ಕೊರೋನಾ ಎ ಹೋಟೆಲ್‍ಗಳಲ್ಲಿ ಸರ್ವೀಸ್ ಇಲ್ಲ, ಕೇವಲ ಪಾರ್ಸೆಲ್ 

ತುಮಕೂರು
    ಕೊರೋನಾ ವೈರಸ್ ಹಾವಳಿಯ ಭೀತಿ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯು ಮತ್ತೊಂದು ಬಿಗಿ ಕ್ರಮ ಕೈಗೊಂಡಿದ್ದು, ಇದೀಗ ನಗರದ ಎಲ್ಲ ಹೋಟೆಲ್‍ಗಳಲ್ಲಿ ಸರ್ವೀಸ್ ರದ್ದುಪಡಿಸಲು ಸೂಚಿಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಕೇವಲ ಪಾರ್ಸಲ್ ನೀಡುವ ಪದ್ಧತಿ ಅನುಸರಿಸಲು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. 
    ಜಿಲ್ಲಾಡಳಿತವು ಈಗಾಗಲೇ 144 ನೇ ಸೆಕ್ಷನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಎಲ್ಲೂ ಸಹ ಐದು ಜನರಿಗಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಇದಲ್ಲದೆ ಕೊರೋನಾ ನಿಯಂತ್ರಣಕ್ಕೂ ಸಹ ಒಂದೆಡೆ ಜನರು ಸೇರಬಾರದು. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ತುಮಕೂರು ನಗರದ ಎಲ್ಲ ಹೋಟೆಲ್‍ಗಳಲ್ಲೂ ಸರ್ವೀಸ್ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ.
    ಅಂದರೆ ಹೋಟೆಲ್‍ಗಳ ಒಳಗೆ ಜನರು ಕುಳಿತುಕೊಂಡು ಆಹಾರ ಸೇವಿಸುವಂತಿಲ್ಲ. ಇದರಿಂದ ಗುಂಪು ಸೇರಿದಂತಾಗುತ್ತದೆ. ಆದ್ದರಿಂದ ಈ ಸರ್ವೀಸ್ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ. ಸಾರ್ವಜನಿಕರಿಗೆ ಆಹಾರ ಸೇವನೆಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಹೋಟೆಲ್‍ಗಳಲ್ಲಿ ಆಹಾರವನ್ನು ಪಾರ್ಸೆಲ್ ನೀಡಲು ಅವಕಾಶ ಕಲ್ಪಿಸಲಾಗಿದೆ. ಜನರು ಬಂದು ತಮಗೆ ಬೇಕಾದುದನ್ನು ಪಾರ್ಸೆಲ್ ಮಾಡಿಸಿಕೊಂಡು ತಕ್ಷಣವೇ ನಿರ್ಗಮಿಸಬಹುದಾಗಿದೆ. ಮಾರ್ಚ್ 31 ರವರೆಗೂ ಈ ಪದ್ಧತಿ ಜಾರಿಯಲ್ಲಿರುತ್ತದೆ ಎಂದು ತುಮಕೂರು ಪಾಲಿಕೆಯ ಉಪ ಆಯುಕ್ತ (ಆಡಳಿತ) ಹಾಗೂ ಆರೋಗ್ಯಾಧಿಕಾರಿ ಡಾ. ನಾಗೇಶ್‍ಕುಮಾರ್ ತಿಳಿಸಿದ್ದಾರೆ. 
ಪಾಲಿಕೆ ಗೇಟ್ ಬಂದ್
    ಈ ಮಧ್ಯೆ ನಗರದ ಟೌನ್ ಹಾಲ್ ವೃತ್ತದ ಕಡೆಯಿಂದ ತುಮಕೂರು ಮಹಾನಗರ ಪಾಲಿಕೆ ಕಚೇರಿ ಕಡೆಗೆ ಹೋಗುವ ದಾರಿಯ ಪ್ರವೇಶ ದ್ವಾರವನ್ನು ಶನಿವಾರ ಮುಚ್ಚಲಾಗಿದೆ. ಗೇಟ್‍ಗಳಲ್ಲಿ ಕಾವಲು ಸಿಬ್ಬಂದಿಯನ್ನು ಹಾಕಲಾಗಿದೆ. ಪಾಲಿಕೆ ಕಚೇರಿಗೆ ಅನಿವಾರ್ಯವಾಗಿ ಬರುವವರನ್ನು ಮಾತ್ರ ಗುರುತಿಸಿ ಒಳಗೆ ಬಿಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕಾರುಗಳಲ್ಲಿ ಬಂದ ಕೆಲವರು ಈ ಹೊಸ ನಿಯಮವನ್ನು ಪ್ರಶ್ನಿಸಿ ಗದ್ದಲ ಮಾಡಿದ ಪ್ರಸಂಗವೂ ನಡೆದಿದೆ. 
ಇಂದು ಜನತಾಕಫ್ರ್ಯೂ: ನಗರ ಪೂರ್ಣ ಬಂದ್
    ಮಾರಕ ಕೊರೋನಾ ವೈರಸ್ ಸೋಂಕು ನಿಯಂತ್ರಿಸುವ ಒಂದು ಕ್ರಮವಾಗಿ ಮಾರ್ಚ್ 22 ರಂದು ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ದೇಶಾದ್ಯಂತ ಜನತಾ ಕಫ್ರ್ಯೂ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ತುಮಕೂರು ನಗರ ಸಂಪೂರ್ಣವಾಗಿ ಬಂದ್ (ಆಸ್ಪತ್ರೆಗಳು, ಕ್ಲಿನಿಕ್‍ಗಳು, ಮೆಡಿಕಲ್ ಶಾಪ್‍ಗಳನ್ನು ಹೊರತುಪಡಿಸಿ) ಆಗಿರುತ್ತದೆ. 
    ನಗರದಲ್ಲಿರುವ ನಾಲ್ಕೂ ಇಂದಿರಾ ಕ್ಯಾಂಟೀನ್‍ಗಳು ಬಂದ್ ಆಗಿರುತ್ತವೆ. ಇದಲ್ಲದೆ ಬೀದಿಬದಿ ಅಂಗಡಿಗಳೂ ಸೇರಿದಂತೆ, ಎಲ್ಲ ಹೋಟೆಲ್‍ಗಳೂ ಮುಚ್ಚಿರುತ್ತವೆ. ಬಸ್ ಸಂಚಾರವೂ ಸ್ಥಗಿತವಾಗಿರುತ್ತದೆ. ಎಲ್ಲ ರೀತಿಯ ಅಂಗಡಿ-ಮುಂಗಟ್ಟುಗಳೂ ಬಂದ್ ಆಗಿರುತ್ತವೆ. ಮಿಗಿಲಾಗಿ ಸಾರ್ವಜನಿಕರೇ ಮನೆಗಳಿಂದ ಹೊರಗೆ ಬರದಿರುವುದರಿಂದ ಇಡೀ ನಗರ ಅಕ್ಷರಶಃ ನಿರ್ಜನವಾಗಿರುತ್ತದೆ.
 
    ನಗರದಲ್ಲಿ ಆಸ್ಪತ್ರೆಗಳು, ಕ್ಲಿನಿಕ್‍ಗಳು, ಮೆಡಿಕಲ್ ಶಾಪ್‍ಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಅಂಗಡಿ/ಉದ್ದಿಮೆಗಳನ್ನು ಮಾರ್ಚ್ 22 ರಂದು ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಕಡ್ಡಾಯವಾಗಿ ಬಂದ್ ಮಾಡುವಂತೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap