ದಾವಣಗೆರೆ
ಕೇಂದ್ರ ಸರ್ಕಾರದ ಮಾದರಿಯಲ್ಲಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಪರಿಶಿಷ್ಟ ಪಂಗಡಕ್ಕೆ ರಾಜ್ಯ ಸರ್ಕಾರವು, ಶೇ.7.5 ರಷ್ಟು ಮೀಸಲಾತಿ ಕಲ್ಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜೂನ್ 9ರಂದು ಹರಿಹರ ತಾಲೂಕಿನ ಮಹರ್ಷಿ ವಾಲ್ಮೀಕಿ ಗುರುಪೀಠದಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ನಗರದ ನಾಯಕ ವಿದ್ಯಾರ್ಥಿನಿಲಯದ ವಾಲ್ಮೀಕಿ ಸಮುದಾಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನನಂದಪುರಿ ಸ್ವಾಮೀಜಿ, ಅಂದು ಬೆಳಿಗ್ಗೆ 10.30ಕ್ಕೆ ಗುರುಪೀಠದ ಆವರಣದಲ್ಲಿರುವ ಲಿಂಗೈಕ್ಯ ಪುಣ್ಯಾನಂದಪುರಿ ಸ್ವಾಮೀಜಿಯವರ ಕರ್ತೃ ಗದ್ದಿಗೆಗೆ ಪೂಜೆ ಸಲ್ಲಿಸಿ, ಪಾದಯಾತ್ರಯ ಮೂಲಕ ದಾವಣಗೆರೆ, ಆನಗೋಡು, ಭರಮಸಾಗರ, ಚಿತ್ರದುರ್ಗ, ಐಮಂಗಲ, ಹಿರಿಯೂರು, ಉಜ್ಜನಕುಂಟೆ, ಶಿರಾ, ದೊಡ್ಡಾಲದ ಮರ, ತುಮಕೂರು, ದಾಬಸ್‍ಪೇಟೆ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮೂಲಕ ಬೆಂಗಳೂರಿನ ಕೆ.ಆರ್. ಪುರಂ, ಹೆಬ್ಬಾಳು ಮಾರ್ಗವಾಗಿ ವಿಧಾನಸೌಧಕ್ಕೆ ಆಗಮಿಸಿ, ಅಲ್ಲಿನ ವಾಲ್ಮೀಕಿ ಮೂರ್ತಿಗೆ ಮಾಲೆ ಹಾಕಿ, ತದನಂತರ ಪ್ರೀಢಂ ಪಾರ್ಕ್‍ಗೆ ತೆರಳಿ ಅಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರವು ಈಗಾಗಲೇ ಪರಿಶಿಷ್ಟ ಪಂಗಡಕ್ಕೆ ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಶೇ.7.5ರಷ್ಟು ಮೀಸಲಾತಿ ನೀಡುತ್ತಿದೆ. ಆದರೆ, ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದ ಜನರು ಎಲ್ಲರಂದಲ್ಲೂ ಹಿಂದುಳಿದಿದ್ದರೂ ಸಗ ರಾಜ್ಯ ಸರ್ಕಾರ ಪ್ರಸ್ತುತ ನೀಡುತ್ತಿರುವ ಶೇ.3ರಷ್ಟು ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಲು ಮೀನಾಮೇಷ ಎಣಿಸುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರದ ಕಣ್ಣು ತೆರೆಸಬೇಕೆಂಬ ಉದ್ದೇಶದಿಂದ ಈ ಪಾದಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕಾಗಿ ಅನೇಕ ಬಾರಿ ಮನವಿ, ಹೋರಾಟ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಗಳು ನಮ್ಮ ಸಮುದಾಯವನ್ನು ತುಳಿಯುವ ಹುನ್ನಾರ ನಡೆಸಿವೆ. ಅದಕ್ಕಾಗಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದು, ಅದಕ್ಕೂ ಮುನ್ನ ಅಂದರೆ ಜೂ. 6ರಂದು ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕೆಂದು ಕರೆ ನೀಡಿದರು.
ನಮ್ಮ ಹಕ್ಕಾಗಿರುವ ಶೇ.7.5ರಷ್ಟು ಮೀಸಲಾತಿ ನೀಡಲು ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರವು, ನಮ್ಮ ಇತರೆ ಸೋದರ ಸಮುದಾಯಗಳನ್ನು ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಸೇರಿಸುವ ಉದ್ದೇಶದಿಂದ ಕುಲಶಾಸ್ತ್ರ ಅಧ್ಯಯನ ನಡೆಸಲು ಆದೇಶವಿದೆ. ಪರಿಶಿಷ್ಟ ಪಂಗಡಕ್ಕೆ ಬೇರಿ ಸಮಾಜಗಳನ್ನು ಸೇರಿಸುವುದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಆದರೆ, ಅದಕ್ಕೂ ಮುನ್ನ ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.
ಪರಿಶಿಷ್ಟ ಪಂಗಡಕ್ಕಾಗಿಯೇ ಪ್ರತ್ಯೇಕ ಸಚಿವಾಲಯ ಆರಂಭಿಸಬೇಕು. ರಾಜ್ಯದ ಯಾವುದಾದರೊಂದು ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಮಹರ್ಷಿಗಳ ಹೆಸರನ್ನು ನಾಮಕರಣ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈ ಹೋರಾಟವನ್ನು ಶ್ರೀಮಠದಿಂದ ಹಮ್ಮಿಜಕೊಳ್ಳಲಾಗಿದೆ ಎಂದರು.
ಈ ಸಂದರ್ಭ ಸಮಾಜ ಮುಖಂಡರಾದ ಎಚ್.ಕೆ. ರಾಮಚಂದ್ರಪ್ಪ, ಎ.ಬಿ.ರಾಮಚಂದ್ರಪ್ಪ, ಬಿ. ವೀರಣ್ಣ, ಓಬಳೇಶಪ್ಪ, ವಿನಾಯಕ ಪೈಲ್ವಾನ್, ಎಂ.ಬಿ. ಹಾಲಪ್ಪ, ಮಲ್ಲಿಕಾರ್ಜುನ ಗುಮ್ಮನೂರು, ಕುರ್ಕಿ ದೇವೇಂದ್ರಪ್ಪ, ಅಣ್ಣಾಪುರ ಹೇಮಣ್ಣ, ಕರೂರು ಗಣೇಶ್, ಶ್ಯಾಗಲೆ ಸತೀಶ್, ಅಣಜಿ ಅಂಜಿನಪ್ಪ, ಆರನೇ ಕಲ್ಲು ಹನುಮಂತಪ್ಪ, ಕಂದಗಲ್ ಮಂಜಪ್ಪ, ಆಲೂರು ಹನುಮಂತಪ್ಪ, ಕರಿ ಓಬಣ್ಣ ಮತ್ತಿತರರು ಹಾಜರಿದ್ದರು.