ಕತ್ತರಿಸುವಾಗಷ್ಟೇ ಅಲ್ಲ, ಕೊಳ್ಳುವಾಗಲೂ ಕಣ್ಣೀರು..!
ಚಿತ್ರದುರ್ಗ
ರಾಜ್ಯದಲ್ಲಿ ಭಾರಿ ಮಳೆಗೆ ಈರುಳ್ಳಿ , ಬೆಳ್ಳುಳ್ಳಿ ಬೆಲೆ ನೆಲಕಚ್ಚಿ ರೈತರು ಸಂಕಷ್ಟದಲ್ಲಿದ್ದರೂ, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಆದರೂ ಬೆಂಗಳೂರಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ. ಈರುಳ್ಳಿ ಬೆಲೆ 50 ರೂಗೆ ಬಂದು ತಲುಪಿದೆ. ಇನ್ನೂ ಒಂದು ವಾರದಲ್ಲಿ 80ರೂ ಗಡಿ ದಾಟಲಿದೆ.
ಒಂದು ತಿಂಗಳ ಹಿಂದಷ್ಟೇ ಈರುಳ್ಳಿ ಬೆಲೆ 40ರವರೆಗೂ ತಲುಪಿತ್ತು, ಬಳಿಕ ಕೇಂದ್ರ ಸರ್ಕಾರವು ವಿದೇಶ ರಫ್ತು ಕಡಿಮೆ ಮಾಡಿದ ಬಳಿಕ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡಿತ್ತು. ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದಂತೆ ಎಚ್ಚರಗೊಂಡ ಕೇಂದ್ರ ಸರ್ಕಾರ ಬೆಲೆ ಏರಿಕೆ ತಡೆಯಲು, ಅಕ್ರಮ ದಾಸ್ತಾನು ಮಾಡದಂತೆ ಹಲವು ಬಿಗಿ ಕ್ರಮ ಕೈಗೊಂಡಿದೆ.
ಇತ್ತೀಚೆಗೆ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದ ಈರುಳ್ಳಿ ಬೆಲೆ ಬೆಂಗಳೂರಿನಲ್ಲಿ ಮತ್ತೆ ಗಗನಕ್ಕೇರಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಈರುಳ್ಳಿ 50 ರೂ.ಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.ದಕ್ಷಿಣ ಭಾರತದ ರಾಜ್ಯಗಳು, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಬೆಳೆಗಳು ಹಾನಿಗೊಳಗಾಗಿವೆ. ಕಳೆದ ವರ್ಷವೂ ಅರ್ಧದಷ್ಟು ಮಾತ್ರ ಬೆಳೆ ಬಂದಿತ್ತು.ಈ ಬಾರಿಯೂ ಕೊಯ್ಲಿಗೆ ಬಂದಿದ್ದ ಈರುಳ್ಳಿ, ಬೆಳ್ಳುಳ್ಳಿಯೂ ಮಳೆಗೆ ಕೊಳೆತು ಹೋಗಿದೆ. ಇದರಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಳೆ ಪ್ರಮಾಣ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗಗಳಲ್ಲಿ ದೇಶಕ್ಕೆ ಅಗತ್ಯವಿರುವ ಶೇ.50ರಷ್ಟು ಬೆಳ್ಳುಳ್ಳಿ, ಈರುಳ್ಳಿ ಬೆಳೆಯಲಾಗುತ್ತದೆ. ಆದರೆ, ಮಳೆಗೆ ಈರುಳ್ಳಿ, ಬೆಳ್ಳುಳ್ಳಿ ಜಮೀನಿನಲ್ಲೇ ಕೊಳೆತು ಹೋಗಿದೆ. ಬೆಲೆ ಏರಿಕೆಯಿದ್ದರೂ ಬೆಳೆದ ರೈತರಿಗೆ ಮಾತ್ರ ಲಾಭ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈರುಳ್ಳಿಯ ಪರಿಸ್ಥಿತಿ ಬೆಳ್ಳುಳ್ಳಿಗೂ ಬಂದಿದೆ. ತಿಂಗಳ ಹಿಂದಷ್ಟೇ ಕೆ.ಜಿಗೆ 100 ರಿಂದ 120 ರೂ. ಆಸುಪಾಸಿನಲ್ಲಿದ್ದ ಬೆಳ್ಳುಳ್ಳಿ ಬೆಲೆಯು ನೆರೆ, ಪ್ರವಾಹದಿಂದ ಹಾನಿಯ ಹಿನ್ನೆಲೆ ದುಪ್ಪಟ್ಟಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ 200ರೂ.ನಿಂದ 220 ರೂ.ವರೆಗೆ ಮಾರಾಟವಾಗುತ್ತಿದೆ.
ಅತ್ಯಂತ ಹೆಚ್ಚು ಬಳಕೆಯಲ್ಲಿರುವ ತರಕಾರಿಗಳಲ್ಲಿ ಆಲೂಗಡ್ಡೆ ನಂತರದ ಸ್ಥಾನದಲ್ಲಿರುವ ಈರುಳ್ಳಿ ಗ್ರಾಹಕನ ಜೇಬನ್ನು ಸುಡುತ್ತಿದೆ.ಕಳೆದ ಹದಿನೈದು ದಿನಗಳ ಹಿಂದೆ ಕೆಜಿ ಈರುಳ್ಳಿಗೆ ರೂ.40 ರಿಂದ ರೂ. 50 ರವರೆಗಿದ್ದ ದರ ಈ ವಾರ ರೂ. 90 ರಿಂದ ರೂ. 100 ಕ್ಕೇರಿದೆ. ರಾಜಧಾನಿಯಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ರೂ.70 ರಿಂದ ರೂ.80 ಕ್ಕೇರಿದೆ.
ಆದರೆ ಈರುಳ್ಳಿ ಬೆಲೆ ಏರಿಕೆಗೆ ಕೇವಲ ಪ್ರವಾಹ ಮತ್ತು ಮಳೆಯಷ್ಟೇ ಕಾರಣವಲ್ಲ. ಸಾಲು ಸಾಲು ಹಬ್ಬಗಳು ಸಹ ಈರುಳ್ಳಿ ಬೆಲೆ ಏರಿಕೆಗೆ ಮತ್ತೊಂದು ಕಾರಣ ಎನ್ನಲಾಗಿದೆ. ಆದರೆ ಹಬ್ಬಗಳು ಮುಗಿದ ನಂತರವೂ ಬೆಲೆ ಮಾತ್ರ ಕಡಿಮೆಯಾಗದಿರುವುದು ಗ್ರಾಹಕನಿಗೆ ಭಾರೀ ತಲೆನೋವೆನ್ನಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








