ವಿಮೆ ಹಣಕ್ಕಾಗಿ ಹಮಾಲನನ್ನೇ ಕೊಂದ ವರ್ತಕ!

ದಾವಣಗೆರೆ:

     ಜೀವ ವಿಮೆ ಹಣ ಪಡೆಯುವ ದುರುದ್ದೇಶದಿಂದ ತಮ್ಮದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಮಾಲನನ್ನು ಕೊಲೆ ಮಾಡಿದ ಮಾಲೀಕನ ಮಕ್ಕಳ ಅಮಾನವೀಯ ಕೃತ್ಯವನ್ನು ಬಯಲಿಗೆಳೆದ ಹಾವೇರಿ ಜಿಲ್ಲೆಯ ಹಲಗೇರಿ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾದಲ್ಲಿ ತಲೆ ಮರೆಸಿಕೊಂಡಿದ್ದವನು ಸೇರಿದಂತೆ ಇಬ್ಬರು ಸಹೋದರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ನಗರದ ಎಪಿಎಂಸಿ ಈರುಳ್ಳಿ ಮಾರುಕಟ್ಟೆಯಲ್ಲಿರುವ ಹಲಗೇರಿ ಗುರುರಾಜ ಜ್ಯೋತಿ ಬಣ್ಣದ ಹಲಗೇರಿ ಗುರಣ್ಣ ಅಂಡ್ ಸನ್ಸ್ ಅಂಗಡಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ದಾವಣಗೆರೆಗೆ ಸಮೀಪದ ಬಸಾಪುರದ ವೀರೇಶ್ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕನ ಮಕ್ಕಳಾದ ಮೃತ್ಯುಂಜಯ ಅಲಿಯಾಸ್ ಮುತ್ತು(30 ವರ್ಷ), ಬಸವೇಶ ಅಲಿಯಾಸ್ ಬಸುವ(26 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ.

     ಹಲಗೇರಿಯ ಈರುಳ್ಳಿ ವ್ಯಾಪಾರಿ ಗುರುರಾಜ ಜ್ಯೋತಿ ಬಣ್ಣದ ಎಂಬುವರ ಇಬ್ಬರು ಮಕ್ಕಳಾದ ಮೃತ್ಯುಂಜಯ, ಬಸವೇಶ ದಾವಣಗೆರೆಯಲ್ಲಿ ಈರುಳ್ಳಿ ವ್ಯಾಪಾರ ಮಾಡುತ್ತಿದ್ದರು. ಅದೇ ಅಂಗಡಿಯಲ್ಲಿ ಬಸಾಪುರದ ವೀರೇಶ ಹಮಾಲಿ ಕೆಲಸ ಮಾಡಿಕೊಂಡಿದ್ದ. ಗುರಣ್ಣನ ಅಂಗಡಿ ಲೈಸೆನ್ಸ್ ಮಗ ಮೃತ್ಯುಂಜಯ ಹೆಸರಿನಲ್ಲಿತ್ತು. ಕೋಟ್ಯಾಂತರ ರೂ. ಸಾಲವನ್ನೂ ಗುರಣ್ಣ ಅಂಗಡಿ ಮಾಲೀಕರು ಮಾಡಿಕೊಂಡಿದ್ದರು.

      ದಿನದಿನಕ್ಕೂ ಸಾಲ ಕೊಟ್ಟವರ ಕಾಟ ಹೆಚ್ಚಾಗಿತ್ತು. ದುಡಿದ ದುಡ್ಡಿನಲ್ಲಿ ಕೋಟ್ಯಾಂತರ ರೂಪಾಯಿ ಸಾಲ ತೀರಿಸುವುದು ಕಷ್ಟವೆಂದು ಆಲೋಚಿಸಿದ ಮೃತ್ಯುಂಜಯ ತಾನೇ ಸಾಯುವ, ನಂತರ ವಿಮಾ ಹಣ ಪಡೆಯುವ ಬಗ್ಗೆ ಯೋಚಿಸಿ, ಇದಕ್ಕೆ ತನ್ನದೇ ಅಂಗಡಿಯ ಹಮಾಲಿ ಕೆಲಸಗಾರ ಬಸಾಪುರದ ವೀರೇಶನನ್ನೇ ಬಳಸಿಕೊಂಡು, ತನ್ನ ಹೆಸರಿನಲ್ಲಿದ್ದ ವಿಮಾ ಹಣ ಪಡೆಯಲು ಮೃತ್ಯುಂಜಯ ಮತ್ತು ಆತನ ಸಹೋದರ ಬಸವೇಶ ಸೇರಿಕೊಂಡು ವ್ಯವಸ್ಥಿತ ಸಂಚು ರೂಪಿಸಿದ್ದರು.

