ಸಮಾಜಿಕ ಜಾಲಾತಾಣದ ಮೂಲಕ ಮದ್ಯ ಮಾರಾಟ :ಓರ್ವನ ಬಂಧನ

ಬೆಂಗಳೂರು

     ಲಾಕ್‌ಡೌನ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ದುಬಾರಿ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

     ಕಿರಣ್ (28) ಬಂಧಿತ ಆರೋಪಿಯಾಗಿದ್ದಾನೆ, ಆರೋಪಿ ಇನ್ಟ್ಸಾಗ್ರಾಮ, ಫೆಸ್ ಬುಕ್ ಮತ್ತಿತರ ಸೋಷಿಯಲ್ ನೆಟ್ ವರ್ಕ್ ಬಳಸಿ ತನ್ನಲ್ಲಿರುವ ಮದ್ಯದ ಬಾಟಲ್‌ನ ಚಿತ್ರ ಹಾಕಿ ಲಾಕ್‌ಡೌನ್ ಇರುವ ಸಂದರ್ಭ ಬಳಸಿ ಕೊಂಡು ಮದ್ಯ ಪ್ರಿಯರಲ್ಲಿ ಆಸೆ ಹುಟ್ಟಿಸುತ್ತಿದ್ದ. ಒಂದಕ್ಕೆ ಮೂರು ಪಟ್ಟು ಬೆಲೆ ನಿಗದಿ ಮಾಡುತ್ತಿದ್ದ, ತರುವಾಯು ಮದ್ಯದ ಬಾಟಲ್ ಖರೀದಿಗೆ ಬರುತ್ತಿದ್ದ ಬೇಡಿಕೆ ಕರೆಗಳ ಆಧಾರದ ಮೇಲೆ ಬೆಲೆ ಏರಿಸುತ್ತಿದ್ದ.

      ಗಿರಾಕಿ ಕುದುರಿದ ಮೇಲೆ ಹಣ ಪಡೆಯುವ ಸಲುವಾಗಿ ಸ್ವತಃ ಈತ ಬರುತ್ತಿರಲಿಲ್ಲ ಹಾಗೂ ಮಾರಾಟಕ್ಕೂ ಮುನ್ನ ಗಿರಾಕಿಗೂ ಬಾಟಲ್ ತೋರಿಸುತ್ತಿರಲಿಲ್ಲ, ಗೂಗಲ್ ಪೇ, ಫೋನ್ ಪೇ ಇತ್ಯಾದಿ ಆಪ್ ಮೂಲಕ ಹಣ ಹಾಕಿಸಿಕೊಳ್ಳತ್ತಿದ್ದ ನಂತರ ಬಾಟಲ್ ಒದಗಿಸುತ್ತಿದ್ದ. ಬಾಟಲ್ ಒದಗಿಸುತ್ತಿದ್ದ ರೀತಿ ಇನ್ನೂ ಕುತೂಹಲಕಾರಿಯಾಗಿರುತ್ತಿತ್ತು.

     ಆರೋಪಿ ಹೆಚ್ಚಾಗಿ ವಿಜಯನಗರ, ಆರ್‍ಪಿಸಿ ಲೇಔಟ್ ಪ್ರದೇಶವನ್ನು ಡೆಲಿವರಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದ. ಆ ಪ್ರದೇಶದ ಹೆಸರಾಂತ ಹೊಟೇಲ್, ಬಾರ್ ಮುಂತಾದ ಸ್ಥಳಗಳಾಗಿರುತ್ತಿದ್ದವು. ದ್ವಿಚಕ್ರ ವಾಹನದಲ್ಲಿ ಅಲ್ಲಲ್ಲಿ ಓಡಾಡಿ ಯಾವುದೇ ತೊಂದರೆ, ಖಚಿತವಾಗಿ ಜನರಿಲ್ಲ ನಿರ್ಜನ ಪ್ರದೇಶ ಎಂದು ಮನದಟ್ಟು ಮಾಡಿಕೊಳ್ಳುತ್ತಿದ್ದ.

    ಗುರುತಿಸಲಾದ ಜಾಗದ ಆಸುಪಾಸಿನಲ್ಲಿ ಪ್ಯಾಕ್ ಮಾಡಲಾದ ಬಾಟಲ್ ಇಡುತ್ತಿದ್ದ. ಅದರ ಮೇಲೆ ಹಳೇ ದಿನಪತ್ರಿಕೆ ಹೊದಿಸಿ ಅದರ ಮೇಲೆ ಪತ್ರಿಕೆ ಹಾರಿ ಹೋಗದೆ ಇರುವಂತೆ ಕಲ್ಲು ಇಡುತ್ತಿದ್ದ. ನಂತರ ದೂರದ ಪ್ರದೇಶಲ್ಲಿರುವ ಗಿರಾಕಿಗೆ ಗೂಗಲ್ ಲೊಕೇಷನ್ ಕಳುಹಿಸಿ, ಬಾಟಲ್ ತೆಗೆದುಕೊಳ್ಳಲು ಹೇಳುತ್ತಿದ್ದ.

     ಬಾಟಲ್ ಇಡಲಾದ ಸ್ಥಳದಿಂದ ಅನತಿ ದೂರದಲ್ಲಿ ಪಾರ್ಕ್ ಹಿಂಭಾಗ ಅಥವಾ ಗಲ್ಲಿಗಳಲ್ಲಿ ನಿಂತು ಗಮನಿಸುತ್ತಿದ್ದ. ಗಿರಾಕಿ ಒಬ್ಬರೇ ಬಂದು ಬಾಟಲ್ ತೆಗೆದುಕೊಂಡು ಹೋದದ್ದನ್ನು ನೋಡಿಕೊಂಡು ಅಲ್ಲಿಂದ ಹೊರಟು ಹೋಗುತ್ತಿದ್ದ. ಈ ಕುರಿತು ಅಬಕಾರಿ ಇಲಾಖೆಗೆ ಮಾಹಿತಿ ಬರುತ್ತಿದ್ದಂತೆ ತಂಡ ರಚನೆ ಮಾಡಿ ಗಿರಾಕಿಗಳಂತೆ ನಟಿಸಿ ಈತನ ಬಳಿ ಮಾತನಾಡಿ ಹಣ ಪಾವತಿ ಮಾಡುವ ಸಂದರ್ಭಕ್ಕೆ ರೇಟ್ ಏರಿಸಿಬಿಟ್ಟಿದ್ದ.

     ಸದರಿ ಬಾಟಲ್‌ಅನ್ನು ಬೇರೆಯವರಿಗೆ ಬಿಕರಿ ಮಾಡಿ ಬಿಟ್ಟಿದ್ದ. ಮತ್ತೆ ಕಾಯುತ್ತಿದ್ದಾಗ ಎರಡು ದಿನ ನಂತರ ಇನ್ಸ್ಟಾಗ್ರಾಮ್‌ನಲ್ಲಿ ಮತ್ತೊಂದು ಬಾಟಲ್ ಫೋಟೋ ಹಾಕಿದ್ದ. ಬೆಲೆ ಕುದುರಿಸುವ ವೇಳೆಗೆ ಸಂಶಯ ಬಂದು ವ್ಯವಹಾರ ನಿಲ್ಲಿಸಿಬಿಟ್ಟಿದ್ದ. ಮಾತನಾಡುವ ಮುನ್ನಾ ನಂಬರನ್ನು ಟ್ರೂ ಕಾಲರ್‍ನಲ್ಲಿ ಚೆಕ್ ಮಾಡಿ ಹೆಸರು ಮತ್ತು ಮಾಹಿತಿ ಖಚಿತ ಪಡಿಸಿಕೊಳ್ಳುತ್ತಿದ್ದ. ಅಧಿಕಾರಿಗಳು ಅಥವಾ ಅಬಕಾರಿ ಇಲಾಖೆ ಹೆಸರು ಆಪ್ ನಲ್ಲಿ ತೋರಿಸಿದರೆ ವ್ಯವಹಾರ ನಿಲ್ಲಿಸಿ ಫೋನ್ ಸ್ವಿಚ್ ಆಫ್ ಮಾಡುತ್ತಿದ್ದ.

   ಕೊನೆಗೆ ಅಬಕಾರಿ ಉಪ ಆಯುಕ್ತರು ಬೇರೆ ನಂಬರ್‍ನಿಂದ ಕಾಲ್ ಮಾಡಿ ಉತ್ತರ ಭಾರತೀಯ ಎಂದು ಪರಿಚಯಿಸಿಕೊಂಡಿದ್ದರು. ಕಾಲ್ ಮಾಡುವಾಗ ಕಚೇರಿ ಅಥವಾ ಪೊಲೀಸ್ ಠಾಣೆ ಸಮೀಪದ ಲೊಕೇಷನ್ ಬಳಸದೆ ಎಚ್ಚರಿಕೆಯಿಂದ ತಮ್ಮ ಮನೆಯ ಸಮೀಪದ ಲೋಕೇಶನ್ ಕಳುಹಿಸಿ ಮಾತನಾಡಿ ವ್ಯವಹಾರ ಕುದುರಿಸಿದರು.

