ಎಪಿಎಂಸಿಯಲ್ಲಿ ಜನಜಂಗುಳಿ: ವರ್ತಕರಿಗೆ ಅಧಿಕಾರಿಗಳ ಎಚ್ಚರಿಕೆ

ತುಮಕೂರು

     ಈಗ ಹುಣಿಸೇಹಣ್ಣಿನ ಸಮಯ. ತುಮಕೂರು ಜಿಲ್ಲೆಯಲ್ಲಿ ಹುಣಿಸೇ ಫಸಲು ಹೆಚ್ಚು, ಜೊತೆಗೆ ಇಲ್ಲಿನ ಹುಣಿಸೇಹಣ್ಣಿಗೆ ಹೊರ ರಾಜ್ಯಗಳಲ್ಲಿ ವಿಪರೀತ ಬೇಡಿಕೆ. ಪ್ರತಿ ವರ್ಷ ಜನವರಿಯಿಂದ ಮೇ ತಿಂಗಳವರೆಗೆ ರೈತರಿಗೆ ಹುಣಿಸೇಹಣ್ಣು ಕಿತ್ತು, ಸಿಪ್ಪೆ, ಬೀಜ ಬೇರ್ಪಡಿಸಿ ಮಾರುಕಟ್ಟೆಗೆ ತಂದು ಮಾರಿ ಹಣ ಪಡೆಯುವ ಕಾಲ. ಹಾಗೇ ಹುಣಿಸೇಹಣ್ಣಿನ ವರ್ತಕರಿಗಳಿಗೂ ಲಾಭ ಕಾಣುವ ಸಂದರ್ಭ.

    ಈ ವರ್ಷ ಹುಣಿಸೇಹಣ್ಣಿನ ಬೆಲೆ ರೈತರ ಪಾಲಿಗೆ ಆಶಾದಾಯಕವಾಗಿದೆ. ತುಮಕೂರು ಎಪಿಎಂಸಿಗೆ ಪ್ರತಿ ದಿನ ಲೋಡುಗಟ್ಟಲೆ ಹುಣಿಸೇಹಣ್ಣು ಬರುತ್ತಿದೆ. ಕಾರಣ, ಹುಣಿಸೇಹಣ್ಣಿನ ದೊಡ್ಡ ಮಾರುಕಟ್ಟೆಗಳೆನಿಸಿದ್ದ ಹಿಂದೂಪುರ ಎಪಿಎಂಸಿ, ಶಿರಾ ಎಪಿಎಂಸಿ ಈ ವರ್ಷ ಕೊರೊನಾ ಕಾರಣದಿಂದ ಬಂದ್ ಆಗಿವೆ. ಜೊತೆಗೆ ಜಿಲ್ಲೆಯ ಮಧುಗಿರಿ, ಹುಳಿಯಾರು, ಚೇಳೂರು ಎಪಿಎಂಸಿಯಲ್ಲೂ ಹುಣಿಸೇಹಣ್ಣಿನ ವಹಿವಾಟು ನಡೆಯುತ್ತಿಲ್ಲ. ಹೀಗಾಗಿ ಅಷ್ಟೂ ಭಾಗದ ರೈತರು ತಮ್ಮ ಹುಣಿಸೇಹಣ್ಣು ಮಾರಾಟ ಮಾಡಲು ತುಮಕೂರು ಎಪಿಎಂಸಿಯನ್ನೇ ಆಶ್ರಯಿಸುವಂತಾಗಿದೆ.

