ಕುಣಿಗಲ್
ರಾಜ್ಯದಲ್ಲಿ ಅಭಿವೃದ್ಧಿಯ ಮಹಾಪೂರವನ್ನೇ ಹರಿಸಬೇಕೆಂಬ ಮಹಾದಾಸೆಯನ್ನು ಹೊತ್ತಿರುವ ನಮ್ಮ ಸರ್ಕಾರದಿಂದ ಅತಿವೃಷ್ಠಿ ಮತ್ತು ಪ್ರವಾಹದಿಂದ ಮನೆ, ಜಮೀನುಗಳನ್ನು ಕಳೆದುಕೊಂಡು ಕಂಗಾಲಾದ ಜನರ ನೋವಿಗೆ ಮೊದಲ ಆದ್ಯತೆ ನೀಡಲಾಗುವುದು. ನೀರಾವರಿಗೆ ಒತ್ತು ನೀಡುವ ಮೂಲಕ ಅವಶ್ಯಕತೆ ಹಾಗೂ ಲಭ್ಯತೆ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೆ ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ಸಂಕಲ್ಪ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಅವರು ತಾಲ್ಲೂಕಿನ ಐತಿಹಾಸಿಕ ಸುಪ್ರಸಿದ್ಧ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಲೋಕೋಪಯೋಗಿ ಇಲಾಖೆ, ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರ ಹಾಗೂ ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 10ಕೋಟಿ ರೂ. ವೆಚ್ಚದ ಶಿಲಾನ್ಯಾಸ ಹಾಗೂ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನೀರಾವರಿ ಮತ್ತು ವಿದ್ಯುತ್ ಪೂರೈಕೆ ಮಾಡುವ ಮೂಲಕ ದೇಶದ ಬೆನ್ನೆಲುಬಾದ ರೈತರಿಗೆ ಉತ್ತಮ ಮಾರುಕಟ್ಟೆ ದೊರೆಯುವ ಮೂಲಕ ರೈತಾಪಿ ಜನರ ಬದುಕು ಹಸನಾಗಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ರಾಜ್ಯದ ಸಂಪೂರ್ಣ ಅಭಿವೃದ್ಧಿಯ ದೃಷ್ಟಿಕೋನವನ್ನು ಹೊಂದಿರುವ ನಮ್ಮ ಸರ್ಕಾರ ಯಾವುದೇ ಪಕ್ಷಭೇದ ಮಾಡದೆ ಅವಶ್ಯಕತೆ ಮತ್ತು ಲಭ್ಯತೆಯ ಆಧಾರದ ಮೇರೆ ಅಭಿವೃದ್ಧಿಗೆ ಹೊತ್ತುಕೊಡಲಾಗುವುದೆ ಹೊರತು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ ಎಂದರು.
ಅಭಿವೃದ್ಧಿ ಕುಂಟಿತವಾಗಲು ಮೂಲ ಕಾರಣ ಹಣಕಾಸಿನ ಸ್ಥಿತಿಗತಿ. ಶತಮಾನದ ಹಿಂದೆ ಸಂಭವಿಸಿದಂತಹ ಅತಿವೃಷ್ಠಿ ಹಾಗೂ ಪ್ರವಾಹದಿಂದ ರಾಜ್ಯದ 17 ಜಿಲ್ಲೆಗಳಲ್ಲಿ ಉಂಟಾದ ದುರಂತದಿಂದ 2ಲಕ್ಷ ಮನೆಗಳು 7 ಸಾವಿರ ಹೆಕ್ಟೇರ್‍ನಷ್ಟು ಕೃಷಿ ಭೂಮಿ ನಾಶವಾಗಿದ್ದು ರೈತರು, ನಿರ್ಗತಿಕರು ದಿಕ್ಕು ತೋಚದಂತಾಗಿದ್ದಾರೆ.
