ದಾವಣಗೆರೆ:
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸೇರಿದಂತೆ ದೇಶದಲ್ಲಿರುವ ಎಲ್ಲಾ ಮಂಡಳಿಗಳನ್ನು ಕೇಂದ್ರ ಸರ್ಕಾರ ಮುಚ್ಚುವ ಹುನ್ನಾರ ನಡೆಸಿದ್ದು, ಕಾರ್ಮಿಕರು ಸಂಘಟಿತ ಹೋರಾಟ ನಡೆಸುವ ಮೂಲಕ ಕಲ್ಯಾಣ ಮಂಡಳಿಯನ್ನು ಉಳಿಸಿಕೊಳ್ಳಬೇಕೆಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎನ್.ಶಿವಣ್ಣ ಕರೆ ನೀಡಿದರು.
ನಗರದ ಭಾರತ್ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಕರ್ನಾ ಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿರುವ ಎಲ್ಲಾ ಮಂಡಳಿಗಳನ್ನು ಮುಚ್ಚಿ, ಎಲ್ಲಾ ಮಂಡಳಿಗಳನ್ನು ವಿಲೀನಗೊಳಿಸುವ ನಿಟ್ಟಿನಲ್ಲಿ ಕಾಯ್ದೆ ರೂಪಿಸುವ ಹುನ್ನಾರ ನಡೆಸಿದೆ. ಇದರಿಂದ ಅಖಿಲ ಭಾರತದ ಮಟ್ಟದಲ್ಲಿ ಹಲವು ಕಾರ್ಮಿಕರ ಕಲ್ಯಾಣಕ್ಕಾಗಿ ಒಂದೇ ಮಂಡಳಿ ರಚನೆಯಾಗಿ, ಪ್ರಧಾನಿಗಳೇ ಅದರ ಅಧ್ಯಕ್ಷರಾಗಿರಲಿದ್ದಾರೆ. ಹೀಗಾದರೆ, ಕರ್ಮಿಕರಿಗೆ ಸೌಲಭ್ಯ ಸಿಗುವುದು ಕಷ್ಟವಾಗಲಿದೆ.
ಆದ್ದರಿಂದ ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗಗಳ ಕಾರ್ಮಿಕರು ಸಂಘಟಿತ ಹೋರಾಟ ನಡೆಸುವ ಮೂಲಕ ನಿಮ್ಮ, ನಿಮ್ಮ ಕಲ್ಯಾಣ ಮಂಡಳಿಗಳನ್ನು ಉಳಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ದೇಶದಲ್ಲಿಯ ಕೋಟಿ ಜನ ಕಟ್ಟಡ ಕಾರ್ಮಿಕರಿದ್ದು, ಇವರನ್ನು ಅವಲಂಬಿಸಿರುವವರು ಸೇರಿ ಒಟ್ಟು 25 ಕೋಟಿ ಜನರಿದ್ದಾರೆ. ಹೀಗಾಗಿ ಈ ಕಾರ್ಮಿಕರು ಮನಸ್ಸು ಮಾಡಿದರೆ, ಯಾರ ಹಣೆಬರಹವನ್ನೂ ಸಹ ಬದಲಾಯಿಸುವ ತಾಕತ್ತು ಇದೆ. ಹೀಗಾಗಿ ಕೇಂದ್ರ ಸರ್ಕಾರ ಕಲ್ಯಾಣ ಮಂಡಳಿ ಮುಚ್ಚಲು ಮುಂದಾಗಿರುವುದನ್ನು ಕೈಬಿಡಬೇಕೆಂದು ಆಗ್ರಹಿಸಿದ ಅವರು, ಸೆಸ್ ರೂಪದಲ್ಲಿ ಕಟ್ಟಡ ಕಾರ್ಮಿಕರ ಒಟ್ಟು 34,700 ಕೋಟಿ ರೂ. ಹಣ ಕೇಂದ್ರ ಸರ್ಕಾರದಲ್ಲಿ ಸಂಗ್ರಹವಾಗಿದೆ. ಆದರೆ, 9500 ಕೋಟಿ ರೂ. ಹಣ ಮಾತ್ರ ಖರ್ಚಾಗಿದ್ದು, 28 ಸಾವಿರ ಕೋಟಿ ಹಣ ಇನ್ನೂ ಹಾಗೆಯೇ ಕೊಳೆಯುತ್ತಿದೆ. ಆದರೂ ಸರ್ಕಾರಗಳು ಹಾಗೂ ಅಧಿಕಾರಶಾಹಿಗಳು ಸೌಲಭ್ಯ ಕೊಡುತ್ತಿಲ್ಲ. ಆದ್ದರಿಂದ ಕಾರ್ಮಿಕರು ಹೋರಾಟ ನಡೆಸುವ ಮೂಲಕ ಸೌಲಭ್ಯ ಕೊಡುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಕರ್ನಾಟಕ ಕಟ್ಟಡ ಕಾರ್ಮಿಕರ ಮಂಡಳಿ ಸರಿಯಾಗಿ ಲೆಕ್ಕ ತೋರಿಸಿಲ್ಲ ಎಂಬ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ಮಂಡಳಿಯಲ್ಲಿರುವ 7 ಸಾವಿರ ಕೋಟಿ ರೂ.ಗಳಲ್ಲಿ 423 ಕೋಟಿ ರೂ. ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಈ ಬಗ್ಗೆ ಕಟ್ಟಡ ಕಾರ್ಮಿಕರು ಶಾಕ್‍ಗೆ ಒಳಗಾಗಿದ್ದಾರೆ. ಸೆಸ್ ರೂಪದಲ್ಲಿ ಕಟ್ಟಡ ಮಾಲೀಕರಿಂದ ಕಟ್ಟಡ ಕಾರ್ಮಿಕರ ಶ್ರಮದಿಂದ ವಸೂಲಿಯಾಗಿರುವ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳಿಗೆ ಚರ್ಮದ ಬಾರಿಕೋಲಿನಲ್ಲಿ ಬಾರಿಸಬೇಕೆಂದು ಕರೆ ನೀಡಿದರು.