    ಈ ನಡುವೆ, ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ, ಹುಣಿಸೇಹಣ್ಣಿನ ಬೇಡಿಕೆ ಇರುವ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಸರಕು ಸಾಗಿಸಬಾರದು ಎಂದು ಸರ್ಕಾರ ಅನುಮತಿ ನಿರಾಕರಿಸಿತ್ತು. ಇದರಿಂದ ವರ್ತಕರಿಗೆ ಹಾಗೂ ರೈತರಿಗೆ ತೊಂದರೆಯಾಗುತ್ತದೆ, ಹೊರ ರಾಜ್ಯಗಳಿಗೆ ಹುಣಿಸೇಹಣ್ಣು ಸಾಗಾಣೆ ಮಾಡಲು ಅನುಮತಿ ನೀಡಬೇಕು ಎಂದು ವ್ಯಾಪಾರಿಗಳು ಜಿಲ್ಲಾಡಳಿತ ಹಾಗೂ ಸರ್ಕಾರವನ್ನೂ ಒತ್ತಾಯಿಸಿದ್ದರು. ಪರಿಸ್ಥಿತಿ ಅರಿತ ಸರ್ಕಾರ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಕೊಂಡು ಹುಣಿಸೇಹಣ್ಣು ಸಾಗಾಣಿಕೆಗೆ ವರ್ತಕರಿಗೆ ಅನುಮತಿ ನೀಡಿತ್ತು.

    ಈ ಸಮಸ್ಯೆ ಬಗೆಹರಿಯುತ್ತಿದ್ದಂತೆ ತುಮಕೂರು ಎಪಿಎಂಸಿಯಲ್ಲಿ ಮತ್ತೊಂದು ಸಮಸ್ಯೆ ಎದುರಾಗಿತ್ತು. ಕರೊನಾ ಸೋಂಕು ಹರಡುವ ಸಂದರ್ಭದಲ್ಲಿ ಎಪಿಎಂಸಿಯ ವ್ಯಾಪಾರಿಗಳು ಹಾಗೂ ಹುಣಿಸೇಹಣ್ಣು ಮಾರಾಟ ಮಾಡಲು ಬರುವ ರೈತರು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿಲ್ಲ. ಅಂಗಡಿ ಮುಂದೆ ರೈತರು ಗುಂಪುಗೂಡುವುದನ್ನು ವ್ಯಾಪಾರಿಗಳು ತಡೆಯುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ, ಕೈ ತೊಳೆಯುವ ಸ್ಯಾನಿಟೈಸರ್ ಬಳಸುತ್ತಿಲ್ಲ. ಸಮಾಜಿಕ ಅಂತರ ಕಾಪಾಡುತ್ತಿಲ್ಲ ಎಂದು ಪೊಲೀಸರು ವರ್ತಕರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು.

     ಈ ಬಗ್ಗೆ ಎಪಿಎಂಸಿ ಕಾರ್ಯದರ್ಶಿ ಡಿ.ಆರ್.ಪುಷ್ಪಾ ಅವರು ವರ್ತಕರ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಸೂಚನೆ ನೀಡಿದ್ದರು. ಆದರೂ ಪಾಲನೆ ಆಗಿರಲಿಲ್ಲ. ಕ್ಯಾತ್ಸಂದ್ರ ಠಾಣೆ ಪೊಲೀಸರು ಕೊರೊನಾ ತಡೆ ಕ್ರಮಗಳನ್ನು ಅನುಸರಿಸದ ವರ್ತಕರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದಾಗ ವರ್ತಕರಲ್ಲಿ ಆತಂಕ ಉಂಟಾಯಿತು.

    ಈ ಸಂಬಂಧ ಶುಕ್ರವಾರ ಎಪಿಎಂಸಿಯಲ್ಲಿ ಕಾರ್ಯದರ್ಶಿ ಡಿ.ಆರ್.ಪುಷ್ಪಾ, ಕ್ಯಾತ್ಸಂದ್ರ ಠಾಣೆ ಸಬ್‍ಇನ್ಸ್‍ಪೆಕ್ಟರ್ ರಾಮಪ್ರಸಾದ್, ಎಪಿಎಂಸಿ ಮಾಜಿ ನಿರ್ದೇಶಕ ಧನಿಯಾಕುಮಾರ್ ನೇತೃತ್ವದಲ್ಲಿ ಹುಣಿಸೇಹಣ್ಣಿನ ವ್ಯಾಪಾರಿಗಳು ಸಭೆ ನಡೆಸಿ ಚರ್ಚೆ ಮಾಡಿದರು.

