ಎತ್ತಿನ ಹೊಳೆ ಹೋರಾಟಕ್ಕೆ ಬಹಿರಂಗ ಸಭೆ

ತಿಪಟೂರು:

   ಎತ್ತಿನಹೊಳೆ ಯೋಜನೆ ನೀರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಭಾಗವಾಗಿ ತಾಲ್ಲೂಕಿನ ತಿಮ್ಲಾಪುರ ಗೇಟ್‍ನಲ್ಲಿ ಬಿಳಿಗೆರೆ ಪಂಚಾಯಿತಿಯ ಗ್ರಾಮಗಳ ಬಹಿರಂಗ ಸಭೆ ಗುರುವಾರ ನಡೆಯಿತು.

    ರಾಜ್ಯ ರೈತ ಸಂಘದ ಕಾರ್ಯದರ್ಶಿ ಬೆನ್ನಾಯಕನಹಳ್ಳಿ ಬಿ.ಎಸ್. ದೇವರಾಜು ಮಾತನಾಡಿ, ಸತತ ಬರದಿಂದ ತಾಲ್ಲೂಕಿನ ಜಲ ಮೂಲಗಳು ಬತ್ತಿ ಹೋಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಇಲ್ಲಿನ ಆರ್ಥಿಕ ಮತ್ತು ಪರಿಸರ ಪುನಶ್ಚೇತನಗೊಳ್ಳಬೇಕಾದರೆ ಕೆರೆಗಳಿಗೆ ನೀರು ತುಂಬಿಸಬೇಕು.

      ಇದೇ ಭಾಗದಲ್ಲಿ ಎತ್ತಿನಹೊಳೆ ಹಾದು ಹೋಗುತ್ತಿದ್ದರೂ ಇಲ್ಲಿಗೆ ನೀರು ಹಂಚದೆ ಅನ್ಯಾಯ ಮಾಡಿರುವುದು ರೈತರನ್ನು ಶೋಷಿಸಿದಂತಾಗಿದೆ. ಯೋಜನೆಯಲ್ಲಿ ಈ ವ್ಯಾಪ್ತಿಗೆ ನೀರು ನಿಗದಿಯಾಗುವವರೆಗೆ ಹೋರಾಟ ತೀವ್ರಗೊಳಿಸಬೇಕು. ರೈತರು ತಮ್ಮ ಗ್ರಾಮಗಳಲ್ಲಿ ಗ್ರಾಮ ಸಮಿತಿಗಳನ್ನು ರಚಿಸಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆಕೊಟ್ಟರು.

     ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಿಮ್ಲಾಪುರ ದೇವರಾಜು ಮಾತನಾಡಿ, ದೇಗುಲ, ಮಠಗಳು, ಬಡವರಿಗೆ ದಾನ ಧರ್ಮ ಮಾಡುತ್ತಿದ್ದ ಪ್ರತಿಯೊಬ್ಬ ರೈತರು ಇಂದು ಸರ್ಕಾರವನ್ನು ಬೇಡುವಂತಾಗಿರುವುದು ದುರಂತ. ಸರ್ಕಾರದ ಮುಂದೆ ಭಿಕ್ಷುಕರ ರೀತಿ ಸರದಿ ಸಾಲಿನಲ್ಲಿ ನಿಲ್ಲುವಂತಹ ಸ್ಥಿತಿಯನ್ನು ರಾಜಕಾರಣಿಗಳು ನಿರ್ಮಿಸಿದ್ದಾರೆ. ರೈತರು ತಮ್ಮ ಸ್ವಾಭಿಮಾನ ಸ್ಥಾಪಿಸಿಕೊಳ್ಳಲು ಹೋರಾಟಕ್ಕೆ ಸಜ್ಜಾಗಬೇಕು ಎಂದು ತಿಳಿಸಿದರು.

     ಬಿಳಿಗೆರೆಪಾಳ್ಯದ ರೈತ ಎಂ. ನಾಗೇಶ ಮಾತನಾಡಿ, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಯಾವುದೇ ಅಧಿಕಾರಿಗಳಾಗಲಿ ಅಥವಾ ತಾಲ್ಲೂಕು ಆಡಳಿತವಾಗಲಿ ರೈತರೊಂದಿಗೆ ಕನಿಷ್ಠ ಚರ್ಚೆಯನ್ನೂ ಮಾಡಿಲ್ಲ. ಹೊಳೆ ನೀರು ಹಂಚಿಕೆ ಹಾಗೂ ಯೋಜನೆ ಸಂತ್ರಸ್ತರಿಗೆ ಭೂಪರಿಹಾರದ ವಿಚಾರವಾಗಿ ತಾಲ್ಲೂಕು ಆಡಳಿತ ಕೂಡಲೆ ರೈತರು ಮತ್ತು ಯೋಜನಾಧಿಕಾರಿಗಳ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

