ದಾವಣಗೆರೆ :
ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ನಾಯಕ ನಟರಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರ ಪಡ್ಡೆಹುಲಿ ಏ.19ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಗುರು ದೇಶಪಾಂಡೆ ತಿಳಿಸಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಉಪ್ಪು, ಹುಳಿ, ಖಾರ ಎಂಬ ಚಿತ್ರವನ್ನು ನಿರ್ಮಿಸಿದ್ದ ರಮೇಶ್ ರೆಡ್ಡಿಯವರೇ ಈ ಚಿತ್ರವನ್ನು ತೇಜಸ್ವಿ ಎಂಟರ್‍ಪ್ರೈಸೆಸ್ ಬ್ಯಾನರ್ ಮೂಲಕ ನಿರ್ಮಾಣ ಮಾಡಿದ್ದು, ಈ ಚಿತ್ರವನ್ನು ಚಿತ್ರದುರ್ಗ, ದಾವಣಗೆರೆ, ಮಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಬಿಡುಗಡೆಗೆ ಸಿದ್ಧವಾಗಿರುವ ಪಡ್ಡೆಹುಲಿ ಚಿತ್ರವು ರಾಜ್ಯದ 170 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಮಾಹಿತಿ ನೀಡಿದರು.
ಚಿತ್ರದ ನಾಯಕನ ತಂದೆಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತವರ ಜೋಡಿಯಾಗಿ ಸುಧಾರಾಣಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾಗಿ ನಿಶ್ವಿಕಾ ನಾಯ್ಡು, ಐಶ್ವರ್ಯ ಪ್ರಸಾದ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಒಟ್ಟು 10 ಹಾಡುಗಳಿದ್ದು, ಎರಡು ಹಾಡುಗಳನ್ನು ದಾವಣಗೆರೆಯಲ್ಲೇ ಚಿತ್ರೀಕರಿಸಲಾಗಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣದಲ್ಲಿ ದುರ್ಗದ ವೈಭವವನ್ನು ಮತ್ತೊಮ್ಮೆ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದು ಅವರು ವಿವರಿಸಿದರು.
ನಾಯಕ ಶ್ರೇಯಸ್ ಮಾತನಾಡಿ, ಐದು ವರ್ಷದ ಹಿಂದೆಯೇ ನಾನು ನಾಯಕ ನಟನಾಗಿ ಅಭಿನಯಿಸಬೇಕೆಂಬ ನಿರ್ಧಾರ ಮಾಡಿದ್ದೆ. ಅದಕ್ಕಾಗಿ ಆಕ್ಟಿಂಗ್, ಡ್ಯಾನ್ಸ್, ಫೈಟ್ಸ್ ತರಬೇತಿ ಪಡೆದಿದ್ದೇನೆ. ನನ್ನ ತಂದೆಯಾಗಿ ಅಭಿನಯಿಸಿರುವ ರವಿಚಂದ್ರನ್ ಸರ್ ಜೊತೆ ಕೆಲಸ ಮಾಡುವಾಗ ತುಂಬಾ ವಿಷಯಗಳನ್ನು ಕಲಿತಿದ್ದೇನೆ. ಪಡ್ಡೆ ಹುಲಿ ಚಿತ್ರ ಫ್ರೆಶ್ ಲವ್ ಸ್ಟೋರಿಯಾಗಿದೆ. ತಂದೆ-ಮಗನ ಸಂಬಂಧದ ಕಥೆ ಕೂಡ ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೇಳಿದರು.
ನಾಯಕಿ ನಿಶ್ವಿಕಾ ನಾಯ್ಡು ಮಾತನಾಡಿ, ಇದು ನನಗೆ ಮೂರನೇ ಚಿತ್ರವಾಗಿದ್ದು, ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಂತಹ ದೊಡ್ಡ ಬ್ಯಾನರ್‍ನಲ್ಲಿ ಕೆಲಸ ಮಾಡಿದ್ದು ನನಗೆ ಖುಷಿ ತಂದಿದೆ. ಚಿತ್ರ ಅದ್ಭುತವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರು ಚಿತ್ರವನ್ನು ನೋಡಿ ಬೆಂಬಲಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಚಿತ್ರ ತಂಡದ ಐಶ್ವರ್ಯ ಪ್ರಸಾದ್, ಅಮಿತ್ ಮತ್ತಿತರರು ಹಾಜರಿದ್ದರು.