    ಎಲ್ಲೆಡೆ ಕೊರೊನಾ ಸೋಂಕಿನ ಭೀತಿ ಇದೆ ವ್ಯಾಪಾರಿಗಳು ಕಡ್ಡಾಯವಾಗಿ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು, ತಮ್ಮ ಅಂಗಡಿಗೆ ಬರುವ ರೈತರಿಗೂ ಈ ಬಗ್ಗೆ ಮನವರಿಕೆ ಮಾಡಿಕೊಡುವುದು ವ್ಯಾಪಾರಿಗಳ ಜವಾಬ್ದಾರಿ. ಅಂಗಡಿಗಳ ಬಳಿ ಅನಗತ್ಯ ಗುಂಪು ಸೇರ ಕೂಡದು. ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಪಾಡುವ ವ್ಯವಸ್ಥೆ ಮಾಡಬೇಕು. ವ್ಯಾಪಾರಿಗಳೂ, ರೈತರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿ ಅಂಗಡಿಯಲ್ಲೂ ಸ್ಯಾನಿಟೈಸರ್ ಇಲ್ಲವೆ, ಕೈ ತೊಳೆಯಲು ನೀರು, ಸೋಪನ್ನು ಇಟ್ಟಿರಬೇಕು ಎಂದು ಎಪಿಎಂಸಿಯಲ್ಲಿ ಕಾರ್ಯದರ್ಶಿ ಡಿ.ಆರ್.ಪುಷ್ಪಾ ಹೇಳಿದರು.

    ಕೊರೊನಾ ಭೀತಿಯ ಕಾರಣದಿಂದ ಹಲವಾರು ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ. ಇಂಥಾ ಪರಿಸ್ಥಿತಿಯಲ್ಲೂ ಎಪಿಎಂಸಿಯಲ್ಲಿ ವ್ಯಾಪಾರಕ್ಕೆ ಅವಕಾಶ ಕೊಟ್ಟಿದ್ದು ರೈತರು, ವ್ಯಾಪಾರಿಗಳು ಎಚ್ಚರಿಕೆಯಿಂದ ವಹಿವಾಟು ನಡೆಸಬೇಕು. ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದಿದ್ದರೆ ಪರವಾನಗಿ ರದ್ದು ಮಾಡಿ, ಅಂಗಡಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಎಚ್ಚರಿಸಿದರು.

    ಎಷ್ಟು ಹೇಳಿದರೂ ರೈತರು ಅನುಸರಿಸುವುದಿಲ್ಲ, ಎಪಿಎಂಸಿಯಿಂದ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆಗಾಗ ಮೈಕಿನಲ್ಲಿ ಪ್ರಕಟಣೆ ಮಾಡಿ ರೈತರಲ್ಲಿ ಜಾಗೃತಿ ಮೂಡಿಸಿ, ಅವರನ್ನು ಎಚ್ಚರಿಸಬೇಕು ಎಂದು ಹಲವು ವ್ಯಾಪಾರಿಗಳು ಕಾರ್ಯದರ್ಶಿಯವರಿಗೆ ಹೇಳಿದರು.
ಅಂಗಡಿಗಳ ಬಳಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ವ್ಯಾಪಾರಿಗಳ ಜವಾಬ್ದಾರಿ, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಂತಹ ಕ್ರಮಗಳನ್ನು ಅನುಸರಿಸದ ವ್ಯಾಪಾರಿಗಳ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಕ್ಯಾತ್ಸಂದ್ರ ಠಾಣೆ ಸಬ್‍ಇನ್ಸ್‍ಪೆಕ್ಟರ್ ರಾಮಪ್ರಸಾದ್ ಹೇಳಿದರು. ವ್ಯಾಪಾರಿಗಳು ಇದಕ್ಕೆ ಸಮ್ಮತಿ ಸೂಚಿಸಿದರು.