       ಏ.26ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದ ಬಳಿ ನಡೆದಿದ್ದ ಕಾರು ಅಪಘಾತದಲ್ಲಿ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಸಜೀವ ದಹನವಾಗಿದ್ದ. ಹೀಗಾಗಿ ಶವ ಗುರುತಿಸುವುದೇ ಕಷ್ಟವಾಗಿತ್ತು. ಇದೊಂದು ವ್ಯವಸ್ಥಿತ ಕೊಲೆಯೆಂಬ ಶಂಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಹಲಗೇರಿ ಪೆÇಲೀಸರೂ ತನಿಖೆ ಚುರುಕುಗೊಳಿಸಿದ್ದರು. ಅಲ್ಲಿ ಸತ್ತಿದ್ದು ಈರುಳ್ಳಿ ವರ್ತಕ ಹಲಗೇರಿ ಗುರುರಾಜರ ಮಗ ಮೃತ್ಯುಂಜಯ ಎಂಬುದಾಗಿ ಬಿಂಬಿಸಲು ದಾವಣಗೆರೆ ಅಂಗಡಿ ಹಾಗೂ ಮನೆ ಬಳಿ ಬ್ಯಾನರ್ ಸಹ ಹಾಕಿ ಮೃತ್ಯುಂಜಯನಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು.

      ಆದರೆ, ಹಲಗೇರಿ ಪೆÇಲೀಸರು ಗುರಣ್ಣನ ಮತ್ತೊಬ್ಬ ಮಗ ಬಸವೇಶನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುತ್ತಿದ್ದಂತೆಯೇ ಪೆÇಲೀಸರ ಮುಂದೆ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ಅಷ್ಟೇ ಅಲ್ಲ, ಕಾರಿನಲ್ಲಿ ಸಜೀವ ದಹನಗೊಂಡಿದ್ದು ತಮ್ಮ ಸಹೋದರ ಮೃತ್ಯುಂಜಯ ಅಲ್ಲ, ತಮ್ಮ ಅಂಗಡಿ ಹಮಾಲಿ ಕೆಲಸಗಾರ ವೀರೇಶನೆಂಬ ಸಂಗತಿಯನ್ನು ಬಿಚ್ಚಿಟ್ಟಿದ್ದಾನೆ. ತಮಗೆ ನೀಡಬೇಕಿದ್ದ ಸಾಲದ ಹಣ ನೀಡದೇ, ಕೆಲಸಕ್ಕೆ ಬಂದಿರಲಿಲ್ಲ. ಹಣ ಕೇಳಿದ್ದಕ್ಕೆ ತಮ್ಮ ತಾಯಿಗೂ ನಿಂದನೆ ಮಾಡಿದ್ದ. ಈ ಬಗ್ಗೆ ಮೃತ್ಯುಂಜಯ ಮೊಣಕೈನಿಂದ ಗುದ್ದಿದಾಗ ಸಾವನ್ನಪ್ಪಿದ್ದ ಎಂದು ಹೇಳಿದ್ದಾನೆ. ನಂತರ ಹಲಗೇರಿ ಬಳಿ ಕಾರು ಅಪಘಾತದಂತಹ ವಾತಾವರಣ ಸೃಷ್ಟಿ ಮಾಡಿದ್ದೆವೆಂಬ ವಿಚಾರವನ್ನು ಬಸುವ ಬಾಯಿ ಬಿಟ್ಟಿದ್ದಾನೆ.

       ವಿಮಾ ಹಣಕ್ಕಾಗಿ ಈ ಹತ್ಯೆ ಸಂಚು ನಡೆಯಿತೇ ಎಂಬ ಮಾತು ಕೇಳಿ ಬರುತ್ತಿದ್ದು, ಪೊಲೀಸ್ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಬಯಲಾಗಬೇಕಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ತನ್ನ ಅಣ್ಣ ಮೃತ್ಯುಂಜಯ ತಲೆ ಮರೆಸಿಕೊಂಡ ವಿಚಾರವನ್ನು ಬಸವೇಶ ಪೊಲೀಸರಲ್ಲಿ ಹೊರ ಹಾಕಿದ್ದಾನೆ. ತಕ್ಷಣವೇ ಕಾರ್ಯೋನ್ಮುಖರಾದ ರಾಣೆಬೆನ್ನೂರು ಸಿಪಿಐ, ಹಲಗೇರಿ ಎಸ್‍ಐ ನೇತೃತ್ವದಲ್ಲಿ ಪೊಲೀಸರು ಕೊಲ್ಕತ್ತಾದಲ್ಲಿ ತಲೆ ಮರೆಸಿಕೊಂಡಿದ್ದ ಮೃತ್ಯುಂಜಯನನ್ನು ಬಂಧಿಸಿ, ಕರೆ ತಂದಿದ್ದಾರೆಂದು ಮೂಲಗಳು ತಿಳಿಸಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap