ವಿಳಂಬವಾದರೆ ಅಧಿಕಾರಿಗಳಿಗೆ ದಂಡ;ಮಥಾಯ್

 ಚಿತ್ರದುರ್ಗ

        ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ಸರ್ಕಾರಿ ಸೇವೆಯನ್ನು ಖಾತ್ರಿಯಾಗಿ ನೀಡುವ ಸಲುವಾಗಿ ಸರ್ಕಾರ ಸಕಾಲ ಸೇವೆಗಳ ಅಧಿನಿಯಮ 2011 ಅನ್ನು ಜಾರಿಗೊಳಿಸಿದ್ದು, ವಿವಿಧ ಇಲಾಖೆಗಳಡಿ ಸಕಾಲ ಯೋಜನೆಯಡಿ ನೀಡುವ ಸೇವೆಯಲ್ಲಿ ವಿಳಂಬ ಮಾಡುವ ಅಧಿಕಾರಿ, ಸಿಬ್ಬಂದಿಗಳಿಗೆ ಇನ್ನು ಮುಂದೆ ದಂಡ ವಿಧಿಸಲಾಗುವುದು ಎಂದು ಕರ್ನಾಟಕ ಸಕಾಲ ಮಿಷನ್‍ನ ಆಡಳಿತಾಧಿಕಾರಿ ಕೆ. ಮಥಾಯ್ ಅವರು ಎಚ್ಚರಿಸಿದ್ದಾರೆ

        ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಕಾಲ ಯೋಜನೆಯಡಿ ಜಿಲ್ಲೆಯಲ್ಲಿ ಅರ್ಜಿಗಳ ವಿಲೇವಾರಿ, ಬಾಕಿ ಇರುವ ಅರ್ಜಿಗಳ ಕುರಿತು ಶನಿವಾರ ಏರ್ಪಡಿಸಲಾದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

         ಸಕಾಲ ಯೋಜನೆಯಡಿ ರಾಜ್ಯದ 72 ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 894 ಬಗೆಯ ಸೇವೆಗಳನ್ನು ಸಮಯಬದ್ಧವಾಗಿ ನಾಗರಿಕರಿಗೆ ನೀಡುವ ವ್ಯವಸ್ಥೆ ರಾಜ್ಯದಲ್ಲಿ ಜಾರಿಯಲ್ಲಿದೆ. ಜಿಲ್ಲೆಗಳಿಗೆ ಭೇಟಿ ನೀಡಿ, ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿ, ಬಾಕಿ ಇರುವ ಅರ್ಜಿಗಳ ಕುರಿತು ಪರಿಶೀಲನೆ, ಸಕಾಲ ಸೇವೆಯಡಿ ಅತಿ ಹೆಚ್ಚು ಬಾಕಿ ಇರುವ ಕಚೇರಿಗಳಿಗೆ ಖುದ್ದು ಭೇಟಿ ನೀಡಿ, ತಪಾಸಣೆ ಕೈಗೊಳ್ಳಲಾಗುತ್ತಿದೆ. ಸಕಾಲ ಯೋಜನೆ ಜಾರಿಗೊಳಿಸಿ ಸುಮಾರು 7 ವರ್ಷಗಳು ಕಳೆದಿದ್ದರೂ, ವಿವಿಧ ಇಲಾಖೆಗಳು ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು

          ಬಹಳಷ್ಟು ಇಲಾಖೆಗಳ ಕಚೇರಿಗಳಲ್ಲಿ ಸಕಾಲ ಯೋಜನೆಯಡಿ ನೀಡುವ ಸೇವೆಗಳು, ಸಕ್ಷಮ ಪ್ರಾಧಿಕಾರ, ಮೇಲ್ಮನವಿ ಪ್ರಾದಿಕಾರದ ವಿವರವುಳ್ಳ ಫಲಕವನ್ನು ಹಾಕಿಲ್ಲ. ಅಲ್ಲದೆ ಸಕಾಲ ಕೌಂಟರ್‍ಗಳನ್ನು ತೆರೆದಿಲ್ಲ. ಸರ್ಕಾರ ಸಾರ್ವಜನಿಕರಿಗೆ ನೀಡುವ ಸೇವೆಯನ್ನು ನಿಗದಿತ ಅವಧಿಯೊಳಗೆ ನೀಡುವ ಸಲುವಾಗಿಯೇ ಈ ಯೋಜನೆ ಪ್ರಾರಂಭಿಸಿ, ಇದಕ್ಕೆ ಕಾಯ್ದೆ ರೂಪದಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಜನರಿಗೆ ಸೇವೆ ಪಡೆಯಲು ಹಕ್ಕು ನೀಡಿದೆ. ಆದರೆ ಕೆಲವು ಮಹತ್ವದ ಇಲಾಖೆಗಳೇ ಸಾರ್ವಜನಿಕರ ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸದೆ, ಮದ್ಯವರ್ತಿಗಳ ಮೂಲಕ, ಇತರೆ ಮಾರ್ಗದ ಮೂಲಕ ಸ್ವೀಕರಿಸಿ, ವಿಲೇವಾರಿ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಡುತ್ತಿವೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು

          ಸಕಾಲ ಸೇವೆ ಕಾಯ್ದೆಯನ್ವಯ ನಿಗದಿತ ಅವಧಿಯೊಳಗೆ ಅರ್ಜಿ ವಿಲೇವಾರಿ ಮಾಡದಿದ್ದಲ್ಲಿ, ದಿನವೊಂದಕ್ಕೆ 20 ರೂ. ದಂಡವನ್ನು ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಯ ವೇತನದಿಂದ ಕಡಿತಗೊಳಿಸಿ, ಅರ್ಜಿದಾರರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಮುಂದೆ, ವಿಳಂಬ ಧೋರಣೆ ಪ್ರದರ್ಶಿಸುವ ಅಧಿಕಾರಿ, ಸಿಬ್ಬಂದಿಗಳಿಗೆ ದಂಡ ವಿಧಿಸಲು ಹಿಂಜರಿಯುವುದಿಲ್ಲ ಎಂದು ಕೆ. ಮಥಾಯ್ ಅವರು ಎಚ್ಚರಿಕೆ ನೀಡಿದರು.

ಸೇವೆ ಪ್ರಾರಂಭಿಸದ ಇಲಾಖೆಗಳು :

          ಸಕಾಲ ಮಿಷನ್ ಯೋಜನೆಯಡಿ ಲೋಕೋಪಯೋಗಿ ಇಲಾಖೆಯು ಸಾರ್ವಜನಿಕರಿಗೆ 34 ಬಗೆಯ ಸೇವೆಯನ್ನು ನಿಗದಿತ ಅವಧಿಯೊಳಗೆ ಒದಗಿಸಬೇಕಿರುತ್ತದೆ. ಆದರೆ ಸಕಾಲ ಯೋಜನೆ ಆರಂಭವಾಗಿ 7 ವರ್ಷಗಳೇ ಆಗಿದ್ದರೂ, ಚಿತ್ರದುರ್ಗದ ಲೋಕೋಪಯೋಗಿ ಇಲಾಖೆಯ ಕಚೇರಿಗಳಲ್ಲಿ ಸಕಾಲ ಯೋಜನೆಯನ್ನೇ ಪ್ರಾರಂಭಿಸಿಲ್ಲ ಎಂದು ಅವರು ತಿಳಿಸಿದರು

          ಅದೇ ರೀತಿ ಆಯುಷ್ ಇಲಾಖೆಯಲ್ಲಿಯೂ ಇದೇ ಪರಿಸ್ಥಿತಿ ಇದೆ. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಕಾಲ ಮಿಷನ್ ಆಡಳಿತಾಧಿಕಾರಿಗಳು, ಸರ್ಕಾರ ಸಾರ್ವಜನಿಕರಿಗೆ ಸೇವೆ ನೀಡುವ ಖಾತ್ರಿ ಒದಗಿಸಿದ್ದರೂ, ಯೋಜನೆಯನ್ನು ಅನುಷ್ಠಾನಗೊಳಿಸದೆ, ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. ಎರಡು ದಿನಗಳ ಒಳಗಾಗಿ ಸಕಾಲ ಸೇವೆ ಯೋಜನೆ ಪ್ರಾರಂಭಿಸಲೇಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಂದಾಯ ಇಲಾಖೆಯಲ್ಲಿ ಹೆಚ್ಚು ಬಾಕಿ :

