ತುಮಕೂರು
ತುಮಕೂರು ಮಹಾನಗರ ಪಾಲಿಕೆ ಸುಪರ್ದಿನ ಚಾಲನೆಯಲ್ಲಿರುವ 22 ಶುದ್ಧ ಕುಡಿಯುವ ನೀರಿನ ಘಟಕ (ಆರ್.ಓ. ಪ್ಲಾಂಟ್ಸ್)ಗಳಿಂದ ಮಹಾನಗರ ಪಾಲಿಕೆಗೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಒಟ್ಟು 7,81,987 ರೂ.ಗಳು ಸಂಗ್ರಹವಾಗಿದೆ.
ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಸರ್ಕಾರಿ ಏಜೆನ್ಸಿಗಳಿಂದ ಸ್ಥಾಪಿತವಾಗಿದ್ದ ನೀರಿನ ಘಟಕಗಳನ್ನು ಮಹಾನಗರ ಪಾಲಿಕೆಯ ಆಯುಕ್ತ ಟಿ.ಭೂಬಾಲನ್ ಅವರು ಮೇ 8 ರಂದು ಅಧಿಕೃತವಾಗಿ ಪಾಲಿಕೆಯ ವಶಕ್ಕೆ ಪಡೆದಿದ್ದು, ಅಂದಿನಿಂದ ಕೇವಲ ಒಂದು ತಿಂಗಳ ಅಲ್ಪ ಅವಧಿಯಲ್ಲೇ ಪಾಲಿಕೆಗೆ ಇಷ್ಟೊಂದು ದೊಡ್ಡ ಮೊತ್ತದ ಸಂಪನ್ಮೂಲ ಸಂಗ್ರಹವಾಗಿರುವುದು ಪಾಲಿಕೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದ್ದು, ಭಾರಿ ಗಮನ ಸೆಳೆಯಲಾರಂಭಿಸಿದೆ.
ಎಲ್ಲೆಲ್ಲಿ-ಎಷ್ಟೆಷ್ಟು ಸಂಗ್ರಹ?
ನಗರದ ವಿವಿಧ ವಾರ್ಡ್‍ಗಳ ಪ್ರತಿ ನೀರಿನ ಘಟಕಗಳಲ್ಲಿ ಮೇ 8 ರಿಂದ ಈವರೆಗೆ ಒಂದು ತಿಂಗಳ ಅವಧಿಯಲ್ಲಿ ಸಂಗ್ರಹವಾಗಿರುವ ಮೊತ್ತ ಈ ಕೆಳಗಿನಂತಿದೆ:-
2 ನೇ ವಾರ್ಡ್‍ನ ಶಿರಾಗೇಟ್-25,489 ರೂ., 6 ನೇ ವಾರ್ಡನ ಭೀಮಸಂದ್ರ ಹಳೆ ಗ್ರಾಮ- 28,465 ರೂ., 6 ನೇ ವಾರ್ಡ್ ನ ದಿಬ್ಬೂರು ಗ್ರಾಮದ ಬಸ್ ನಿಲ್ದಾಣದ ಬಳಿ- 47,215 ರೂ., 9 ನೇ ವಾರ್ಡ್‍ನ ಹೌಸಿಂಗ್ ಬೋರ್ಡ್ ಕಾಲೋನಿ- 24,036 ರೂ., 11 ನೇ ವಾರ್ಡ್‍ನ ಮೆಳೆಕೋಟೆ- 33,207 ರೂ., 13 ನೇ ವಾರ್ಡ್‍ನ ಕುರಿಪಾಳ್ಯ ಮುಖ್ಯರಸ್ತೆ- 43,048 ರೂ., 18 ನೇ ವಾರ್ಡ್‍ನ ಶಾಂತಿನಗರದ ಜಗಜ್ಯೋತಿ ರಸ್ತೆ- 37,270 ರೂ., 19 ನೇ ವಾರ್ಡ್‍ನ ಎನ್.ಆರ್.