ಹುಳಿಯಾರು:
ಸ್ವಚ್ಛತೆ ಹಾಳು ಮಾಡುವ ಜೊತೆಗೆ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಬಿಡಾಡಿ ಹಂದಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಹುಳಿಯಾರು ಪಟ್ಟಣ ಪಂಚಾಯ್ತಿ ಶನಿವಾರ ಆರಂಭಿಸಿದೆ.ರಸ್ತೆ ಬದಿ, ಕೊಳಚೆ ತಗ್ಗು ಪ್ರದೇಶ, ಶಾಲೆ, ಅಂಗನವಾಡಿಗಳಂತಹ ಸಾರ್ವಜನಿಕ ಸ್ಥಳದಲ್ಲಿ ಅಡ್ಡಾಡಿ ಅನೈರ್ಮಲ್ಯ ಉಂಟು ಮಾಡಿ ಅನಾರೋಗ್ಯಕ್ಕೆ ಕಾರಣವಾಗುವುದಲ್ಲದೆ, ವಾಹನ ಸಂಚಾರಕ್ಕೂ ಈ ಹಂದಿಗಳು ತೊಂದರೆ ಮಾಡುತ್ತಿವೆ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿತ್ತು.
ಪಪಂ ಸಾಮಾನ್ಯ ಸಭೆಯಲ್ಲಿ ಹಂದಿ ಹಿಡಿಯುವಂತೆ ಅನುಮೋದನೆ ದೊರೆತಿದ್ದರೂ ಸಹ ಹಂದಿ ಮಾಲೀಕರಿಗೆ ನೋಟಿಸ್ ನೀಡಿ ಸುಮ್ಮನಾಗಿದ್ದರು. ಹಂದಿಗಳ ಹಿಂಸೆಯಿಂದ ರೋಸಿಹೋದ ಜನರು ಲೋಕಾಯುಕ್ತ ಪೊಲೀಸರು ಏರ್ಪಡಿಸಿದ್ದ ಕುಂದು ಕೊರತೆ ಸಭೆಯಲ್ಲಿ ಈ ಸಂಬಂಧ ದೂರು ನೀಡಿದ್ದರು.
ಸ್ಥಳದಲ್ಲೇ ಲೋಕಾಯುಕ್ತ ಡಿವೈಎಸ್‍ಪಿ ರವೀಶ್ ಅವರು ಹಂದಿ ಹಿಡಿಯಲು ಇರುವ ಕಾನೂನಿನ ಬಗ್ಗೆ ಪಪಂ ಮುಖ್ಯಾಧಿಕಾರಿ ಮಂಜುನಾಥ್ ಅವರಿಗೆ ಪಾಠ ಮಾಡಿದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಹಂದಿ ಮಾಲೀಕರ ಸಭೆ ನಡೆಸಿ ಮೂರು ದಿನಗಳ ಗಡುವು ನೀಡಿ ಎಚ್ಚರಿಸಿದ್ದರು.
ಆದರೂ ಪಟ್ಟಣದಲ್ಲಿ ಹಂದಿಗಳ ಓಡಾಟ ನಿಲ್ಲಲಿಲ್ಲ. ಹಂದಿ ಓಡಾಡುತ್ತಿರುವ ಪೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಬೆಂಗಳೂರಿನ ಹಂದಿ ಹಿಡಿಯುವ ತಂಡಕ್ಕೆ ಕಾರ್ಯಾಚರಣೆಗೆ ಅನುಮತಿ ನೀಡಲಾಯಿತು.
ಬೆಂಗಳೂರಿನ 30 ಮಂದಿ ಹಂದಿ ಹಿಡಿಯುವ ತಂಡ ಬೆಳ್ಳಂಬೆಳಗ್ಗೆಯೇ ಪೊಲೀಸರ ಭ್ರದ್ರತೆ ನಡುವೆ ಕಾರ್ಯಚರಣೆ ಆರಂಭಿಸಿತು. ಮೊದಲ ದಿನವಾದ ಶನಿವಾರ ಬಸ್ ನಿಲ್ದಾಣ, ರಾಜಕುಮರ್ ರಸ್ತೆ, ನುರಾನಿ ಮಸೀದಿ ಬೀದಿ, ಬಸವೇಶ್ವರ ನಗರ, ಪೇಟೆಬೀದಿ, ವಾಸವಿ ಸ್ಕೂಲ್, ತಿಪಟೂರು ರಸ್ತೆ ಸುತ್ತಮುತ್ತ ಕಾರ್ಯಾಚರಣೆ ನಡೆಸಿ 30 ತಕ್ಕೂ ಹೆಚ್ಚು ಹಂದಿಗಳನ್ನು ಸೆರೆ ಹಿಡಿಯಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
