ಚಳ್ಳಕೆರೆ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕು ಚುನಾವಣಾ ಸ್ವೀಪ್ ಸಮಿತಿ ಹಂತ ಹಂತವಾಗಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿದ್ದು, ನಗರದ ಹೋಟೆಲ್ ಮಾಲೀಕರು ಮತ್ತು ಕಿರಾಣಿ ಅಂಗಡಿ ಮಾಲೀಕರ ಸಭೆ ಕರೆದು ಅವರಿಗೂ ಸಹ ಮತದಾನ ಜಾಗೃತಿಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಎಸ್.ರಾಜಶೇಖರ್ ತಿಳಿಸಿದರು.
ಅವರು, ಶುಕ್ರವಾರ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸ್ವೀಫ್ ಸಮಿತಿ ಸಹಯೋಗದಲ್ಲಿ ನಡೆದ ಹೋಟೆಲ್ ಮತ್ತು ಕಿರಾಣಿ ಅಂಗಡಿ ಮಾಲೀಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ರಾಷ್ಟ್ರದ ಸಂವಿಧಾನ ನೀಡಿದ ಮತದಾನ ಹಕ್ಕನ್ನು ಸಮಾಜದ ಎಲ್ಲಾ ವರ್ಗವೂ ಸಹ ಸದುಪಯೋಗ ಪಡಿಸಿಕೊಳ್ಳಬೇಕಿದೆ. 18 ವರ್ಷ ದಾಟಿದ ಪ್ರತಿಯೊಬ್ಬರೂ ಸಹ ಮತದಾನ ಮಾಡಲು ಆರ್ಹರಿದ್ದು, ಪ್ರತಿಯೊಬ್ಬ ವ್ಯಕ್ತಿಯೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ನಾವೆಲ್ಲರೂ ಸೇರಿ ಜಾಗೃತಿ ಮೂಡಿಸಬೇಕಿದೆ.
ಪ್ರತಿನಿತ್ಯ ಹೋಟೆಲ್‍ಗಳಿಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಜನರು ಆಗಮಿಸುತ್ತಿದ್ದು, ಅವರಿಗೆ ನೀಡುವ ರಶೀದಿ, ಚೀಟಿಗಳಲ್ಲಿ ಏಪ್ರಿಲ್ 18ರಂದು ತಪ್ಪದೆ ಮತದಾನ ಮಾಡುವಂತೆ ನಮೂದಿಸಿ ನೀಡಬೇಕು. ಅವಶ್ಯವಾದಲ್ಲಿ ನಿಮ್ಮ ಎಲ್ಲಾ ಬಿಲ್‍ಗಳಲ್ಲಿ ಒಂದು ಲೈನ್‍ನಲ್ಲಿ ಕಡ್ಡಾಯವಾಗಿ ನಮೂದಿಸಲೇಬೇಕು ಎಂದು ತಾಕೀತು ಮಾಡಿದರು.
ತಾಲ್ಲೂಕು ಸ್ವೀಫ್ ಸಮಿತಿ ಅಧ್ಯಕ್ಷ ಬಿ.ಎಲ್.ಈಶ್ವರಪ್ರಸಾದ್ ಮಾತನಾಡಿ, ಮತದಾನ ಜಾಗೃತಿ ಅಭಿಯಾನ ಜನಾಂದೋಲವಾಗಿ ರೂಪುಗೊಳ್ಳಬೇಕಿದೆ. ಈ ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನಿರೀಕ್ಷೆ ಮಾಡಲಾಗುತ್ತಿದೆ. ಚುನಾವಣಾ ಆಯೋಗದ ನಿಯಮಗಳನ್ನು ಮತ್ತು ಕಡ್ಡಾಯವಾಗಿ ಮತದಾನ ಮಾಡುವಂತೆ ಸಾರ್ವಜನಿಕರನ್ನು ಜಾಗೃತಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಎಲ್ಲಾ ಕೆಲಸವನ್ನು ಸ್ವೀಫ್ ಸಮಿತಿಯಿಂದ ಮಾತ್ರ ಮಾಡಲು ಸಾಧ್ಯವಿಲ್ಲ. ಇಂದು ಸಭೆಗೆ ಉಪಸ್ಥಿತರಿರುವ ಹೋಟೆಲ್, ಕಿರಾಣಿ ಅಂಗಡಿ ಮಾಲೀಕರಿಗೆ ಏ.18ರಂದು ಕಡ್ಡಾಯವಾಗಿ ಮತ ಚಲಾವಣೆ ಮಾಡುವಂತೆ ವಿನಂತಿಸಿಕೊಳ್ಳಬೇಕೆಂದರು.
