ದಾವಣಗೆರೆ :
ಬುಧವಾರ ಮಧ್ಯ ರಾತ್ರಿಯಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ಬೇಸಿಗೆ ಬೆಳೆಗೆ 125 ದಿನ ನೀರು ಹರಿಸಿರುವ ಕಾಡಾ ನಿರ್ಧಾರಕ್ಕೆ ಕೊನೆ ಭಾಗದ ಬಹುತೇಕ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು (ಬುಧವಾರ) ಮಧ್ಯ ರಾತ್ರಿಯಿಂದ ಭದ್ರಾ ಜಲಾಶಯದ ಗೇಟ್ ತೆರೆದು ನೀರು ಎಡ ಮತ್ತು ಬಲ ನಾಲೆಯಲ್ಲಿ ನೀರು ಹರಿಸಿರುವ ಕ್ರಮ ಅವೈಜ್ಞಾನಿಕವಾಗಿದ್ದು, ಈಗ ನೀರು ಹರಿಸಿದರೆ, ಸುಮಾರು 15 ದಿನಗಳ ಕಾಲ ನೀರು ಫೋಲಾಗುವ ಸಾಧ್ಯತೆ ಇದೆ. ಆದ್ದರಿಂದ ತಕ್ಷಣವೇ ನೀರು ಹರಿಸುವುದನ್ನು ಸ್ಥಗಿತಗೊಳಿಸಿ, ಫೆಬ್ರವರಿ 10ರಿಂದ ನೀರು ಹರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಈಗಷ್ಟೇ ರೈತರು ತಮ್ಮ ಗದ್ದೆಗಳಲ್ಲಿ ಭತ್ತದ ಬೀಜ ಚೆಲ್ಲಿ, ಮಡಿ ಮಾಡಿಕೊಂಡು, ಸಸಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಪ್ರಸ್ತುತ ನೀರಿನ ಅವಶ್ಯಕತೆ ಇಲ್ಲ. ಸಸಿ ಮಾಡಿಕೊಳ್ಳಲು ಬೋರ್‍ವೆಲ್ ನೀರು ಬಳಕೆ ಮಾಡಿಕೊಳ್ಳಲಿದ್ದಾರೆ. ಆದರೆ, ರಾಜ್ಯ ಸರ್ಕಾರವು ಇದ್ಯಾವುದನ್ನೂ ಗಮನಿಸದೇ, ತರಾತೂರಿಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಭದ್ರಾ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಸಭೆ ನಡೆಸಿ, ಜ.2ರ ಮಧ್ಯ ರಾತ್ರಿಯಿಂದಲೇ ಭದ್ರಾ ನಾಲೆಯಲ್ಲಿ ಬೇಸಿಗೆ ಬೆಳೆಗಾಗಿ ನಿರಂತರ ನಾಲ್ಕು ತಿಂಗಳುಗಳ ಕಾಲ ನೀರು ಹರಿಸಲು ಮುಂದಾಗಿರುವ ಕ್ರಮ ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕಳೆದ ನಾಲ್ಕು ಬೆಳೆಗಳಿಗೆ ನೀರು ಸಿಗದ ಕಾರಣ, ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರು ಬೆಳೆ ಇಲ್ಲದೇ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಂಥದರಲ್ಲಿ ಕಾಡಾವು ಅವಶ್ಯಕತೆ ಇಲ್ಲದ ಸಂದರ್ಭದಲ್ಲಿ 120 ದಿನಗಳ ನೀರು ಹರಿಸುತ್ತಿರುವ ಕಾಡಾ ಕ್ರಮದಿಂದಾಗಿ, ಕೊನೆ ಭಾಗದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈಗ ನಮಗೆ ನೀರಿನ ಅವಶ್ಯ ಕತೆ ಇಲ. ಈಗ ಮಡಿ ಮಾಡಿಕೊಂಡು ಭತ್ತದ ಬೀಜ ಚೆಲ್ಲಿ ಸಸಿ ಮಾಡಿಕೊಳ್ಳಲು ಆರಂಭಿಸಿದ್ದೇವೆ. ಈಗ ನೀರು ಬಿಡುವುದರಿಂದ ಸುಮಾರು 15ರಿಂದ 20 ದಿನಗಳು ನೀರು ಅನಗತ್ಯವಾಗಿ ಫೋಲಾಗಲಿದೆ. ಆದ್ದರಿಂದ ತಕ್ಷಣವೇ ಕಾಡ ನೀರು ಹರಿಸುವುದನ್ನು ಸ್ಥಗಿತಗೊಳಿಸಿ, ರೈತರಿಗೆ ಅವಶ್ಯವಾಗಿ ಬೇಕಾಗಿರುವ ಸಂದರ್ಭದಲ್ಲಿ ಅಂದರೆ, ಫೆಬ್ರವರಿ 10ರಿಂದ ನೀರು ಹರಿಸಲಿ ಎಂದು ರೈತರು ಒತ್ತಾಯಿಸಿದ್ದಾರೆ.
ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು ಒಂದೂವರೆ ಲಕ್ಷ ಎಕರೆ ಜಮೀನಿದ್ದು, ಭತ್ತ ಹಾಗೂ ತೋಟಗಾರಿಕೆ ಬೆಳೆಗಳು ಪ್ರಮುಖ ಬೆಳೆಯಾಗಿವೆ. ಅದರಲ್ಲೂ ಕೊನೆ ಭಾಗದ ವ್ಯಾಪ್ತಿಯಲ್ಲಿರುವ 50 ಸಾವಿರ ಎಕರೆ ಪ್ರದೇಶದಲ್ಲಿ ಭತ್ತವನ್ನೇ ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಈ ಭತ್ತ ಬೆಳೆಗಾರರು ಉಳಿಯಬೇಕಾದರೆ, ಸಧ್ಯ ನೀರು ಹರಿಸುವುದನ್ನು ನಿಲ್ಲಿಸಿ, ಫೆ.10ರಿಂದ ನೀರು ಹರಿಸಬೇಕಾದ ಅವಶ್ಯಕತೆ ಇದೆ.
ಭದ್ರಾ ನಾಲೆಯುದ್ದಕ್ಕೂ ಅಳವಡಿಸಿರುವ ಅಕ್ರಮ ಪಂಪ್‍ಸೆಟ್‍ಗಳ ತೆರವುಗೊಳಿಸುವಂತೆ ಜಲ ಸಂಪನ್ಮೂಲ ಸಚಿವರಿಗೆ ಒತ್ತಾಯಿಸುತ್ತೇವೆ. ಸಚಿವರು ಬೇಡಿಕೆಗೆ ಸ್ಪಂದಿಸದಿದ್ದರೆ ನ್ಯಾಯಾಲಯದ ಮೊರೆ ಹೋಗಲು ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರ ಸಭೆ ನಿರ್ಣಯ ತೆಗೆದುಕೊಂಡಿತು.
ಇನ್ನೂ ಯಾವುದೇ ಸಮಯದಲ್ಲಿ ನೀರು ಹರಿಸಿದರೂ, ನಾಲೆಯ ಮೇಲ್ಭಾಗದಲ್ಲಿ ಸಾವಿರಾರು ಅಕ್ರಮ ಪಂಪ್‍ಸೆಟ್ ಅಳವಡಿಸಿಕೊಂಡು ಅಪಾರ ಪ್ರಮಾಣದಲ್ಲಿ ನೀರು ಕದಿಯುತ್ತಿರುವ ಕಾರಣ ಕೊನೆ ಭಾಗದ ಪ್ರದೇಶಗಳಾದ ಮಲೆಬೆನ್ನೂರು, ಬೆಳ್ಳೂಡಿ, ಹದಡಿ, ಕೈದಾಳೆ, ಕಕ್ಕರಗೊಳ್ಳ, ಆವರಗೊಳ್ಳ, ಅರಸಾಪುರ, ಬೇತೂರು, ಕಡ್ಲೇಬಾಳು ಸೇರಿದಂತೆ ನೀರು ತಲುಪುವುದಿಲ್ಲ.
ಹೀಗಾಗಿ ಅಕ್ರಮ ಪಂಪ್‍ಸೆಟ್‍ಗಳ ಹಾವಳಿಯಿಂದ ಈಗಾಗಲೇ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ನೀರು ತಲುಪದೆ, ಸಾವಿರಾರು ಎಕರೆ ಬೀಳು ಬೀಳುತ್ತಿವೆ. ಆದ್ದರಿಂದ ಜಿಲ್ಲಾಡಳಿತವು ನಾಲೆಯ ಮೇಲ್ಭಾಗದ ರೈತರು ಅಕ್ರಮವಾಗಿ ಅಳವಡಿಸಿರುವ ಅಕ್ರಮ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಿ, ಕೊನೆ ಭಾಗಕ್ಕೆ ನೀರು ಪೂರೈಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೊನೆ ಭಾಗದ ರೈತರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
