ ಅಧಿಕಾರಿ, ಸಿಬ್ಬಂದಿಗಳು ಕಠಿಣ ಕ್ರಮಗಳಿಗೆ ಒಳಗಾಗಬೇಕಾಗುತ್ತದೆ. ಯಾವುದೇ ದೂರುಗಳು ಬಂದರೂ, ಅದನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಬೇಕಾಗುತ್ತದೆ. ಅಧಿಕಾರಿಗಳು ಎಚ್ಚರಿಕೆಯಿಂದ, ಪ್ರಾಮಾಣಿಕವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.

      ಕಾಮಗಾರಿಗಳ ಪಟ್ಟಿ ನೀಡಿ : ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರೂ, ತುರ್ತು ಕುಡಿಯುವ ನೀರು ಸೇರಿದಂತೆ ಇತರೆ ಬರ ಪರಿಹಾರ ಕಾರ್ಯಗಳಿಗೆ ನೀತಿ ಸಂಹಿತೆಯ ಅಡ್ಡಿಯಿಲ್ಲ. ಬೇಸಿಗೆ ಇರುವುದರಿಂದ ಸಾರ್ವಜನಿಕರಿಗೆ ನೀರು ಪೂರೈಕೆ ಮಾಡುವುದು ಆದ್ಯತೆಯ ಕೆಲಸವಾಗಿದೆ.

          ಅಲ್ಲದೆ ಫಲಾನುಭವಿ ಆಧಾರಿತ ಯೋಜನೆಗಳನ್ನು ಹೊರತುಪಡಿಸಿ, ಕಚೇರಿಯ ಇತರೆ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ಮುಂದುವರಿಸಿಕೊಂಡು ಹೋಗಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯಾವುದೇ ಇಲಾಖೆಗಳು ಹೊಸ ಕಾಮಗಾರಿಗಳಿಗೆ ಟೆಂಡರ್ ಕರೆಯುವಂತಿಲ್ಲ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದಲ್ಲಿ ಕಾರ್ಯಾದೇಶ ನೀಡುವಂತಿಲ್ಲ. ಎಲ್ಲ ಇಲಾಖೆಗಳು ತಮ್ಮ ಕಚೇರಿ ವತಿಯಿಂದ ಈಗಾಗಲೆ ವಾಸ್ತವವಾಗಿ ಪ್ರಾರಂಭಗೊಂಡಿರುವ ಕಾಮಗಾರಿಗಳ ವಿವರ ಹಾಗೂ ಪ್ರಾರಂಭವಾಗದಿರುವ ಹೊಸ ಕಾಮಗಾರಿಗಳ ಪಟ್ಟಿಯನ್ನು 72 ಗಂಟೆಯ ಒಳಗಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಸೂಚನೆ ನೀಡಿದರು.

         ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯ್‍ಕುಮಾರ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap