ಬೆಂಗಳೂರು
ಮಾರಣಾಂತಿಕ ಮಂಗನ ಕಾಯಿಲೆ ರಾಜ್ಯದಲ್ಲಿ ಪುನ: ಕಾಣಿಸಿಕೊಂಡಿದ್ದು ತಕ್ಷಣವೇ ಇದರ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಸೋಮವಾರದಿಂದ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ನಡೆಸುವುದಾಗಿ ಬಿಜೆಪಿ ಇಂದಿಲ್ಲಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಚಿವ,ಶಾಸಕ ಹರತಾಳು ಹಾಲಪ್ಪ ಈ ವಿಷಯ ತಿಳಿಸಿದರಲ್ಲದೆ,ಸಾಗರ ತಾಲ್ಲೂಕಿನಲ್ಲಿ ನಲವತ್ತೈದು ವರ್ಷಗಳ ನಂತರ ಮಂಗನ ಕಾಯಿಲೆ ಮತ್ತೆ ಕಾಣಿಸಿಕೊಂಡಿದ್ದು ನಾಲ್ಕು ಜನರನ್ನು ಬಲಿಪಡೆದುಕೊಂಡಿದೆ.ಐದನೆಯ ರೋಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದರು.
ಇದೇ ರೀತಿ ಇನ್ನೂ ಹಲವರಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು ನಲವತ್ತೈದು ವರ್ಷಗಳ ಹಿಂದೆ ಈ ಕಾಯಿಲೆ ಕಾಣಿಸಿಕೊಂಡಾಗ ಅಲ್ಲಿ ಪ್ರತ್ಯೇಕ ವೈದ್ಯಕೀಯ ಘಟಕವನ್ನು ಸ್ಥಾಪಿಸಿ ರೋಗವನ್ನು ನಿರ್ಮೂಲನೆ ಮಾಡಲಾಗಿತ್ತು.
ಆದರೆ ಈಗ ಮರಳಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು ಮಂಗಗಳು ಇರುವಲ್ಲೆಲ್ಲ ಹಬ್ಬುತ್ತಿದೆ.ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಇದು ಹಬ್ಬುತ್ತಿದ್ದು ತಕ್ಷಣವೇ ಇದನ್ನು ನಿಯಂತ್ರಿಸದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಎಚ್ಚರಿಸಿದರು.ಈ ಸಂಬಂಧ ರಾಜ್ಯದ ಆರೋಗ್ಯ ಸಚಿವರನ್ನು ಸಂಪರ್ಕಿಸಲು ಯತ್ನಿಸಿದರೆ ಅವರು ಸಿಗುತ್ತಿಲ್ಲ.ಆರೋಗ್ಯ ಇಲಾಖೆಯ ಪ್ರಮುಖ ಅಧಿಕಾರಿಗಳೂ ಸಿಗುತ್ತಿಲ್ಲ.ಈಗಲೂ ನಾನು ಮುಖ್ಯಮಂತ್ರಿಗಳ ಭೇಟಿಗೆ ಯತ್ನಿಸುತ್ತಿದ್ದೇನೆ.ಒಂದು ವೇಳೆ ಅವರು ಸಿಗದಿದ್ದರೆ,ನಮ್ಮ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡದಿದ್ದರೆ ಸೋಮವಾರದಿಂದ ಅವರ ನಿವಾಸದ ಮುಂದೆ ಧರಣಿ ನಡೆಸುವುದಾಗಿ ಹೇಳಿದರು.
ಶಿವಮೊಗ್ಗದಲ್ಲಿರುವ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ.ಕೇಳಿದರೆ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಚೀಟಿ ಬರೆದು ಕೊಡುತ್ತಾರೆ.ಆ ಕೆಲಸವನ್ನು ಸಾಗರದ ಸರ್ಕಾರಿ ಆಸ್ಪತ್ರೆ ವತಿಯಿಂದಲೇ ಮಾಡಿಸುತ್ತೇವೆ.
ಆದರೆ ರೋಗದ ಮೂಲವನ್ನು ಪತ್ತೆ ಮಾಡಲು ಸಾಗರ ಹಾಗೂ ಶಿವಮೊಗ್ಗದಲ್ಲಿ ಪ್ರತ್ಯೇಕ ಲ್ಯಾಬ್‍ಗಳನ್ನು ಸ್ಥಾಪಿಸಬೇಕು.ಈಗ ರೋಗದ ಲಕ್ಷಣ ಕಂಡರೆ ರಕ್ತ ಪರೀಕ್ಷೆ ಪುಣೆಯಲ್ಲಿ ನಡೆಯಬೇಕು.ಹಾಗಾಗದೆ ತಕ್ಷಣವೇ ಅದನ್ನು ಪತ್ತೆ ಮಾಡುವ ಕೆಲಸವಾದರೆ ಜನರಿಗೆ ಅನುಕೂಲವಾಗುತ್ತದೆ .
ಇದೇ ರೀತಿ ರೋಗದ ವಿವಿಧ ಆಯಾಮಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು.ಇಲ್ಲದೇ ಹೋದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ.ಅದೇ ರೀತಿ ಚಳಿಗಾಲ ಮುಗಿದ ಮೇಲೆ ರೋಗ ವ್ಯಾಪಕವಾಗಿ ಹರಡುವುದರಿಂದ ಈ ವಿಷಯದಲ್ಲಿ ಸರ್ಕಾರ ಯಾವ ಕಾರಣಕ್ಕೂ ನಿರ್ಲಕ್ಷ್ಯ ತೋರಕೂಡದು ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