ಹರಪನಹಳ್ಳಿ:
ತೋಟಗಾರಿಕೆ ಬೆಳೆ ಗೇರು (ಗೋಡಂಬಿ) ಬೆಳೆ ಸಸಿ ಒಣಗಲಾರಂಭಿಸಿದ್ದು, ತಾಲ್ಲೂಕಿನ ಯರಬಾಳು ಗ್ರಾಮದಲ್ಲಿ ರೈತರೊಬ್ಬರಿಗೆ ಆತಂಕ ತಂದಿದೆ.
ರೈತ ಪಾಲಾಕ್ಷಪ್ಪ ಬಣಕಾರ ತಮಗೆ ಸೇರಿದ 2.80 ಎಕರೆ ಜಮೀನಿನಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ತೋಟಗಾರಿಕೆ ಇಲಾಖೆಯಿಂದ 200 ಅಗಿ ಹಾಗೂ ಪ್ರತಿ ಸಸಿಗೆ 50 ರಂತೆ 300 ಅಗಿ ಖರೀದಿಸಿ ಒಟ್ಟು 500 ಅಗಿಗಳನ್ನು ಹಚ್ಚಿದ್ದರು. ಆದರೆ ದಿನದಿಂದ ದಿನಕ್ಕೆ ಸಮೃದ್ಧವಾಗಿ ಬೆಳೆಯ ಬೇಕಾಗಿದ್ದ ಗೇರು ಒಣಗುತ್ತಿರುವುದು ಅವರಿಗೆ ನಷ್ಟದ ಭೀತಿ ಎದುರಾಗಿದೆ.
`ತೋಟಗಾರಿಕೆ ಇಲಾಖೆಯ ಮಾಹಿತಿ ಮೇರೆಗೆ ಗೇರು ಬೆಳೆಯಲು ಮುಂದಾಗಿದ್ದೆ. ಸದ್ಯ 500 ಅಗಿಗಳಲ್ಲಿ ಅರ್ಧರಷ್ಟು ಸಸಿಗಳು ಬಾಡಲು ಆರಂಭಿಸಿವೆ. ಬೇರು ಮಟ್ಟದಿಂದಲೇ ಒಣಗಿ ಸಂಪೂರ್ಣವಾಗಿ ಸಾಯುತ್ತೀವೆ. ಸುಮಾರು 2 ಲಕ್ಷದಷ್ಟು ನಷ್ಟ ಸಂಭವಿಸಿದೆ. ಹೀಗಾಗಿ ಗೇರು ಗಿಡಗಳ ಮಧ್ಯ ಬಾಳೆ ಕೃಷಿಗೆ ಮುಂದಾಗಿದ್ದೇನೆ’ ಎಂದು ಪಾಲಾಕ್ಷಪ್ಪ ಹೇಳಿದರು.
`ಹರಪನಹಳ್ಳಿ ತಾಲ್ಲೂಕಿನಲ್ಲಿ ಗೇರು ಬೆಳೆಗೆ ಉತ್ತಮ ವಾತಾವರಣವಿದೆ. ಒಟ್ಟು 30 ಹೆಕ್ಟೇರ್ ಪ್ರದೇಶದಲ್ಲಿ ವೆಂಗೂರ್ಲಾ ತಳಿಯ ಗೇರು ಬೆಳೆಯಲಾಗಿದೆ. ತಾಲ್ಲೂಕಿಗೆ ಇದು ಹೊಸ ಬೆಳೆ ಆಗಿರುವುದರಿಂದ ಇಲ್ಲಿನ ಪ್ರದೇಶಕ್ಕೆ ಹೊಂದಿಕೊಳ್ಳಲು ಸಮಯ ಬೇಕು. ಭೂಮಿಯ ಕಾವು ಹೆಚ್ಚಾದಾಗ ಗಿಡಕ್ಕೆ ಹಾನಿ ಆಗುವ ಸಾಧ್ಯತೆಯಿದೆ. ಬೆಂಗಳೂರಿನ ನರ್ಸರಿ ಪ್ಲಾಂಟ್ ನಿಂದ ತಂದು ಎಲ್ಲ ರೈತರಿಗೆ ನೀಡಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕಿ ಟಿ.ಆರ್.ಶಶಿಕಲಾ ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