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಕೇರಳದ ಕಮುನಿಷ್ಟ್ ಸರ್ಕಾರ ಮೊಟ್ಟ ಮೊದಲ ಬಾರಿಗೆ ಹುಟ್ಟುಹಾಕಿತ್ತು. ಬಳಿಕ ತಮಿಳುನಾಡಿನಲ್ಲಿ ಮಂಡಳಿ ಅಸ್ತಿತ್ವಕ್ಕೆ ಬಂತು. ನಂತರ 1996ರಲ್ಲಿ ಹೆಚ್.ಡಿ.ದೇವೇಗೌಡರು ಪ್ರಧಾನಿಯಾದ ಸಂದರ್ಭದಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಗಾಗಿ ಸರ್ಕಾರ ಕಾಯ್ದೆ ಜಾರಿಗೆ ತಂದಿತು. ಆದರೆ, 2006ರ ವರೆಗೆ ಕರ್ನಾಟಕ ಸರ್ಕಾರ ನಿಯಮಾವಳಿ ರೂಪಿಸಿ ಮಂಡಳಿ ನಿರ್ಮಾಣ ಮಾಡಿರಲಿಲ್ಲ. ಆದರೆ, ಎಐಟಿಯುಸಿ ನೇತೃತ್ವದ ಕರ್ನಾ ಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಹೋರಾಟದ ಫಲವಾಗಿ 2006ರಲ್ಲಿ ಅಂದಿನ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಕಲ್ಯಾಣ ಮಂಡಳಿಯನ್ನು ರಚನೆ ಮಾಡಿ, ಕಾರ್ಮಿಕರಿಗೆ ವಿವಿಧ ಸೌಲಭ್ಯ ಕಲ್ಪಿಸುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ನಿವೃತ್ತ ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ 1 ಸಾವಿರ ರೂ. ಪಿಂಚಣಿಯನ್ನು 2 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಹಾಗೂ ಫ್ಯಾಮಿಲಿ ಪೆನ್ಷನ್ ಸ್ಕೀಂ ಆರಂಭಿಸಬೇಕು. ಮನೆ ಕಟ್ಟಿಸಿಕ್ಕೊಳ್ಳಲು ಮಂಡಳಿಯಿಂದ ನೀಡುವ 5 ಲಕ್ಷ ರೂ. ಸಹಾಯಧನ ಪಡೆಯಲು ಇರುವ ಷರತ್ತುಗಳನ್ನು ಸಡಲಿಸಬೇಕು. ಸ್ವಾಭಾವಿಕ ಸಾವಿಗೆ ನೀಡುತ್ತಿರುವ 1 ಲಕ್ಷ ರೂ. ಪರಹಾರವನ್ನು 5 ಲಕ್ಷಕ್ಕೆ ಹೆಚ್ಚಿಸಬೇಕು. ಅಪಘಾತ ಸಂಭವಿಸಿ ಮೃತ ಪಡುವ ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ 5 ಲಕ್ಷ ರೂ. ಪರಿಹಾರವನ್ನು 10 ಲಕ್ಷಕ್ಕೆ ಹೆಚ್ಚಿಸಬೇಕು. ತ್ವರಿತಗತಿಯಲ್ಲಿ ಮಂಡಳಿಯಿಂದ ನೀಡುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಬೇಕೆಂದು ಆಗ್ರಹಿಸಿದರು.
ಸಭೆಯ ಅಧ್ಯಕ್ಷತೆಯನ್ನು ಎಐಟಿಯುಸಿ ನಾಯಕ ಹೆಚ್.ಕೆ.ರಾಮಚಂದ್ರಪ್ಪ ವಹಿಸಿದ್ದರು. ಮುಖಂಡರುಗಳಾದ ಹೆಚ್.ಜಿ.ಉಮೇಶ್, ಪಿ.ಕೆ.ಲಿಂಗರಾಜ್, ಆನಂದರಾಜ್, ವಿ.ಲಕ್ಷ್ಮಣ್, ಅಬ್ದುಲ್ ರೆಹಮಾನ್‍ಸಾಬ್, ಪೀರಜಾದಿ, ಎಂ.ಐ.ನವಲೂರು, ಸಂಗಯ್ಯ ಹಿರೇಮಠ್, ರವೀಂದ್ರ ಸಾಗರ್, ಶ್ರೀರಾಮ್, ಆವರಗೆರೆ ಚಂದ್ರು, ರೇವಣ್ಕರ್ ಮತ್ತಿತರರು ಹಾಜರಿದ್ದರು. ಗಿರೀಶ್ ಸ್ವಾಗತಿಸಿದರು. ಐರಣಿ ಚಂದ್ರು, ಪಿ.ಷಣ್ಮುಖಸ್ವಾಮಿ, ಯರಗುಂಟೆ ಸುರೇಶ್ ಜಾಗೃತ ಗೀತೆ ಹಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