ಹುಳಿಯಾರು:
ನೆರೆಯಿಂದ ಬೆಳೆ ಹಾಳಾಗಿ ಹೊರ ರಾಜ್ಯದಿಂದ ಆಮದಾಗದೆ ಮಾರುಕಟ್ಟೆಯಲ್ಲಿ 100 ಗಡಿ ದಾಟಿ ಕೊಳ್ಳುವ ಗ್ರಾಹಕನ ಕಣ್ಣಲ್ಲಿ ನೀರು ಬರಿಸಿದ್ದ ಈರುಳ್ಳಿ ಬೆಲೆ ವಾರದಿಂದ ಸ್ಪಲ್ಪ ಇಳಿಕೆಯಾಗಿದೆ. ಇದಕ್ಕೆ ಮಹಾರಾಷ್ಟ್ರದ ಈರುಳ್ಳಿ ಬರುತ್ತಿರುವುದು ಮುಖ್ಯ ಕಾರಣವಾಗಿದೆ.
ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಸುರಿದ ಭಾರಿ ಮಳೆಗೆ ಈರುಳ್ಳಿ ಬೆಳೆ ನಷ್ಟವಾಗಿತ್ತು. ಅಲ್ಲದೆ ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗದೆ ನಿರೀಕ್ಷಿತ ಪ್ರಮಾಣದ ಬೆಳೆ ಬಂದಿರಲಿಲ್ಲ. ಪರಿಣಾಮ ಕೆಜಿಗೆ 100 ರೂ ಕೊಟ್ಟರೂ ಗುಣಮಟ್ಟದ ಈರುಳ್ಳಿ ಸಿಗದಂತ್ತಾಗಿತ್ತು. ಮೂರು ತಿಂಗಳಿಗೂ ಹೆಚ್ಚು ಕಾಲ ಗಗನಕ್ಕೇರಿದ ಈರುಳ್ಳಿ ಬೆಲೆಯಿಂದ ಹೋಟೆಲ್ಗಳಲ್ಲಿ ಈರುಳ್ಳಿ ಪಕೋಡ, ಚಿತ್ರನ್ನ ಮಾಡದಂತ್ತಾಗಿದ್ದರು. ಇನ್ನು ಮನೆಯಲ್ಲಿ ತುಪ್ಪ ಬಳಸಿದಂತೆ ಈರುಳ್ಳಿ ಬಳಸುತ್ತಿದ್ದರು.
ಈಗ ಮಾರುಕಟ್ಟೆಗೆ ಮಹಾರಾಷ್ಟ್ರದ ಈರುಳ್ಳಿ ಬರುತ್ತಿದ್ದು ಸಾಗಣೆ ವೆಚ್ಚ, ನಿರ್ವಹಣೆ ಹಾಗೂ ಲಾಭ ಸೇರಿ ಕೆ.ಜಿ. ಈರುಳ್ಳಿಗೆ 50 ರಿಂದ 60 ರೂ. ನಿಗದಿ ಮಾಡಲಾಗಿದೆ. ಈರುಳ್ಳಿಗೆ ಬೆಲೆ ಬಂದ ಬಳಿಕ ಹಲವು ರೈತರು ಬಿತ್ತನೆ ಮಾಡಿದ್ದು ಇನ್ರ್ನೆಂದು ತಿಂಗಳಲ್ಲಿ ಇದು ಮಾರುಕಟ್ಟೆಗೆ ಬರುತ್ತದೆ ಆಗ ಈರುಳ್ಳಿ ಬೆಲೆ ಇನ್ನೂ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಈರುಳ್ಳಿ ವ್ಯಾಪಾರಿ ಹಾರೂನ್ ಷರೀಪ್ ವಿಶ್ಲೇಷಿಸುತ್ತಾರೆ.
ಒಟ್ಟಾರೆ ಇಷ್ಟು ದಿನಗಳ ಕಾಲ ಭಾರಿ ಏರಿಕೆಯಾಗಿ ಜನರು ಖರೀದಿಸಲು ಹೆದರುವಂತ್ತಾಗಿದ್ದ ಈರುಳ್ಳಿ ತುಸು ಇಳಿದಿರುವುದು ಗ್ರಾಹಕರು ನಿಟ್ಟುಸಿರು ಬಿಡುವಂತೆ ಮಾಡಿದೆ. ಅದರಲ್ಲೂ ಗೃಹಿಣಿಯರು, ಹೋಟಲ್ ಮಾಲೀಕರಿಗೆ ನೆಮ್ಮದಿ ತರಿಸಿದೆ. ಇದರಿಂದ ಮನೆಯಡಿಗೆ ರುಚಿ ಹೆಚ್ಚಲಿದೆ. ಅಲ್ಲದೆ ಈರುಳ್ಳಿ ಬೋಂಡ, ಈರುಳ್ಳಿ ದೋಸೆ, ಈರುಳ್ಳಿ ಪಲ್ಯ ಹೋಟೆಲ್ಗಳಲ್ಲಿ ಸಿಗುವ ಸಾಧ್ಯತೆಯಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








