ಹುಳಿಯಾರು
ಹೆಚ್ಚು ಬೆಲೆಗೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪತ್ರಿಕೆಯ ವರದಿ ಬಂದ ತಕ್ಷಣ ಎಚ್ಚೆತ್ತ ಕೊರೊನಾ ಸ್ಕ್ವಾಡ್ ತಂಡ ಸೋಮವಾರ ಬೆಳಗ್ಗೆಯಿಂದಲೇ ದಿನಸಿ ಅಂಗಡಿಗಳಿಗೆ ಭೇಟಿ ನೀಡಿ ಎಚ್ಚರಿಕೆ ನೀಡಿದರು.
ಲಾಕ್‍ಡೌನ್‍ನಿಂದಾಗಿ ಉದ್ಯೋಗ ಇಲ್ಲದೆ ಜೀವನ ನಡೆಸುವುದೇ ಜನರಿಗೆ ಕಷ್ಟಕರವಾಗಿದೆ. ಈ ಸಮಯದಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ವ್ಯಾಪಾರ ಮಾಡಬೇಕಾದ ಹುಳಿಯಾರಿನ ವರ್ತಕರು ಬಹುತೇಕ ಅಂಗಡಿಗಳಲ್ಲಿ ದಿನಸಿ, ಇನ್ನಿತರ ದಿನಬಳಕೆಯ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ದಿನಸಿ ಪದಾರ್ಥಗಳ ಬೆಲೆಯನ್ನು ಮನಸೋ ಇಚ್ಛೆ ಮಾರುತ್ತಿದ್ದು ಒಂದೊಂದು ಅಂಗಡಿಯಲ್ಲಿ ಒಂದೊಂದು ಬೆಲೆಗೆ ಮಾರುತ್ತಿದ್ದಾರೆ ಎಂಬುದು ಗ್ರಾಹಕರ ದೂರಾಗಿತ್ತು.
ಸಾಮಾಜಿಕ ಅಂತರ ಕಾಪಾಡಿ ಸರತಿ ಸಾಲಿನಲ್ಲಿ ಬಿಸಿಲಿನಲ್ಲಿ ನಿಂತ ಗ್ರಾಹಕ ಪದಾರ್ಥ ಸಿಕ್ಕಿದ್ದೇ ನಮ್ಮ ಭಾಗ್ಯ ಎಂದು ಬೆಲೆ ಏರಿಕೆಯ ಬಗ್ಗೆ ಪ್ರಶ್ನಿಸಿದ ಖರೀದಿಸುತ್ತಿದ್ದಾನೆ. ಗ್ರಾಹಕನ ಈ ಅನಿವಾರ್ಯತೆಯ ಲಾಭವನ್ನು ವರ್ತಕರು ಪಡೆಯುತ್ತಿದ್ದರೂ, ಅಧಿಕಾರಿಗಳು ಅಂಕುಶ ಹಾಕದಾಗಿದ್ದಾರೆ. ಪರಿಣಾಮ ಕೂಲಿ ವಂಚಿತ ಬಡವರು, ಕಾರ್ಮಿಕರು, ರೈತರು ದವಸ ಧಾನ್ಯಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಜಾಪ್ರಗತಿಯು ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿತ್ತು.
