ಗುಬ್ಬಿ
ರೈತರು ಸರ್ಕಾರದ ಯೋಜನೆಯಡಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ರೈತರ ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ಇನ್ನು ಮುಂದೆ ರೈತರೆ ನೇರವಾಗಿ ತಮ್ಮ ಹೊಲ, ತೋಟಗಳಲ್ಲಿ ಬೆಳೆದಿರುವ ಬೆಳೆಗಳನ್ನು ಮೊಬೈಲ್‍ನಲ್ಲಿ ಫೋಟೊ ತೆಗೆದು ಹೊಸ ಆ್ಯಪ್ ಮೂಲಕ ಅಪ್‍ಲೋಡ್ ಮಾಡಬಹುದಾಗಿದೆ. ಇದರಿಂದ ರೈತರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್ ತಿಳಿಸಿದರು.
ಈಗಾಗಲೆ ತಾಲ್ಲೂಕಿನ ಎಲ್ಲಾ ಹೋಬಳಿಗಳ ಗ್ರಾಮಗಳಿಗೆ ಖುದ್ದಾಗಿ ತೆರಳಿ ರೈತರಿಗೆ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆ ನಮೂದು ಮಾಡುವ ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ರೈತರು ತಮ್ಮ ಮೊಬೈಲ್ ಮೂಲಕವೇ ತಾವು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನು ಫೋಟೊ ತೆಗೆದು ಅಪ್‍ಲೋಡ್ ಮಾಡಬಹುದಾಗಿದೆ. ಇದರಿಂದ ರೈತರು ತಮ್ಮ ಜಮೀನುಗಳಲ್ಲಿ ಯಾವ ಬೆಳೆ ಬೆಳೆಯುತ್ತಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಪಹಣಿಯಲ್ಲಿ ನಮೂದಾಗುತ್ತದೆ ಎಂದು ತಿಳಿಸಿದರು.
ರೈತರು ಪ್ರತಿ ವರ್ಷ ತಮ್ಮ ಹೊಲ ತೋಟಗಳಲ್ಲಿ ಬೆಳೆಯುವ ಬೆಳೆಗಳ ಸಮೀಕ್ಷೆ ನಡೆಸಲಾಗುತ್ತಿದೆ. ಇದುವರೆಗೆ ಖಾಸಗಿ ಬೆಳೆ ಸಮೀಕ್ಷೆಗಾರರಿಂದ ರೈತರು ತಮ್ಮ ಜಮೀನನಲ್ಲಿ ಬೆಳೆದಿರುವ ಬೆಳೆಗಳ ಬಗ್ಗೆ ಸಮೀಕ್ಷೆ ಮಾಡುತ್ತಿದ್ದರು. ಇನ್ನು ಮುಂದೆ ರೈತರೆ ನೇರವಾಗಿ ತಮ್ಮ ಜಮೀನಲ್ಲಿ ಬೆಳೆದಿರುವ ಬೆಳೆಗಳನ್ನು ಫೋಟೋ ತೆಗೆದು ಮೊಬೈಲ್ ಮೂಲಕವೆ ಹೊಸ ಆ್ಯಪ್ ಮೂಲಕ ಅಪ್‍ಲೋಡ್ ಮಾಡಬಹುದಾಗಿದೆ. ಈಗಾಗಲೇ ತಾಲ್ಲೂಕಿನಾದ್ಯಂತ 9022 ರೈತರ ಜಮೀನುಗಳ ಬೆಳೆ ಸಮೀಕ್ಷೆ ನಡೆಸಲಾಗಿದ್ದು, ಶೇ. 4.44 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