ಇಂತಹ ಜನರ ನೋವಿಗೆ ಸ್ಪಂದಿಸಿ ಅವರಿಗೆ ಪುನರ್‍ವಸತಿ ನೀಡುವುದಕ್ಕೆ ಸಂಪೂರ್ಣ ಆದ್ಯತೆ ನೀಡಲಾಗಿದೆ ಎಂದ ಅವರು, ಈ ಹಿಂದಿನ ಸರ್ಕಾರ ಐದು ವರ್ಷಗಳಿಗೆ ಆಗುವಷ್ಟು ಯೋಜನೆಗಳನ್ನ ರೂಪಿಸಿದ್ದನ್ನು ಮೊಟಕುಗೊಳಿಸಿ ಈ ಕಾರ್ಯಕ್ಕೆ ಬಳಸಲಾಗುತ್ತಿದೆ. ಇಲ್ಲಿ ಯಾವುದೇ ದುರುದ್ದೇಶವಿಲ್ಲ. ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನದ ಮೂಲಕ ಅಭಿವೃದ್ಧಿಗೆ ಒತ್ತುಕೊಡುವುದಾಗಿ ತಿಳಿಸಿದರು. ಈಗಾಗಲೇ ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ನಿರ್ಮಾಣಕ್ಕೆ 1100ಕೋಟಿ ರೂ. ಮಂಜೂರಾಗಿದ್ದು ಈ ಯೋಜನೆಯಿಂದ 2400 ಕ್ಯೂಸೆಕ್ಸ್ ನೀರು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಕುಣಿಗಲ್ ಸುತ್ತಮುತ್ತ ಪ್ರದೇಶಕ್ಕೂ ನೀರು ದೊರೆಯಲಿದೆ. ರೈತರ ಬೇಡಿಕೆ ಈಡೇರಿಸಿದರೆ ದೇಶ ಸಮೃದ್ಧವಾಗಲಿದೆ ಎಂಬ ಅರಿವು ನನಗಿದೆ ಎಂದರು.
ಶ್ರೀ ಸಿದ್ಧಲಿಂಗೇಶ್ವರರು 550 ವರ್ಷಗಳ ಇತಿಹಾಸ ಹೊಂದಿರುವ ಪುಣ್ಯಕ್ಷೇತ್ರ ಅವರ ಸಾಧನೆಯನ್ನು ಮೆಚ್ಚಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಕ್ಷೇತ್ರದ ಅಭಿವೃದ್ಧಿ ಅನಿವಾರ್ಯವೂ ಆಗಿದೆ. ಅಂದು ನಾನೇ ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ದಿಗೆ ಒತ್ತು ನೀಡಿ ಶಂಕುಸ್ಥಾಪನೆ ಮಾಡಲಾಗಿತ್ತು, ಇಂದು ಯಾವ ಜನ್ಮದ ಪುಣ್ಯವೋ ಮತ್ತೆ ನಾನೇ ಮುಖ್ಯ ಮಂತ್ರಿಯಾಗಿ ಉದ್ಘಾಟನೆ ಮಾಡುವ ಭಾಗ್ಯ ಲಭಿಸುವಂತೆ ಶ್ರೀ ಸಿದ್ಧಲಿಂಗೇಶ್ವರರು ಮಾಡಿದ್ದಾರೆ ಎಂದು 10 ವರ್ಷದ ಹಿಂದಿನ ನೆನಪನ್ನ ಮೆಲುಕು ಹಾಕಿದ ಅವರು, ತಮ್ಮ ಕುಟುಂಬದವರ ಆಶಯದಂತೆ ಇಂದು ನಮ್ಮ ಮೈತ್ರಿದೇವಿಯವರ ಹೆಸರಿನಲ್ಲಿ ಸ್ವಂತ ಹಣದ 4ಕೋಟಿ ರೂ.ವೆಚ್ಚದಲ್ಲಿ ಬಡವರ ಅನುಕೂಲ ದೃಷ್ಟಿಯಿಂದ ಸಮುದಾಯಭವನ ನಿರ್ಮಾಣಕ್ಕೆ ನಾಳೆಯಿಂದಲೆ ಚಾಲನೆ ನೀಡುವಂತಹ ವ್ಯವಸ್ಥೆಯನ್ನು ಸನ್ನಿಧಿಯಲ್ಲಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