ಸ್ಮಾರ್ಟ್ ಸಿಟಿ: ಅಧಿಕಾರಿಗಳಿಂದ ಅಮಾನಿಕೆರೆ ಕಾಮಗಾರಿ ವೀಕ್ಷಣೆ..!

ತುಮಕೂರು

     ದಶಕದ ಹಿಂದೆ ಹೂಳು ತುಂಬಿಕೊಂಡು ಹಾಳಾಗಿದ್ದ ಅಮಾನಿಕೆರೆ ಅಭಿವೃದ್ಧಿ ಕಾಮಗಾರಿಯು ಸ್ಮಾರ್ಟ್ ಸಿಟಿ ಯೋಜನೆಯಡಿ ಭರದಿಂದ ಸಾಗಿದ್ದು, ಶನಿವಾರ ತಾಂತ್ರಿಕ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿತು.

     ಭೇಟಿ ಸಂದರ್ಭದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಮಾತನಾಡಿ, ತುಮಕೂರಿನ ಹೆಮ್ಮೆ ಎಂದೇ ಬಿಂಬಿತವಾಗಿರುವ ಅಮಾನಿಕೆರೆಯನ್ನು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಭಿವೃದ್ಧಿ ಕಾಮಗಾರಿ ಯೋಜನೆಯನ್ನು ರೂಪಿಸಿದೆ.

     ಈ ಯೋಜನೆಯಡಿ ಕೆರೆಯ ಬಂಡ್ ಅಭಿವೃದ್ಧಿ, ಬೋಟಿಂಗ್ ಕೊಳದ ಅಭಿವೃದ್ಧಿ, ಸೈಕಲ್ ಟ್ರ್ಯಾಕ್, ಫುಟ್ಪಾತ್ ಮತ್ತು ಮೋನೋರೈಲ್, ಕಾರ್ ಪಾತ್‍ವೇ ಅಭಿವೃದ್ಧಿ, ವಾಕಿಂಗ್‍ಪಾತ್, ವಾರಾಂತ್ಯದ ಸಂಗೀತ ಕಾರಂಜಿ, ಮಕ್ಕಳ ಆಟಿಕೆ ಜಾಗ, ಮಕ್ಕಳಿಗೆ ಉದ್ಯಾನವನ, ಯೋಗಕೇಂದ್ರ, ಉದ್ಯಾನವನಕ್ಕೆ ಬಂದ ಪ್ರವಾಸಿಗರು ದೂರದಲ್ಲೇ ನಿಂತು ಪಕ್ಷಿಗಳ ಕಲರವ ನೋಡ(ಕೇಳ)ಲು, ಪಕ್ಷಿಗಳಿಗೆ ಉತ್ತಮ ಆವಾಸಸ್ಥಾನಗಳನ್ನು ಕಲ್ಪಿಸುವುದು ಹಾಗೂ ಅವುಗಳ ಸಂತಾನಾಭಿವೃದ್ಧಿ ಮಾಡಲು ದ್ವೀಪಗಳ ಅಭಿವೃದ್ಧಿ ಸೇರಿದಂತೆ ಸುಂದರ ಉದ್ಯಾನವನವಾಗಿ ಮಾಡಲು ಉದ್ದೇಶಿಸಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

      ತುಮಕೂರು ಅಮಾನಿಕೆರೆ ಸುಮಾರು 504 ಎಕೆರೆ ಪ್ರದೇಶದಲ್ಲಿರುವ ಅತಿದೊಡ್ಡ ಕೆರೆ. ಈ ಕೆರೆಯಲ್ಲಿ ಹೂಳು ತುಂಬಿದ್ದರಿಂದ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗಿದಲ್ಲಿ ಹೇಮಾವತಿ ನದಿ ನೀರನ್ನು ತುಂಬಿಸಲು ಅನುಕೂಲವಾಗುತ್ತದೆ ಎಂದರು. ಹಾಗೆಯೇ ಕೆರೆಯ ಸುತ್ತ ವಿವಿಧ ತರಹದ ಹೂಬಿಡುವ ಸಸಿ ನೆಡುವ ಕುರಿತು ತೋಟಗಾರಿಕಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಕೆರೆ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.ನಂತರ ನಗರದ ಹೊರಪೇಟೆ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್‍ರೋಡ್ ಕಾಮಗಾರಿಯನ್ನು ವೀಕ್ಷಿಸಿದರು. ಬೆಸ್ಕಾಂ ಮತ್ತು ಬಿಎಸ್‍ಎಲ್‍ಎಲ್‍ನ ಕೇಬಲ್ ಕಾಮಗಾರಿಯನ್ನು ಬೇಗನೇ ಪೂರ್ಣ ಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಮಾರಿಯಮ್ಮನಗರದಲ್ಲಿ ನಡೆಯುತ್ತಿರುವ ಬಡ ನಗರವಾಸಿಗಳ ವಸತಿ ಸಮುಚ್ಛಯ ಕಾಮಗಾರಿಯನ್ನು ಪರಿಶೀಲಿಸಿ ತಾಂತ್ರಿಕ ಅಧಿಕಾರಿಗಳಿಂದ ಕಾಮಗಾರಿ ಪೂರ್ಣ ಮಾಡುವುದರ ಬಗ್ಗೆ ಮಾಹಿತಿ ಪಡೆದರು. ಆನಂತರ ಟೌನ್‍ಹಾಲ್ ಬಳಿ ಇರುವ ಸಾರ್ವಜನಿಕ ಗ್ರಂಥಾಲಯ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.

       ಇಂಟಿಗ್ರೇಟೆಡ್ ಕಮ್ಯಾಂಡ್ ಮ್ಯಾನೇಜ್‍ಮೆಂಟ್ ಕಂಟ್ರೋಲ್ (ಐಸಿಟಿಸಿ) ಗೆ ಭೇಟಿ ನೀಡಿ, ನಗರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಹಾಗೂ ಟ್ರಾಫಿಕ್ ಸಿಗ್ನಲ್ ಗಳ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದ ಅವರು ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಆನಂತರ ಸ್ಮಾರ್ಟ್‍ಸಿಟಿಯ ಕಚೇರಿಯಲ್ಲಿ ವಿವಿಧ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಜೊತೆ ಮಾಹಿತಿ ಪಡೆದು ಸಲಹೆ ಸೂಚನೆ ನೀಡಿದರು.

      ಈ ಸಂದರ್ಭದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ತುಮಕೂರು ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಯೋಗಾನಂದ, ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ(ಪಿಎಂಸಿ)ಯ ಅಧಿಕಾರಿಗಳು ಹಾಗೂ ತಾಂತ್ರಿಕ ಅಧಿಕಾರಿಗಳು, ತೋಟಗಾರಿಕೆ ಇಲಾಖೆಯ ಅಧಿಕಾರಿ ರಘು ಸೇರಿದಂತೆ ಇತರ ಅಧಿಕಾರಿಗಳ ತಂಡ ಸಮಗ್ರ ಪರಿಶೀಲನೆ ನಡೆಸಿತು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link