ಚಿತ್ರದುರ್ಗ:
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿರುವುದರಿಂದ ಮತದಾರರ ತೀರ್ಪಿಗೆ ತಲೆಬಾಗಿ ಸೋಲಿನ ನೈತಿಕ ಹೊಣೆಹೊತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಕೆ.ಪಾಟೀಲ್ ರಾಜೀನಾಮೆ ಸಲ್ಲಿಸಿರುವುದನ್ನು ಚುನಾವಣಾ ಪ್ರಚಾರ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಸಮುದ್ರದ ಜಿ.ಎಸ್.ಮಂಜುನಾಥ್ ಸ್ವಾಗತಿಸಿದ್ದಾರೆ.
ಎ.ಐ.ಸಿ.ಸಿ.ಸಿ.ಗೆ ರಾಜೀನಾಮೆ ಸಲ್ಲಿಸಿರುವ ಹೆಚ್.ಕೆ.ಪಾಟೀಲ್‍ರವರ ನಡೆ ಪಕ್ಷದಲ್ಲಿ ಇತರೆಯವರಿಗೆ ಮಾದರಿಯಾಗಬೇಕು. ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಲ್ಲಿ ಅರವತ್ತು ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಸೋಲು ಹೊಸದೇನಲ್ಲ.
ರಾಜಕೀಯದಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿದೆ. ಗೆದ್ದಾಗ ಹಿಗ್ಗುವುದು, ಸೋತಾಗ ಕುಗ್ಗುವುದು ಕಾಂಗ್ರೆಸ್ ಪಕ್ಷದ ಜಾಯಮಾನವಲ್ಲ. ಮುಂದಿನ ದಿನಗಳಲ್ಲಿ ನಾಯಕರುಗಳು ಪಕ್ಷವನ್ನು ಸಂಘಟಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದ್ದಾರೆ. ಹಾಗಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು, ರಾಜ್ಯದ ಜನ ಯಾರು ಆತಂಕ ಪಡುವುದು ಬೇಡ ಎಂದು ಜಿ.ಎಸ್.ಮಂಜುನಾಥ್ ಮನವಿ ಮಾಡಿದ್ದಾರೆ.