ಪತ್ರಿಕೆಯ ವರದಿಯ ಫಲಶೃತಿಯಿಂದ ಅಧಿಕಾರಿಗಳ ತಂಡ ಹುಳಿಯಾರಿನ ದಿನಸಿ ಅಂಗಡಿಗಳಿಗೆ ಖುದ್ದು ಭೇಟಿ ನೀಡಿ ಬೆಲೆಯ ಬಗ್ಗೆ ಪರಿಶೀಲಿಸಿದರು. ಅಚ್ಚರಿ ಎನ್ನುವಂತೆ ಅಧಿಕಾರಿಗಳು ಭೇಟಿ ನೀಡಿದ್ದ ಎಲ್ಲಾ ಅಂಗಡಿಗಳಲ್ಲೂ ಹೆಚ್ಚಿನ ಬೆಲೆಗೆ ಆಹಾರ ಪದಾರ್ಥ ಮಾರುತ್ತಿದ್ದರು. ಅಲ್ಲದೆ ಒಂದೊಂದು ಅಂಗಡಿಯಲ್ಲಿ ಒಂದೊಂದು ಬೆಲೆಯಲ್ಲಿ ಮಾರುತ್ತಿದ್ದರು. ಈ ಬಗ್ಗೆ ಅಧಿಕಾರಿ ಕಾಂತರಾಜು ಪ್ರಶ್ನಿಸಿದರೆ ರವಾನೆದಾರರು ಬೆಲೆ ಹೆಚ್ಚಿಸಿರುವುದರಿಂದ ಅನಿವಾರ್ಯವಾಗಿ ನಾವು ಹೆಚ್ಚಿಸಿದ್ದೇವೆ ಎನ್ನುವ ಕಾಮನ್ ಸಬೂಬು ಕೇಳಿ ಬಂದಿತ್ತು.
ಇದರಿಂದ ಅಸಮಾಧಾನಗೊಂಡ ಕಾಂತರಾಜು ಹುಳಿಯಾರಿನಲ್ಲಿರುವ ಒಂದೊಂದು ಅಂಗಡಿಗೆ ಒಂದೊಂದು ದರದಲ್ಲಿ ಪದಾರ್ಥ ಇಳಿಸುತ್ತಾರೆಯೇ? ಕೊಡಿ ನಿಮ್ಮ ರಿಟೈಲರ್ ಬಿಲ್ ನೋಡೋಣ ಎಂದು ಖಾರವಾದರು. ಅಧಿಕಾರಿ ಭೇಟಿ ನೀಡುತ್ತಿರುವ ವಿಷಯ ತಿಳಿದ ವರ್ತಕರ ಸಂಘದ ಅಧ್ಯಕ್ಷ ನಟರಾಜು ಅಷ್ಟರಲ್ಲಿ ಮಧ್ಯ ಪ್ರವೇಶಿಸಿ ವರ್ತಕರ ಸಭೆ ಕರೆದು ಮಾನವೀಯ ನೆಲೆಗಟ್ಟಿನಲ್ಲಿ ಎಲ್ಲಾ ಅಂಗಡಿಗಳಲ್ಲೂ ಏಕ ರೂಪ ಬೆಲೆ ನಿಗದಿ ಮಾಡಿ ಮಾರುವುದಾಗಿ ಭರವಸೆ ನೀಡಿದರು.
ಇದಕ್ಕೆ ಕಾಂತರಾಜು ಪ್ರತಿಕ್ರಿಯಿಸಿ ಜನರ ಕಷ್ಟ ಕಂಡು ಅನೇಕರು ಕೈಲಾದ ನೆರವು ನೀಡಿ ಹೃದಯ ವೈಶಾಲ್ಯತೆ ಮೆರೆಯುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಲಾಭ ಪಡೆದಿದ್ದೀರಿ. ಕಷ್ಟಕಾಲದಲ್ಲೂ ಲಾಭದ ದೃಷ್ಟಿಯಿಂದ ವ್ಯಾಪಾರ ಮಾಡದೆ ಮಾನವೀಯತೆ ಬೆಳಸಿಕೊಳ್ಳಿ. ಲಾಕ್‍ಡೌನ್ ತೆರವಾದ ನಂತರ ನೀವು ಎಷ್ಟು ಬೆಲೆಗಾದರೂ ಮಾರಿಕೊಳ್ಳಿ ಗ್ರಾಹಕರು ಎಲ್ಲಿ ಕಡಿಮೆ ಬೆಲೆ ಇರುತ್ತೋ ಅಲ್ಲಿ ಖರೀದಿ ಮಾಡುತ್ತಾರೆ. ಈಗ ಏಕರೂಪ ಬೆಲೆ ನಿಗದಿ ಮಾಡಿ ಎಂದು ಸೂಚನೆ ನೀಡಿ ತೆರಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
