ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಸೋಂಕು ದೃಢ

ಪಟ್ಟನಾಯಕನಹಳ್ಳಿ

      ಕಳೆದ ಎರಡು ದಿನಗಳಿಂದಲೂ ತಾಲ್ಲೂಕಿನ ಗ್ರಾಮೀಣ ಪ್ರದೇಶಕ್ಕೂ ಕೊರೋನಾ ಸೋಂಕು ವ್ಯಾಪಿಸಲು ಆರಂಭಿಸಿದ್ದು ಈ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. 10ನೇ ತರಗತಿಯ ಪರೀಕ್ಷೆ ಬರೆಯಲೆಂದು ಆಂದ್ರ ಪ್ರದೇಶದಿಂದ ಕಾಮಗೊಂಡನಹಳ್ಳಿ ಗ್ರಾಮಕ್ಕೆ ಮರಳಿ ಬಂದಿದ್ದ ವಿದ್ಯಾರ್ಥಿಗೆ ಸೋಂಕು ದೃಢಗೊಂಡಿದ್ದು ಈ ಹಿನ್ನೆಲೆಯಲ್ಲಿ ಪ.ನಾ.ಹಳ್ಳಿ ವ್ಯಾಪ್ತಿಯ ಜನರಲ್ಲಿ ಭೀತಿಯ ವಾತಾವರಣ ಸೃಷ್ಠಿಯಾಗಿದೆ.
ಪಟ್ಟನಾಯಕನಹಳ್ಳಿ ಪರೀಕ್ಷಾ ಕೇಂದ್ರದಲ್ಲಿ 10ನೇ ತರಗತಿಯ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿ ಶಾಲೆಗೆ ರಜೆ ಇದ್ದದ್ದರಿಂದ ತಮ್ಮ ಕುಟುಂಬದೊಂದಿಗೆ ಆಂದ್ರ ಪ್ರದೇಶದ ರಾಜದುರ್ಗಕ್ಕೆ ತೆರಳಿದ್ದನು.

       ತಂದೆಯ ಸಮೇತ ಕಾಮಗೊಂಡನಹಳ್ಳಿಗೆ ಕಳೆದ ಎರಡು ದಿನಗಳ ಹಿಂದೆ ಹಿಂದಿರುಗಿದ್ದ ಸೋಂಕಿತ ವ್ಯಕ್ತಿಯ ತಂದೆ ತಾವು ಆಂದ್ರದಿಂದ ಬಂದಿರುವುದಾಗಿ ಮುಂಚೆಯೇ ಆಸ್ಪತ್ರೆಯ ಸಿಬ್ಬಂಧಿಗೆ ತಿಳಿಸಿದ್ದರು. ಸೋಂಕಿತ ವಿದ್ಯಾರ್ಥಿಯ ತಾಯಿಗೆ ರಾಯದುರ್ಗದಲ್ಲಿ ಸೋಂಕು ಇರುವುದು ಪತ್ತೆಯಾದ ಮಾಹಿತಿ ಲಭ್ಯವಾದ ಕೂಡಲೇ ಕಾಮಗೊಂಡನಹಳ್ಳಿಯಲ್ಲಿದ್ದ ತಂದೆ ಹಾಗೂ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.

      ವಿದ್ಯಾರ್ಥಿಗೆ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟ ಕೂಡಲೇ ಗುರುವಾರ ಬೆಳಿಗ್ಗೆ ಕಾಮಗೊಂಡನಹಳ್ಳಿಗೆ ಆಗಮಿಸಿದ ತಾಲ್ಲೂಕು ಆಡಳಿತ ಸೋಂಕಿತ ವಿದ್ಯಾರ್ಥಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಈತನ ತಂದೆಯನ್ನು ಶಿರಾ ಕೋವಿಡ್ ಆಸ್ಪತ್ರೆಯಲ್ಲಿ ಕ್ವಾರಂಟೇನ್‍ನಲ್ಲಿಡಲಾಗಿದೆ. ಸೋಂಕು ಇರುವುದು ದೃಢಗೊಂಡಿದ್ದರಿಂದ ಸದರಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಲಭ್ಯವಾಗಿಲ್ಲ.

ಕಾಮಗೊಂಡನಹಳ್ಳಿ ಸೀಲ್‍ಡೌನ್:

     ವಿದ್ಯಾರ್ಥಿಯಲ್ಲಿ ಸೋಂಕಿರುವುದು ಪತ್ತೆಯಾಗುತ್ತಿದ್ದಂತೆಯೇ ಆತನ ದ್ವಿತೀಯ ಸಂಪರ್ಕದಲ್ಲಿದ್ದ ವಿದ್ಯಾರ್ಥಿಗಳ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು ಈ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ.ಸೋಂಕಿತ ವ್ಯಕ್ತಿ ಇದ್ದ ಕಾಮಗೊಂಡನಹಳ್ಳಿಯ ಆತನ ಮನೆಯ ಸುತ್ತಲೂ 50 ಮೀಟರ್ ವ್ಯಾಪ್ತಿಯಲ್ಲಿನ ರಸ್ತೆಯನ್ನು ಸೀಲ್‍ಡೌನ್ ಮಾಡಲಾಗಿದ್ದು ಮನೆಯ ಸುತ್ತಲಿನ ಪ್ರದೇಶ ಹಾಗೂ ಗ್ರಾಮದ ರಸ್ತೆಗಳನ್ನು ಸ್ಯಾನಿಟರೈಸ್ ಮಾಡಲಾಗಿದೆ. ಗ್ರಾಮಸ್ಥರಿಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ತಿಳುವಳಿಕೆ ಮೂಡಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link