ತಹಶೀಲ್ದಾರ್ ತುಷಾರ್ ಬಿ.ಹೊಸೂರು ಮಾತನಾಡಿ, ಪ್ರತಿಯೊಂದು ಚುನಾವಣೆಯಲ್ಲೂ ಸಹ ಮತದಾರರು ತಮ್ಮ ಮತವನ್ನು ಚಲಾಯಿಸುವ ಅಭಿಲಾಷೆ ಹೊಂದಿರುತ್ತಾರೆ. ಆದರೆ, ಕೆಲವೊಮ್ಮೆ ಮತದಾನದ ದಿನದಂದೆ ಯಾವುದೇ ಕಾರ್ಯನಿಮಿತ್ತ ಮತದಾನವನ್ನು ನಿರ್ಲಕ್ಷಿಸಿ ಬೇರೆ ಕಾರ್ಯಕ್ಕೆ ಹೋಗುವುದು ಸ್ವಾಭಾವಿಕ. ಆದರೆ, ಈ ಬಾರಿ ಮಾತ್ರ ಪ್ರತಿಯೊಬ್ಬರೂ ಮತದಾನದ ದಿನವಾದ ಏ.18ರಂದು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕೇವಲ ಮತದಾನ ಮಾಡಲು ಆ ದಿನವನ್ನು ಮೀಸಲಿಡಬೇಕು. ನೀವು ನೀಡುವ ಮತದಾನದಿಂದ ಈ ರಾಷ್ಟ್ರ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತವನ್ನು ಪಡೆಯುವ ಅವಕಾಶವಿರುತ್ತದೆ ಎಂದರು.
ತಾಲ್ಲೂಕು ಸ್ವೀಫ್ ಸಮಿತಿ ನಿರ್ದೇಶಕರಾದ ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ನಗರದ ವಿವಿಧೆಡೆಗಳಲ್ಲಿ ಈಗಾಗಲೇ ಮತದಾನದ ಬಗ್ಗೆ ಮತಗಟ್ಟೆ ವ್ಯಾಪ್ತಿಯಲ್ಲಿ ಪ್ರಚಾರವನ್ನು ಕೈಗೊಳ್ಳಲಾಗಿದೆ. ಸರ್ಕಾರಿ ವಾಹನಗಳಿಗೆ ಮತದಾನ ಕುರಿತು ಸಹಾಯವಾಣಿಯ ಸ್ಟಿಕರ್‍ಗಳನ್ನು ಸಹ ಅಂಟಿಸಿ ಪ್ರೇರೇಪಣೆ ನೀಡಲಾಗಿದೆ.
ಪ್ರತಿಯೊಬ್ಬ ಮತದಾರನು ಸ್ವಯಂ ಪ್ರೇರಿತನಾಗಿ ರಾಷ್ಟ್ರದ ಹಿತದೃಷ್ಠಿಯಿಂದ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಸ್ವಯಂ ನಿರ್ಧಾರ ಕೈಗೊಳ್ಳಬೇಕಿದೆ. ಚುನಾವಣಾ ಆಯೋಗದ ನಿಯಮಗಳಡಿ ಮತದಾನ ಮಾಡಲು ಎಲ್ಲಾ ಮತದಾರರು ದೃಢನಿಶ್ಚಯ ಕೈಗೊಳ್ಳಬೇಕಿದೆ. ನಾವು ನಮ್ಮ ಹಕ್ಕು ಮತ್ತು ಕರ್ತವ್ಯವನ್ನು ಪಾಲಿಸುವಂತೆ ಮತದಾನ ಮಾಡುವುದು ಸಹ ಪುಣ್ಯದ ಕೆಲಸ ಹಾಗೂ ಜವಾಬ್ದಾರಿಯುತ ಕೆಲಸವೆಂದು ತಿಳಿದು ಮತದಾನದಲ್ಲಿ ಪಾಲ್ಗೊಳ್ಳಬೇಕು. ನಗರದ ಎಲ್ಲಾ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಜಾಗೃತಿ ಮೂಡಿಸುವ ಉದ್ದೇಶವನ್ನು ತಾಲ್ಲೂಕು ಸ್ವೀಫ್ ಸಮಿತಿ ಹೊಂದಿದೆ ಎಂದರು. ಸಭೆಯಲ್ಲಿ ಹೋಟೆಲ್ ಮಾಲೀಕರ ಸಂಘದ ಪ್ರತಿನಿಧಿಗಳಾಗಿ ಗುರುರಾಜರಾವ್, ಜಗದೀಶ್, ದಿನೇಶ್, ಪುಪ್ಪವನ ಗುರು, ಪ್ರಕಾಶ್‍ಶೆಟ್ಟಿ, ಸುಧಾಹೋಟೆಲ್ ಗುರು, ಕಿರಾಣಿ ಅಂಗಡಿ ಮಾಲೀಕರ ಸಂಘದ ತಿಪ್ಪೇಸ್ವಾಮಿ, ಬಸವರಾಜು ಮುಂತಾದವರು ಪಾಲ್ಗೊಂಡಿದ್ದರು.