    ಗೂಗಲ್ ಪೇ ಮೂಲಕ ಹಣ ಪಾವತಿಸಿ ಈತ ಹೇಳಿದಂತೆ ಮಾಗಡಿ ರಸ್ತೆಯ ಕೆಎಚ್‌ಬಿ ಕಾಲೋನಿಯ ಹನುಮಂತು ಪಲಾವ್ ಹೊಟೇಲ್ ಮುಂಭಾಗಕ್ಕೆ ಬಂದು ಸಿವಿಲ್ ಡ್ರೆಸ್‌ನಲ್ಲಿ ವಿವಿಧ ಗಲ್ಲಿಗಳಲ್ಲಿ ಗೃಹಿಣಿಯರಂತೆ ಕಾಣುವ ಮಹಿಳಾ ಸಿಬ್ಬಂದಿಯನ್ನು, ತಳ್ಳು ಗಾಡಿಯವರಂತೆ ಕೆಲ ಸಿಬ್ಬಂದಿಯನ್ನು ವಿಜಯನಗರ ಆಸುಪಾಸಿನಲ್ಲಿ ನಿಯೋಜಿಸಲಾಗಿತ್ತು.

    ಆರೋಪಿ ದ್ವಿಚಕ್ರ ವಾಹನದಲ್ಲಿ ಒಡಾಡುವುದನ್ನು ಖಚಿತ ಪಡಿಸಿಕೊಂಡು, ನಂಬರ್ ಪತ್ತೆ ಹಚ್ಚಿ, ಬಾಟಲ್ ಇಟ್ಟು ಮರೆಯಲ್ಲಿ ಅಡಗಿ ನಿಂತು ಗಮನಿಸುತ್ತರುವಾಗ ದಾಳಿ ಮಾಡಿ ಆರೋಪಿ ಕಿರಣ್ ನನ್ನು ಬಂಧಿಸಿದ್ದಾರೆ. 750 ಮಿ.ಲೀ. ಬ್ಲೆಂಡರ್ ಪ್ರೈಡ್ ವಿಸ್ಕಿ ಬಾಟಲ, ಟಿವಿಎಸ್ ಜ್ಯೂಪಿಟರ್ ದ್ವಿಚಕ್ರ ವಾಹನ, ಮೊಬೈಲ್‌ಅನ್ನು ಜಪ್ತಿ ಮಾಡಿದ್ದಾರೆ. ಇಂದು ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರು ಪಡಿಸಲಾಗಿದೆ.

    ಈ ಮೊದಲು ಮಧುಲೋಕ ಎಂಬ ಆನ್‌ಲೈನ್ ಸೈಟ್‌ನಲ್ಲಿ ಮದ್ಯ ಖರೀದಿಗೆ ಜನ ಮುಗಿ ಬಿದ್ದಿದ್ದರು. ಕೆಲವರು ತಮ್ಮ ಬಳಿ ಇದ್ದ ಮದ್ಯಕ್ಕೆ ಐದಾರು ಪಟ್ಟು ಬೆಲೆ ಹೆಚ್ಚಳ ಮಾಡಿ ಅಲ್ಲಿ ಮಾರಾಟ ಮಾಡಿಕೊಂಡು ಲಾಭ ಗಳಿಸಿದ್ದರು. ಈ ಕುರಿತು ತನಿಖೆ ನಡೆಸಿ ಅಬಕಾರಿ ಅಧಿಕಾರಿಗಳು ಒಬ್ಬರನ್ನು ಬಂಧಿಸಿದ ಬಳಿಕ ಅಲ್ಲಿ ವ್ಯವಹಾರ ನಿಂತಿತ್ತು. ಅನಂತರ ಕೆಲವರು ವೈಯಕ್ತಿಕ ಸಾಮಾಜಿಕ ಜಾಲ ತಾಣಗಳಲ್ಲಿ ಈ ದಂಧೆಯನ್ನು ಶುರು ಹಚ್ಚಿಕೊಂಡಿದ್ದರು ಎಂದು ಪಶ್ಚಿಮ ವಲಯದ ಅಬಕಾರಿ ಉಪ ಆಯುಕ್ತ ಬಿ.ಆರ್.ಹಿರೇಮಠ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link