          ಸಾರ್ವಜನಿಕರಿಗೆ ಬಹಳಷ್ಟು ಸೇವೆಯನ್ನು ಒದಗಿಸುವ ಮಹತ್ವದ ಇಲಾಖೆಯೆಂದರೆ ಅದು ಕಂದಾಯ ಇಲಾಖೆ. ಈ ಕಂದಾಯ ಇಲಾಖೆಯಲ್ಲಿ ನಿತ್ಯವೂ ನೂರಾರು ಅರ್ಜಿಗಳು ಸ್ವೀಕೃತಗೊಳ್ಳುತ್ತವೆ.ಚಿತ್ರದುರ್ಗ ತಾಲ್ಲೂಕು ಒಂದರಲ್ಲಿಯೇ 33203 ಅರ್ಜಿಗಳನ್ನು ನಿಗದಿತ ಕಾಲಮಿತಿಗಿಂತ ಹೆಚ್ಚು ವಿಳಂಬವಾಗಿ ವಿಲೇವಾರಿ ಮಾಡಿರುವುದು ಕಂಡು ಬಂದಿದೆ. ಅದೇ ರೀತಿ ಚಳ್ಳಕೆರೆ ತಾಲ್ಲೂಕಿನಲ್ಲಿ 23838 ಅರ್ಜಿಗಳನ್ನು ವಿಳಂಬವಾಗಿ ವಿಲೇವಾರಿ ಮಾಡಿರುವುದು ಕಂಡುಬಂದಿದೆ. ಇನ್ನು ತಹಸಿಲ್ದಾರರ ಕಚೇರಿಗಳಲ್ಲಿಯೇ ಹೆಚ್ಚು ವಿಳಂಬ ಮಾಡಲಾಗುತ್ತಿದೆ ಇನ್ನು ಮುಂದೆ ಇಂತಹ ವಿಳಂಬಕ್ಕೆ ಅಧಿಕಾರಿಗಳು ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

       ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ ಅವರು, ಒಂದು ವಾರದ ಒಳಗಾಗಿ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಕಾಲ ಯೋಜನೆ ಕುರಿತು, ಆಯಾ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನೀಡುವ ಸೇವೆಗಳು, ಸಕ್ಷಮ ಪ್ರಾಧಿಕಾರ, ಮೇಲ್ಮನವಿ ಪ್ರಾಧಿಕಾರದ ಸಮಗ್ರ ವಿವರವುಳ್ಳ ಪ್ರದರ್ಶನ ಫಲಕವನ್ನು ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಹಾಕಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

         ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಮಾತನಾಡಿ, ಈಗಾಗಲೆ ಜಿಲ್ಲೆಯಲ್ಲಿ ಎಲ್ಲ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಸಕಾಲ ರ್ಯಾಂಕಿಂಗ್‍ನಲ್ಲಿ ಚಿತ್ರದುರ್ಗ ಜಿಲ್ಲೆ ವಿವಿಧ ಜಿಲ್ಲೆಗಳಿಗೆ ಹೋಲಿಸಿದಾಗ, ಉತ್ತಮ ಸ್ಥಿತಿಯಲ್ಲಿದೆ. ಅಧಿಕಾರಿಗಳು ಎಲ್ಲ ಅರ್ಜಿಗಳನ್ನು ಸಕಾಲ ಯೋಜನೆಯಡಿಯೇ ಸ್ವೀಕರಿಸಬೇಕು. ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು. ಸಕಾಲ ಯೋಜನೆ ಕುರಿತ ಪ್ರದರ್ಶನ ಫಲಕ ಅಳವಡಿಸಬೇಕು ಎಂದು ತಿಳಿಸಿದರು ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಸವರಾಜ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link