ಬೆಂಗಳೂರು
ಗಗನಕ್ಕೇರಿದ್ದ ಈರುಳ್ಳಿ ಧಾರಣೆ ಹಠಾತ್ ಕುಸಿದಿದ್ದು ವ್ಯಾಪಾರಿಗಳಿಗೆ ದೊಡ್ಡ ಶಾಕ್ ನೀಡಿದರೆ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ ಕಳೆದ ಕೆಲದಿನಗಳಿಂದ ಬೆಲೆ ಹೆಚ್ಚಾಗಿ ಕೆಜಿಗೆ 200 ರೂ ವರೆಗೆ ತಲುಪಿ ಗ್ರಾಹಕರಿಗೆ ಈರುಳ್ಳಿ ಕಣ್ಣೀರು ತರಿಸಿತ್ತು..
ಈರುಳ್ಳಿ ಉತ್ತಮ ಬೆಲೆ ಸಿಗಲಿದೆ ಎಂದು ವ್ಯಾಪಾರಿಗಳು ಈಜಿಪ್ಟ್ ಮತ್ತು ಟರ್ಕಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಆಮದು ಮಾಡಿಕೊಂಡಿದ್ದಾರೆ. ಆದರೆ, ಏಕಾಏಕಿ ಎಪಿಎಂಸಿಯಲ್ಲಿ ಏಕ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆ ಹೆಚ್ಚಾಗಿರುವುದರಿಂದ ಬೇಡಿಕೆ ಇಳಿಮುಖವಾಗಿ ಬೆಲೆ ಕುಸಿತ ಕಂಡಿದೆ. ಮುಂಬರುವ ದಿನಗಳಲ್ಲಿ ಈರುಳ್ಳಿ ಧಾರಣೆ ಇನ್ನಷ್ಟು ಇಳಿಕೆಯಾಗುವ ಸುಳಿವು ನೀಡಿರುವುದು ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಏಕಾಏಕಿ 200ರ ಗಡಿ ತಲುಪಿದ್ದ ಈರುಳ್ಳಿ, ಈಗ ಗಣನೀಯವಾಗಿ ಇಳಿಕೆ ಕಂಡಿದ್ದು, ರಾಜಸ್ತಾನ, ಮಹಾರಾಷ್ಟ್ರ, ಗುಜರಾತ್‌ನಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿತ್ತು. ಒಂದು ಮೂಟೆ ಉತ್ತಮ ಈರುಳ್ಳಿಯನ್ನು 5 ಸಾವಿರ ರೂ. ನೀಡಿ ಖರೀದಿಸಿದ್ದರು.ಎಪಿಎಂಸಿಯಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಹೊಸ ಈರುಳ್ಳಿಯ ಧಾರಣೆ ಪ್ರತಿ ಕೆಜಿಗೆ 80 ರಿಂದ 100 ರೂ.ಗೆ ಇಳಿಕೆ ಕಂಡಿದೆ. ಅಂದರೆ 4 ದಿನಗಳ ಹಿಂದೆ ಇದ್ದ ಧಾರಣೆಗಿಂತ ಅರ್ಧದಷ್ಟು ಈರುಳ್ಳಿ ಬೆಲೆ ಕಡಿಮೆಯಾಗಿದೆ.
ನಗರದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಉತ್ತಮ ಬೆಲೆ ದೊರೆಯಲಿದೆ ಎಂದು ವ್ಯಾಪಾರಸ್ಥರು ಸಾವಿರಾರು ರೂ.ಗಳನ್ನು ನೀಡಿ ಈರುಳ್ಳಿಯನ್ನು ಖರೀದಿಸಿದ್ದರು. ಆದರೆ, ಲಾಭ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳು, ಈಗ ಕಷ್ಟ ಅನುಭವಿಸುವಂತಾಗಿದೆ.ಈರುಳ್ಳಿ ಬೆಲೆ ಗಗನಕ್ಕೇರಿದ್ದರಿಂದ ಗ್ರಾಹಕರು ತೀವ್ರ ಆಕ್ರೋಶಗೊಂಡಿದ್ದರು. ಈಗ ದಿನದಿಂದ ದಿನಕ್ಕೆ ಈರುಳ್ಳಿ ಧಾರಣೆ ಕಡಿಮೆಯಾಗುತ್ತಿರುವುದರಿಂದ ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