ದಾವಣಗೆರೆ: .
ಪರಿಶಿಷ್ಟ ಪಂಗಡಕ್ಕೆ ಪ್ರಸ್ತುತ ನೀಡುತ್ತಿರುವ ಮೀಸಲಾತಿಯನ್ನು ಶೇ.3ರಿಂದ 7.5ಕ್ಕೆ ಹೆಚ್ಚಿಸಲು ಒತ್ತಾಯಿಸಿ, ಇಂದಿನಿಂದ (ಜೂ.9ರಿಂದ) ರಾಜನಹಳ್ಳಿ ವಾಲ್ಮೀಕಿ ಗುರುಪೀಠದಿಂದ ಶ್ರೀಪ್ರಸನ್ನನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಡಗಳ ನೌಕರರ ಸಂಘದ ದಾವಣಗೆರೆ ಜಿಲ್ಲಾ ಘಟಕ ಬೆಂಬಲ ಸೂಚಿಸಿದೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಹೆಚ್.ಆರ್.ಮಹಾರುದ್ರಪ್ಪ, ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ, ಶ್ರೀಪ್ರಸನ್ನನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ರಾಜನಹಳ್ಳಿಯಿಂದ ರಾಜಧಾನಿಯ ವರೆಗೆ ಆಯೋಜಿಸಿರುವ ಪಾದಯಾತ್ರೆಯು ಇಂದು ಸಂಜೆ ದಾವಣಗೆರೆಯನ್ನು ಪ್ರವೇಶಿಸಲಿದ್ದು, ಜೂ.10ರ ಬೆಳಿಗ್ಗೆ ದಾವಣಗೆರೆಯಿಂದ ಆನಗೋಡಿಗೆ ತೆರಳಲಿದೆ.
ಆದ್ದರಿಂದ ಪರಿಶಿಷ್ಟ ಪಂಗಡದ ನೌಕರರು ಜೂ.10ರಂದು ಒಂದು ದಿನ ಸಾಂದರ್ಭಿಕ ರಜೆ ಹಾಕಿ, ಈ ಪಾದಯಾತ್ರೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಸಂಘದ ರಾಜ್ಯ ನಿರ್ದೇಶಕ ದಾಗಿನಕಟ್ಟೆ ಪರಮೇಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಪಂಗಡವು 44 ಲಕ್ಷ ಜನಸಂಖ್ಯೆ ಹೊಂದಿದ್ದು, ರಾಜ್ಯದ 4ನೇ ಅತಿದೊಡ್ಡ ಸಮುದಾಯ ನಮ್ಮದ್ದಾಗಿದೆ. ಆದರೆ, ರಾಜ್ಯ ಸರ್ಕಾರ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸದೇ, ಪರಿಶಿಷ್ಟ ಪಂಗಡಕ್ಕೆ ಅನ್ಯಾಯ ಮಾಡಿದ್ದು, ತಕ್ಷಣವೇ ರಾಜ್ಯ ಸರ್ಕಾರವು ಸಹ ಕೇಂದ್ರ ಸರ್ಕಾರದ ಮಾದರಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿದರು.
ಈಗಿರುವ ಮೀಸಲಾತಿಯ ಪರಿಣಾಮ ಮೂರು ರೊಟ್ಟಿಯಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ 51 ಉಪ ಜಾತಿಗಳ ಜನರು ಕಿತ್ತಾಟ ನಡೆಸುತ್ತಿದ್ದೇವೆ. ಅಂತಹದರಲ್ಲಿ ರಾಜಕೀಯ ಲಾಭ ಪಡೆಯಬೇಕೆಂಬ ದುರುದ್ದೇಶದಿಂದ ಕೆಲ ರಾಜಕಾರಣಿಗಳು ಬೇರೆ ಸಮುದಾಯವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹುನ್ನಾರ ನಡೆಸುತ್ತಿದ್ದು, ರಾಜ್ಯ ಸರ್ಕಾರವು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಈ ಪ್ರಯತ್ನವನ್ನು ತಕ್ಷಣವೇ ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಎಂ.ಆರ್.ಪ್ರಕಾಶ್, ಎನ್.ಅಜ್ಜಯ್ಯ, ಡಿ.ಹಾಲಪ್ಪ, ಪರಶುರಾಮಪ್ಪ ಮತ್ತಿತರರು ಹಾಜರಿದ್ದರು.