     ದೂರದ ಊರುಗಳಿಂದ ಬೆಳಗಿನ ಜಾವ ಹೊರಟು ಎಪಿಎಂಸಿಗೆ ಹುಣಿಸೇಹಣ್ಣು ತರುವ ರೈತರಿಗೆ, ಇಲ್ಲಿನ ಹಮಾಲಿಗಳಿಗೆ ಜಿಲ್ಲಾಡಳಿತ ಹಾಗೂ ಎಪಿಎಂಸಿಯು ಲಾಕ್‍ಡೌನ್ ಮುಗಿಯುವ ತನಕ ಉಚಿತವಾಗಿ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಬೇಕು. ಲಾಕ್‍ಡೌನ್‍ನಿಂದಾಗಿ ಹೋಟೆಲ್‍ಗಳು ಬಂದ್ ಆಗಿವೆ, ಎಪಿಎಂಸಿ ಆವರಣದಲ್ಲಿನ ಕ್ಯಾಂಟಿನ್‍ನಲ್ಲಿ ಪಾರ್ಸಲ್ ನೀಡಲಾಗುತ್ತಿದೆಯಾದರೂ ಅಲ್ಲಿ ನೂಕುನುಗ್ಗಲಾಗಿ ಸಮಸ್ಯೆಯಾಗುತ್ತದೆ ಅಲ್ಲದೆ, ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಎಪಿಎಂಸಿ ಮಾಜಿ ನಿರ್ದೇಶಕ ಧನಿಯಾಕುಮಾರ್ ಹೇಳಿದರು.

     ಕೊರೊನಾ ಸೋಂಕಿನ ಭೀತಿ ಇರುವ ಸಂದರ್ಭದಲ್ಲಿ ನಗರ ಪಾಲಿಕೆ ನಗರದೆಲ್ಲೆಡೆ ಕ್ರಿಮಿನಾಶಕ ಸಿಂಪರಣೆ ಮಾಡುತ್ತಿದೆ. ಅದೇ ರೀತಿ ಎಪಿಎಂಸಿ ಆವರಣದಲ್ಲಿ ಕ್ರಿಮಿನಾಶಕ ಸಿಂಪರಣೆ ಮಾಡಿ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಕೈಗೊಳ್ಳಬೇಕು, ನಿಯಮಿತವಾಗಿ ಕಸ ಎತ್ತಬೇಕು, ಎಪಿಎಂಸಿ ಆರವಣದ ಹಲವೆಡೆ ಕಸದ ರಾಶಿ ಬಿದ್ದಿದೆ, ಕಸ ವಿಲೇವಾರಿ ಕಾರ್ಯವನ್ನು ಟೆಂಡರ್ ಕರೆದು ವಹಿಸಲಾಗಿದೆ, ಇಲ್ಲಿ ಸ್ವಚ್ಚತೆ ಕಾಪಾಡಲು ಅಧಿಕಾರಿಗಳು ಗಮನ ಹರಿಸಬೇಕು ಎಂದರು.

     ವ್ಯಾಪಾರಿಗಳು, ರೈತರು ಕಡ್ಡಾಯವಾಗಿ ಕೊರೊನಾ ತಡೆ ಎಚ್ಚರಿಕೆ ಕ್ರಮಗಳಗನ್ನು ಅನುಸರಿಸಬೇಕು, ಈ ಬಗ್ಗೆ ಅಧಿಕಾರಿಗಳು ಮೈಕಿನಲ್ಲಿ ಪ್ರಕಟಣೆ ನೀಡುತ್ತಾ ಜಾಗೃತಿ ಮೂಡಿಸಬೇಕು. ಸೋಂಕು ಕಾಣಿಸಿಕೊಂಡು ಎಪಿಎಂಸಿ ಬಂದ್ ಮಾಡುವ ಸಂದರ್ಭ ಬಂದರೆ ವ್ಯಾಪಾರಿಗಳಿಗೆ ಮಾತ್ರವಲ್ಲ, ರೈತರಿಗೂ ತೊಂದರೆಯಾಗುತ್ತದೆ, ರೈತರ ಹುಣಿಸೇಹಣ್ಣು, ಮತ್ತಿತರ ಉತ್ಪನ್ನವನ್ನು ಕೊಳ್ಳುವವರೇ ಇಲ್ಲದಂತಾಗುತ್ತದೆ ಎಂದು ಧನಿಯಾಕುಮಾರ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link