ಹುಳಿಯಾರು:
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‍ನ ಶಿಕ್ಷಕರುಗಳಾದ ಕೆ.ನಾಗರಾಜು ಹಾಗೂ ಶ್ರೀಕಾಂತ್ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆನ್‍ಲೈನ್ ಮೂಲಕ ತರಗತಿಗಳನ್ನು ಪ್ರಾರಂಭಿಸಿದ್ದಾರೆ.ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿರುವ ಕಾರಣದಿಂದ ವಿದ್ಯಾರ್ಥಿಗಳು ವರ್ಷವಿಡೀ ಕಲಿತ ಪಾಠಗಳನ್ನು ಮರೆತುಹೋಗಬಹುದು. ಆದ್ದರಿಂದ ಆನ್‍ಲೈನ್ ಪಾಠ ಮಾಡುವು ಒಳಿತು ಎಂದು ನಿರ್ಧರಿಸಿ ಇವರಿಬ್ಬರೂ ಗಣಿತ ಮತ್ತು ಬೌತಶಾಸ್ತ್ರದ ಆನ್‍ಲೈನ್ ತರಗತಿ ನಡೆಸಲು ಮುಂದಾಗಿದ್ದಾರೆ.
ಕೊರೊನಾ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಒಬ್ಬರ ಮನೆಗೆ ಒಬ್ಬರು ಹೋಗುವಂತಿಲ್ಲ. ಶಾಲೆ ನಡೆಸುವಂತಿಲ್ಲ. ಮನೆಯಲ್ಲೇ ವಿದ್ಯಾರ್ಥಿಗಳನ್ನು ಸೇರಿಸಿ ಟ್ಯೂಷನ್ ಸಹ ಮಾಡುವಂತಿಲ್ಲ. ಹಾಗಾಗಿ ವಿದ್ಯಾರ್ಥಿಗಳು ತಮ್ಮತಮ್ಮ ಮನೆಯಲ್ಲೇ ಕುಳಿತು ಪಾಠ ಆಲಿಸುವಂತೆ ಇವರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಸ್ಮಾರ್ಟ್ ಫೋನ್ ಹೊಂದಿರುವ ವಿದ್ಯಾರ್ಥಿಗಳ ವಾಟ್ಸ್ ಆಪ್ ಗ್ರೂಪ್ ಮಾಡಿ ಅವರಿಗೆ ಜೂಮ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ತಿಳಿಸಲಾಗಿದೆ. ಬೋಧನೆಯ ವಿಷಯ, ಅವಧಿ, ಮೀಟಿಂಗ್ ಐಡಿ ಮತ್ತು ಪಾಸ್‍ವರ್ಡನ್ನು ವ್ಯಾಟ್ಸಪ್ ಗ್ರೂಪ್‍ಗೆ ಕಳುಹಿಸಲಾಗಿದೆ. ಕೆಲವರು ಲ್ಯಾಪ್ ಟಾಪ್ ನಲ್ಲಿಯೂ ಇನ್ನೂ ಕೆಲವರು ಕಂಪ್ಯೂಟರ್ ನಲ್ಲಿಯೂ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ.
ವೇಳಾಪಟ್ಟಿಯಂತೆ ಪ್ರತಿದಿನ ಗಣಿತ ತರಗತಿಯನ್ನು ಬೆಳಗ್ಗೆ 11 ಗಂಟೆಗೂ ಬೌತಶಾಸ್ತ್ರ ತರಗತಿಯನ್ನು ಸಂಜೆ 4 ಗಂಟೆಗೂ ನಡೆಸುತ್ತಿದ್ದು ಶಾಲೆಯ 64 ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್ ಪೋನ್ ಲಭ್ಯವಿಲ್ಲದವರು, ನೆಟ್‍ವರ್ಕ್ ಸಮಸ್ಯೆ ಇರುವವರನ್ನು ಬಿಟ್ಟು ಐವತ್ತರಿಂದ ಐವತ್ತೈದು ಮಂದಿ ನಿತ್ಯ ಸ್ಮಾರ್ಟ್ ತರಗತಿಯಲ್ಲಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
