ದಾವಣಗೆರೆ

ಚುನಾವಣಾ ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆಯಾಗುತ್ತಿರುವುದು, ಕಾಂಗ್ರೆಸ್ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವಾಗಿದೆ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ವೀಕ್ಷಕ ಮೈಸೂರಿನ ರಘುರಾಜ್ ಅರಸ್ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತ್‍ಮಟ್ಟದ ಸಿದ್ಧತಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಸ್‍ಪಿಎಸ್ ನಗರ ಮತ್ತಿತರೆ, ಪ್ರದೇಶಗಳ ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಕೇವಲ ಒಬ್ಬ ಮತದಾರನ ಹೆಸರು ಮಾತ್ರ ವೋಟರ್‍ಲಿಸ್ಟ್‍ನಲ್ಲಿ ಉಳಿದಿದ್ದು, ಆ ಮನೆಗಳ ಇನ್ನುಳಿದ ಮತದಾರರ ಹೆಸರನ್ನು ಡಿಲಿಟಿ ಮಾಡಲಾಗಿದೆ. ಹೀಗೆ ಈ ಕ್ಷೇತ್ರದಲ್ಲಿಯೇ ಸಾವಿರಾರರು ಮತದಾರರ ಹೆಸರು, ಮತದಾನ ಪಟ್ಟಿಯಿಂದ ಕಣ್ಮರೆಯಾಗಿದೆ ಎಂದು ದೂರಿದರು.
ಮತದಾರರ ಪಟ್ಟಿಯಿಂದ ಮತದಾರರ ಹೆಸರು ನಾಪತ್ತೆಯಾಗುತ್ತಿರುವುದು ಕಾಂಗ್ರೆಸ್ ಪಕ್ಷದ ವಿರುದ್ಧ ನಡೆಯುತ್ತಿರುವ ಬಹುದೊಡ್ಡ ಷಡ್ಯಂತ್ರವಾಗಿದೆ. ತೆಲಂಗಾಣದಲ್ಲಿಯೂ ಹೀಗೆ 20 ಲಕ್ಷ ಮತಗಳು ಡಿಲಿಟ್ ಆಗಿದ್ದವು. ಅದು ನಮ್ಮ ಪಕ್ಷದ ಮೇಲೆ ಪರಿಣಾಮ ಬೀರಿತು. ಈ ರೀತಿಯ ತಪ್ಪುಗಳು ಇಲ್ಲಿ ನಡೆಯದಂತೆ ಪಕ್ಷದ ಕಾರ್ಯಕರ್ತರು ಎಚ್ಚರ ವಹಿಸಿ, ಅಂಥಹ ಮನೆಗಳನ್ನು ಹುಡುಕಿ ವಾಸ್ತವ ಸ್ಥಿತಿಯನ್ನು ಅರಿತುಕೊಂಡು, ಹೆಸರು ಮರಳಿ ಸೇರಿಸಲು ಶ್ರಮಿಸಬೇಕೆಂದು ಸಲಹೆ ನೀಡಿದರು.
ದೇಶಕ್ಕೆ ಅನ್ನ ನೀಡುವ ರೈತ ಬೆನ್ನೆಲುಬು ಆಗಿದ್ದಾರೆ. ಅದೇರೀತಿ ಬೂತ್‍ಮಟ್ಟದ ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬು ಇದ್ದಂತೆ, ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಹಾಗೂ ಬಿಜೆಪಿಯ ವೈಫಲ್ಯಗಳನ್ನು ಮನೆಮನೆಗೆ ತಲುಪಿಸುವ ಮೂಲಕ, ಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿಯವರ ಹಾಗೂ ದಾವಣಗೆರೆ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರ ಕೈ ಬಲ ಪಡಿಸಬೇಕೆಂದು ಕರೆ ನೀಡಿದರು.
ಪಾಲಿಕೆ ಉಪಮೇಯರ್ ಕೆ.ಚಮನ್‍ಸಾಬ್ ಮಾತನಾಡಿ, ದೇಶದಲ್ಲಿ ಚುನಾವಣೆ ಎದುರಾಗುತ್ತಿದ್ದಂತೆಯೇ ಬಾಂಬ್ ಸ್ಫೋಟಗಳು ನಡೆಯುತ್ತವೆ. ಇಂಥಹ ಘಟನೆಗಳನ್ನು ಪ್ರಶ್ನಿಸುವವರನ್ನು ಮುಲಾಜಿಲ್ಲದೇ, ದೇಶದ್ರೋಹಿಗಳ ಪಟ್ಟಿಗೆ ಸೇರಿಸಿಬಿಡುತ್ತಾರೆ. ಕಳೆದ 5 ವರ್ಷ ಕಾಲ ಹಿಟ್ಲರ್ ಮಾದರಿಯ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವ ಗುಣ ಬೆಳೆಸಬೇಕೆಂದು ಕಿವಿಮಾತು ಹೇಳಿದರು.
ಕಾಶ್ಮೀರ ಸಮಸ್ಯೆ ಉಲ್ಬಣಿಸಲು ಮೋದಿಯವರ ಆಡಳಿತ ವೈಖರಿಯೇ ಕಾರಣವಾಗಿದೆ. ಮುಂದಿನ ದಿನಗಳಲ್ಲೂ ಅವರದೇ ಸರ್ಕಾರ ಬಂದರೆ, ಈ ದೇಶ ಯಾವ ಸ್ಥಿತಿಗೆ ತಲುಪುತ್ತದೆ ಎನ್ನುವುದನ್ನು ಊಹಿಸಲು ಸಹ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು ಎಂದರು.
ಹದಡಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಸದಸ್ಯ ಜಿ.ಸಿ.ನಿಂಗಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನಸಾಮಾನ್ಯರ ಹಿತವನ್ನು ಕಡೆಗಣಿಸಿ, ಬಂಡವಾಳ ಶಾಹಿಗಳಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ. ಮೋದಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಸಾಮಾನ್ಯ ರೈತರ ಪರವಾಗಿ ಯಾವುದೇ ಕಾನೂನು ಜಾರಿಗೆ ತಂದಿಲ್ಲ. ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೂ ಸಹ ಇಲ್ಲಿಯ ಸಂಸದ ಜಿ.ಎಂ.ಸಿದ್ದೇಶ್ವರ ಯಾವುದೇ ರೀತಿಯಲ್ಲಿ ಶ್ರಮಿಸಿಲ್ಲ ಎಂದು ಆರೋಪಿಸಿದರು.
ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡರಾದ ನಾಸೀರ್ ಅಹಮದ್, ಎಸ್.ಮಲ್ಲಿಕಾರ್ಜುನ್, ಮಾಜಿ ಉಪಮೇಯರ್ ಮಂಜುಳಮ್ಮ, ಕೆ.ಅಲಿಬ್‍ಖಾನ್, ಎನ್‍ಎಸ್‍ಯುಐ ಅಧ್ಯಕ್ಷ ರಹಮತ್ ಪೈಲ್ವಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
