ತುರುವೇಕೆರೆ
ಪಟ್ಟಣ ಬ್ಯಾಂಕ್‍ನ ವಾಣಿಜ್ಯ ಮಳಿಗೆಯಲ್ಲಿ ಬಾಡಿಗೆದಾರರಾಗಿದ್ದ ಸುಮಾರು 38 ಅಂಗಡಿಗಳ ಪೈಕಿ 37 ಅಂಗಡಿಗಳನ್ನು ತೆರವುಗೊಳಿಸುವಂತೆ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಟಿ.ಎನ್.ಶಿವರಾಜು ಮತ್ತು ವ್ಯವಸ್ಥಾಪಕ ಶರತ್ ಕುಮಾರ್ ತಿಳಿಸಿದ್ದಾರೆ.
ನ್ಯಾಯಾಲಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಬಾಡಿಗೆದಾರರು ಮತ್ತು ಬ್ಯಾಂಕ್ ಆಡಳಿತ ಮಂಡಳಿಯ ನಡುವೆ ವಿವಾದವಿತ್ತು. ಅಂತಿಮವಾಗಿ ನ್ಯಾಯಾಲಯ ಆಡಳಿತ ಮಂಡಲಿಯ ಪರವಾಗಿ ಆದೇಶ ನೀಡಿತ್ತು. ಆದಾಗ್ಯೂ ಆಡಳಿತ ಮಂಡಲಿ ಮಾನವೀಯತೆಯಿಂದ ಕೆಲ ಕಾಲಗಳ ಕಾಲ ಅವಕಾಶ ನೀಡಿತ್ತು ಎಂದು ತಿಳಿದುಬಂದಿದೆ.
ಆದಾಗ್ಯೂ ಕೆಲವು ಮಂದಿ ಅಂಗಡಿ ತೆರವುಗೊಳಿಸಲು ಹಿಂದೇಟು ಹಾಕಿದ್ದರಿಂದ ನ್ಯಾಯಾಲಯವೆ ಖುದ್ದು ಅಮೀನ್‍ರವರನ್ನು ಕಳಿಸಿ ಅಂಗಡಿ ತೆರವುಗೊಳಿಸಲು ಮುಂದಾಗಿದೆ. 37 ಅಂಗಡಿಗಳ ಪೈಕಿ ಕೆಲವು ಮಂದಿ ನ್ಯಾಯಾಲಯದ ಆದೇಶವನ್ನು ಮನ್ನಿಸಿ ಬ್ಯಾಂಕ್‍ಗೆ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಆದರೆ ಕೆಲವು ಅಂಗಡಿ ಮಾಲೀಕರು ಖಾಲಿ ಮಾಡಲು ಮೀನಾ ಮೇಷ ಎಣಿಸುತ್ತಿದ್ದರು. ಈ ನಡುವೆ ಹಂತಹಂತವಾಗಿ ನ್ಯಾಯಾಲಯ ಅಂಗಡಿಗಳನ್ನು ಖಾಲಿ ಮಾಡಿಸಲು ಸ್ಥಳಕ್ಕೆ ಅಮೀನ್‍ರನ್ನು ಕಳಿಸಿ ತೆರವು ಕಾರ್ಯಾಚರಣೆ ಮಾಡಿಸುತ್ತಿದೆ ಎಂದು ಶಿವರಾಜ್ ಮತ್ತು ಶರತ್ ಕುಮಾರ್ ತಿಳಿಸಿದ್ದಾರೆ.
ಬ್ಯಾಂಕ್ ಹರಾಜು ಮಾಡುವಾಗ ಹರಾಜಿನಲ್ಲಿ ಕೆಲವು ಅಂಗಡಿಗಳನ್ನು ಕೂಗಿಕೊಂಡಿರುವವರೇ ಒಬ್ಬರು. ಈಗ ಅಲ್ಲಿ ವ್ಯವಹಾರ ನಡೆಸುತ್ತಿರುವವರೇ ಒಬ್ಬರು ಎಂಬ ಸಂಗತಿ ಬಯಲಾಗಿದೆ. ಹರಾಜಿನಲ್ಲಿ ಬಾಡಿಗೆ ಕೂಗಿಕೊಂಡಿದ್ದವರಲ್ಲಿ ಕೆಲವರು ಬ್ಯಾಂಕ್‍ಗೆ ಕಡಿಮೆ ಬಾಡಿಗೆ ನೀಡಿ ತಾವು ಹೆಚ್ಚು ಬಾಡಿಗೆ ವಸೂಲು ಮಾಡುತ್ತಿದ್ದಾರೆ ಎಂಬ ಸಂಗತಿಯನ್ನೂ ಸಹ ಬ್ಯಾಂಕ್ ನ್ಯಾಯಾಲಯದ ಗಮನಕ್ಕೆ ತಂದಿತ್ತು ಎಂದು ತಿಳಿದುಬಂದಿದೆ.
ತೆರವು ಕಾರ್ಯಾಚರಣೆ – ಸದ್ಯ 37 ಅಂಗಡಿಗಳ ಪೈಕಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಂಗಡಿಗಳ ತೆರವಿಗೆ ಅಮೀನ್‍ರನ್ನು ಕಳಿಸಿದೆ. ಹಂತಹಂತವಾಗಿ ಎಲ್ಲಾ ಅಂಗಡಿಗಳನ್ನೂ ತೆರವುಗೊಳಿಸಲು ಬ್ಯಾಂಕ್ ಬದ್ದವಾಗಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಟಿ.ಎನ್.ಶಿವರಾಜು ಮತ್ತು ವ್ಯವಸ್ಥಾಪಕ ಶರತ್ ಕುಮಾರ್ ತಿಳಿಸಿದ್ದಾರೆ.ತೆರವು ಕಾರ್ಯಾಚರಣೆ ವೇಳೆ ಬ್ಯಾಂಕ್‍ನ ನಿರ್ದೇಶಕರುಗಳು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.