ಶಿರಾ:
ಶಾಸಕರು ಹಾಗೂ ಮಾಜಿ ಸಚಿವರಾದ ದಿವಂಗತ ಬಿ.ಸತ್ಯನಾರಾಯಣ್ ಅವರ ಅಕಾಲಿಕ ಮರಣದಿಂದ ನಿಜಕ್ಕೂ ರಾಜ್ಯ ಜೆ.ಡಿ.ಎಸ್. ಕುಟುಂಬ ಓರ್ವ ಪ್ರಾಮಾಣಕ ವ್ಯಕ್ತಿಯನ್ನು ಕಳೆದುಕೊಂಡಂತಾಗಿದ್ದು ಕ್ಷೇತ್ರದಲ್ಲಿ ಸತ್ಯಣ್ಣ ಸಂಕಲ್ಪ ಮಾಡಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದೇ ನಮ್ಮ ಪ್ರಮುಖ ಧ್ಯೇಯ ಎಂದು ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬೂವನಹಳ್ಳಿ ಗ್ರಾಮದ ದಿ.ಸತ್ಯಣ್ಣ ಅವರ ತೋಟದ ಮನೆಯಲ್ಲಿ ಗುರುವಾರ ನಡೆದ ವೈಕುಂಠ ಸಮಾರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಶಿರಾ ಅತ್ಯಂತ ಬರ ಪೀಡಿತ ಪ್ರದೇಶವಾಗಿದ್ದು ಇಲ್ಲಿಗೆ ಶಾಸ್ವತ ನೀರಾವರಿ ಯೋಜನೆಯೊಂದರ ಅಗತ್ಯವಿದೆ. ಇದಕ್ಕಾಗಿ ಅನೇಕ ಮಂದಿ ಜನಪ್ರನಿಧಿಗಳು ಹಾಗೂ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಲೇ ಬಂದಿವೆ. ಹೇಮಾವತಿ ಸೇರಿದಂತೆ, ಭದ್ರ ಯೋಜನೆ, ಎತ್ತಿನ ಹೊಳೆ ಯೋಜನೆಯ ಜಾರಿಯ ನಿಟ್ಟಿನಲ್ಲೂ ಅನೇಕ ಮಂದಿಯ ಶ್ರಮವಿದೆ. ರಾಜ್ಯದಲ್ಲಿ ಆಡಳಿತ ನಡೆಸಿದ ಬಹುತೇಕ ಎಲ್ಲಾ ಪಕ್ಷಗಳು ಕೂಡಾ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಿರುವುದು ಹೆಮ್ಮೆಯ ವಿಚಾರ ಎಂದರು.
2004ರಲ್ಲಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಮೈತ್ರಿ ಸರ್ಕಾರವಿದ್ದಂತಹ ಸಂದರ್ಬದಲ್ಲಿ ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸಿಕೊಳ್ಳುವ ಅಪ್ಪರ್ ಭದ್ರಾ ಯೋಜನೆಗಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು. ತದ ನಂತರ ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಮೈತ್ರಿ ಸರ್ಕಾರವಿದ್ದಂತಹ ಸಂದರ್ಬದಲ್ಲಿ ಅಪ್ಪರ್ ಭದ್ರಾ ಯೋಜನೆಯ ಅನುಷ್ಠಾನವೂ ಆಯಿತು. ಇದು ಕುಮಾರಣ್ಣ ಸಂಕಲ್ಪ ಮಾಡಿದ್ದ ಕನಸೂ ಕೂಡಾ ಆಗಿತ್ತು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಎತ್ತಿನ ಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸಿತ್ತು. ಕುಡಿಯುವ ನೀರಿನ ಯೋಜನೆಗಳಲ್ಲಿ ಯಾವುದೇ ರಾಜಕೀಯ ಮೇಲಾಟಗಳಿಲ್ಲದೆ ಎಲ್ಲಾ ಪಕ್ಷಗಳು ಕೂಡಾ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಿವೆ ಎಂದು ತಿಪ್ಪೇಸ್ವಾಮಿ ತಿಳಿಸಿದರು.
ಈ ನಡುವೆ ಏನೇ ಇದ್ದರೂ ಜಿಲ್ಲೆಯಲ್ಲಿ ಅತ್ಯಂತ ಸರದಿಯೋಪಾದಿಯಲ್ಲಿ ಬರಗಾಲಕ್ಕೆ ತುತ್ತಾಗುತ್ತಲೇ ಬರುತ್ತಿರುವ ಶಿರಾ, ಮಧುಗಿರಿ, ಪಾವಗಡ ಹಾಗೂ ಕೊರಟಗೆರೆ ತಾಲ್ಲೂಕುಗಳಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಅತಿ ಜರೂರಾಗಿ ಕಲ್ಪಿಸುವುದು ಎಲ್ಲರ ಉದ್ದೇಶವಾಗಬೇಕು ಎಂದರು.
ಸತ್ಯಣ್ಣ ಅವರ ಅಕಾಲಿಕ ಮರಣದಿಂದ ಪಕ್ಷದ ಕಾರ್ಯಕರ್ತರು ಯಾರೂ ಕೂಡಾ ಆತಂಕಪಡಬಾರದು ನಿಮ್ಮೊಂದಿಗೆ ಪಕ್ಷದ ವರಿಷ್ಠರಿದ್ದು ಪಕ್ಷ ಸಂಘಟನೆಗೆ ವ್ಯಾಪಕ ಒತ್ತು ನೀಡಲು ಸಿದ್ಧರಿದ್ದೇವೆ. ಬರುವ ಉಪ ಚುನಾವಣೆಯ ಅಭ್ಯರ್ಥಿ ಯಾರೆಂಬುದನ್ನು ಪಕ್ಷದ ವರಿಷ್ಠರೇ ತಿಳಿಸುತ್ತಾರೆ. ಪ್ರತೀ ಮಂಗಳವಾರ ನಾನು ಶಿರಾದಲ್ಲಿ ಎಲ್ಲಾ ಸಾರ್ವಜನಿಕರ ಸಂಪರ್ಕಕ್ಕೆ ಲಭ್ಯವಿರುತ್ತೇನೆ ಎಂದು ಬಿ.ಎ.ತಿಪ್ಪೇಸ್ವಾಮಿ ತಿಳಿಸಿದರು.
ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಅಂಜನಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ, ರಾಜ್ಯ ಜೆ.ಡಿ.ಎಸ್. ಪ್ರ.ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್, ಜಿ.ಪಂ. ಮಾಜಿ ಸದಸ್ಯ ಸಿ.ಆರ್.ಉಮೇಶ್, ಜಿಲ್ಲಾ ಯುವ ಜೆ.ಡಿ.ಎಸ್. ಅಧ್ಯಕ್ಷ ಬೆಳ್ಳಿ ಲೋಕೇಶ್, ತಾಲ್ಲೂಕು ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ನಗರಸಭೆಯ ಮಾಜಿ ಅಧ್ಯಕ್ಷ ಆರ್.ರಾಘವೇಂದ್ರ, ತಾ.ಪಂ. ಮಾಜಿ ಅಧ್ಯಕ್ಷ ಬಿ.ಸತ್ಯಪ್ರಕಾಶ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