ಕಾಲೋನಿ ಸರ್ಕಾರಿ ಶಾಲೆ ಆವರಣ- 55,385 ರೂ., 21 ನೇ ವಾರ್ಡ್‍ನ ಹನುಮಂತಪುರ ಪಾರ್ಕ್- 37,950 ರೂ., 22 ನೇ ವಾರ್ಡ್‍ನ ಭಾರತಿ ನಗರ- 29,080 ರೂ., 23 ನೇ ವಾರ್ಡ್‍ನ ಸತ್ಯಮಂಗಲದ ಅರಳಿಮರದ ಹತ್ತಿರ- 6575 ರೂ., 23 ನೇ ವಾರ್ಡ್‍ನ ಜಗನ್ನಾಥಪುರ- 7,050 ರೂ., 23 ನೇ ವಾರ್ಡ್‍ನ ಪುಟ್ಟಸ್ವಾಮಯ್ಯನ ಪಾಳ್ಯ- 30,355 ರೂ., 24 ನೇ ವಾರ್ಡ್‍ನ ಸರ್ಕಾರಿ ಉರ್ದುಶಾಲೆ ಹತ್ತಿರ- 40,945 ರೂ., 24 ನೇ ವಾರ್ಡ್ ನ ಚೆನ್ನಪ್ಪನಪಾಳ್ಯ- 61,015 ರೂ., 29 ನೇ ವಾರ್ಡ್‍ನ ಮರಳೂರು ದಿಣ್ಣೆ ಮೊದಲನೇ ಕ್ರಾಸ್ ಓವರ್‍ಹೆಡ್ ಟ್ಯಾಂಕ್ ಬಳಿ- 19,556 ರೂ., 31 ನೇ ವಾರ್ಡ್‍ನ ಎಚ್.ಎಂ.ಎಸ್. ಕಾಲೇಜು ಪಂಪ್‍ಹೌಸ್ ಬಳಿ- 17,701 ರೂ., 32 ನೇ ವಾಡ್‍ನ ಶೆಟ್ಟಿಹಳ್ಳಿ ದೇವಸ್ಥಾನದ ಹಿಂಭಾಗ- 36,728 ರೂ., 33 ನೇ ವಾರ್ಡ್‍ನ ಚಂದ್ರಮೌಳೀಶ್ವರ ಬಡಾವಣೆಯ ಓವರ್‍ಹೆಡ್ ಟ್ಯಾಂಕ್- 50,341 ರೂ., 33 ನೇ ವಾರ್ಡ್‍ನ ಕ್ಯಾತಸಂದ್ರ ಶಾಲೆ ಆವರಣ- 56,581 ರೂ., 35 ನೇ ವಾರ್ಡ್‍ನ ದೇವರಾಯಪಟ್ಟಣದ ಅಂಬೇಡ್ಕರ್ ಭವನದ ಹತ್ತಿರ- 15,700 ರೂ., 8 ನೇ ವಾರ್ಡ್‍ನ ಪಿ.ಜಿ.ಲೇಔಟ್- 28,145 ರೂ. ಸಂಗ್ರಹವಾಗಿದೆ. ಇವೆಲ್ಲರ ಒಟ್ಟಾರೆ ಮೊತ್ತ 7,81,987 ರೂ. ಆಗಲಿದೆ.
“ಕೇವಲ ಒಂದು ತಿಂಗಳ ಅವಧಿಯಲ್ಲಿ 22 ನೀರಿನ ಘಟಕಗಳಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪಾಲಿಕೆಗೆ ಸಂಪನ್ಮೂಲ ಸಂಗ್ರಹ ಆಗಿರುವುದು ಬಹುದೊಡ್ಡ ಸಾಧನೆಯಾಗಿದೆ. ಆದರೆ ಇದಕ್ಕೆ ಮೊದಲು ಕಳೆದ ಒಂದೆರಡು ವರ್ಷಗಳಿಂದ ಕಾರ್ಯನಿರ್ವಹಿಸು ತ್ತಿರುವ ಈ ಘಟಕಗಳಿಂದ ಸಂಗ್ರಹವಾಗುತ್ತಿದ್ದ ಹಣ ಎಲ್ಲಿ ಹೋಯಿತು?” ಎಂಬ ಪ್ರಶ್ನೆಯನ್ನು ಈ ಪ್ರಸಂಗ ಹುಟ್ಟುಹಾಕಿದೆ.