        ದಕ್ಷಿಣ ಒಳನಾಡು ನೀರಾವರಿ ಸಮಿತಿಯ ರಾಜಣ್ಣ ಮಾತನಾಡಿ, ತಾಲ್ಲೂಕಿನ ಕೆರೆ ಕಟ್ಟೆಗಳು, ಜಲ ಕಣ್ಣುಗಳಾದ ರಾಜಕಾಲುವೆ, ಹಳ್ಳಗಳನ್ನು ಈ ಯೋಜನೆ ಛೇದಿಸಿಕೊಂಡು ಹೋಗುತ್ತದೆ. ಎತ್ತಿನಹೊಳೆಯಿಂದ ಇಲ್ಲಿಗೆ ನೀರು ಹಂಚದಿರುವುದು ಇದು ಯೋಜನಾ ನಿರಾಶ್ರಿತ ಪ್ರದೇಶವಾಗಲು ಕಾರಣವಾಗುತ್ತದೆ ಎಂದರು.

       ಪ್ರಾಂತ್ಯ ರೈತ ಸಂಘದ ಚನ್ನಬಸವಣ್ಣ, ಎತ್ತಿನಹೊಳೆ ನೀರಾವರಿ ಯೋಜನೆ ನೀರಾವರಿ ತಜ್ಞ ಪರಮಶಿವಯ್ಯ ಅವರ ಕನಸಾಗಿತ್ತು. ಮಧ್ಯ ಕರ್ನಾಟಕ ಸೇರಿದಂತೆ ಸುಮಾರು 10 ಸಾವಿರ ಕೆರೆಗಳಿಗೆ ಸಿದ್ಧಪಡಿಸಿದ ಯೋಜನೆಯನ್ನು ಕೆಲವು ರಾಜಕಾರಣಿಗಳು ದಿಕ್ಕು ತಪ್ಪಿಸುತ್ತಿದ್ದಾರೆ. ತಮ್ಮ ಕ್ಷೇತ್ರಗಳ ಮತ ಬ್ಯಾಂಕ್‍ಗೆ ಅನುಕೂಲವಾಗುವಂತೆ ಯೋಜನೆಯನ್ನು ತಿದ್ದುಪಡಿ ಮಾಡಿ ಇಲ್ಲಿನ ರೈತರಿಗೆ ಅನ್ಯಾಯವೆಸಗಿದ್ದಾರೆ ಎಂದರು.

       ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಮಾತನಾಡಿ, ಮೂಲ ಉದ್ದೇಶವನ್ನೇ ಮರೆತು ಯೋಜನೆಯ ದಾರಿ ತಪ್ಪಿಸಲಾಗುತ್ತಿದೆ. ರೈತರು ಹೋರಾಟಕ್ಕೆ ಇಳಿಯದೆ ವಿಧಿ ಇಲ್ಲ ಎಂದರು. ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಮಾತನಾಡಿ, ಯುವ ಪೀಳಿಗೆಗೆ ಕೆರೆ, ಕಟ್ಟೆ, ಹಳ್ಳಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸದಿದ್ದರೆ ರೈತರಿಗೆ ಉಳಿಗಾಲವಿಲ್ಲ ಎಂದರು.

        ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬಸ್ತೀಹಳ್ಳಿ ರಾಜಣ್ಣ, ಭೂ ಸಂತ್ರಸ್ತ ಸಮಿತಿಯ ಮನೋಹರ್ ಪಟೇಲ್, ಜಾಗೃತಿ ಸಂಸ್ಥೆಯ ರೇಣುಕಾರಾಧ್ಯ, ಸೌಹಾರ್ದ ತಿಪಟೂರು ಸಮಿತಿಯ ಅಲ್ಲಾಬಕಾಶ್, ಕನ್ನಡ ರಕ್ಷಣಾ ವೇದಿಕೆಯ ವಿಜಯ್ ಕುಮಾರ್, ನವಕರ್ನಾಟಕ ಯುವ ವೇದಿಕೆಯ ಸಿದ್ದು, ತಿಮ್ಲಾಪುರ, ಬೆಳಿಗೆರೆ, ಬಿಳಿಗೆರೆ ಪಾಳ್ಯ, ಬದ್ರಾಪುರ, ಜಕ್ಕನಹಳ್ಳಿ, ಚೌಡ್ಲಾಪುರ, ಭೈರಾಪುರ, ಮದ್ಲೇಹಳ್ಳಿ, ಶಿಡ್ಲೇಹಳ್ಳಿ ಹಾಗು ಇತರೆ ಗ್ರಾಮದ ರೈತರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link