ದಾವಣಗೆರೆ :
ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಡಿಸೆಂಬರ್ 16ರಿಂದ ಭತ್ತ ಖರೀದಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಭತ್ತ ಮಾರಾಟ ಮಾಡುವ ರೈತರು ಡಿ.5ರಿಂದ 15 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು 2017-18ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತ ಕ್ವಿಂಟಾಲ್ಗೆ 1750 ರೂ. ಹಾಗೂ ಗ್ರೇಡ್-ಎ ಭತ್ತಕ್ಕೆ 1770 ರೂ. ದರ ನಿಗದಿ ಮಾಡಿದ್ದು, ಡಿ.16ರಿಂದ ನೋಂದಾಯಿತ ರೈತರಿಂದ ಭತ್ತ ಖರೀದಿ ಆರಂಭಿಸಲಾಗುವುದು. ಹೀಗಾಗಿ ಡಿ.5ರಿಂದ 15ರ ಒಳಗೆ ರೈತರು ಹೆಸರು ನೋಂದಾಯಿಸಿಕೊಂಡು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
2 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಗುರಿ ನೀಡಿದೆ. ಹೀಗಾಗಿ ಪ್ರತಿ ರೈತರಿಂದ 40 ಕ್ವಿಂಟಾಲ್ ಭತ್ತವನ್ನು ಮಾತ್ರ ಖರೀದಿಸಲಾಗುತ್ತದೆ. ಭತ್ತ ಮಾರಾಟ ಮಾಡುವ ರೈತರು ಸಂಬಂಧಿಸಿದ ಜಮೀನಿನ ಪಹಣಿಯನ್ನು ತರಬೇಕು. ಪಹಣಿಯಲ್ಲಿ ಭತ್ತ ಎಂಬುದಾಗಿ ನಮೂದಾಗಿರಬೇಕು. ಒಂದು ವೇಳೆ ಪಹಣಿಯಲ್ಲಿ ನಮೂದಾಗದೇ ಇದ್ದರೆ, ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಯಿಂದ ದೃಢೀಕರಣ ಪತ್ರ ತರಬೇಕು. ಅಲ್ಲದೆ, ಇದರೊಂದಿಗೆ ಆಧಾರ್ ಕಾರ್ಡ್, ಭತ್ತ ಖರೀದಿಯ ಹಣ ಜಮಾ ಮಾಡಲು ಬ್ಯಾಂಕ್ ವಿವರವುಳ್ಳ ಪಾಸ್ಬುಕ್ ವಿವರ ನೀಡುವುದು ಕಡ್ಡಾಯವಾಗಿದೆ ಎಂದರು.
ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತವನ್ನು ಮಾರಲು ಇಚ್ಚೆ ಪಡುವ ರೈತರು ತಮ್ಮ ನೋಂದಣಿಯನ್ನು ಇಲಾಖಾ ವೆಬ್ಸೈಟ್ನಲ್ಲಿ ಮಾಡಿಕೊಳ್ಳಬಹುದು. ಇದಕ್ಕಾಗಿ ಸಂಗ್ರಹಣಾ ಏಜೆನ್ಸಿಯು ಆಯಾ ತಾಲ್ಲೂಕು ಕೇಂದ್ರಗಳ ಎಪಿಎಂಸಿ ಪ್ರಾಂಗಣದಲ್ಲಿರುವ ಆಹಾರ ನಾಗರೀಕ ಸರಬರಾಜು ನಿಗಮದ ಸಗಟು ಮಳಿಗೆ(ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ)ಗಳಲ್ಲಿ ರೈತರ ನೋಂದಣಿಗೆ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಡಾ.ಮಂಜುನಾಥನ್ ಮಾತನಾಡಿ, ಸರ್ಕಾರ ಭತ್ತ ಖರೀದಿಗೆ 3 ಏಜೆನ್ಸಿಗಳನ್ನು ಗೊತ್ತುಪಡಿಸಿದ್ದು, ಅದರಂತೆ ದಾವಣಗೆರೆ ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವು ಸಂಗ್ರಹಣಾ ಏಜೆನ್ಸಿಯಾಗಿದ್ದು, ಜಿಲ್ಲೆಯಲ್ಲಿ ಕಾರ್ಯನಿರತರಾಗಿರುವ ಅಕ್ಕಿ ಗಿರಣಿಗಳನ್ನು ಭತ್ತ ಖರೀದಿ ಕಾರ್ಯಕ್ಕೆ ನೋಂದಾಯಿಸಿಕೊಂಡು ಅಕ್ಕಿ ಗಿರಣಿಗಳ ಹಲ್ಲಿಂಗ್ ಹಾಗೂ ಶೇಖರಣಾ ಸಾಮಥ್ರ್ಯಕ್ಕನುಗುಣವಾಗಿ ಸಂಗ್ರಹಣೆ ಮಾಡಲಾಗುವುದು.
ದಾಯಿಸಿಕೊಂಡ ರೈತರಿಗೆ ಇಲಾಖೆಯಿಂದ ಕಳುಹಿಸಲಾಗುವ ಎಸ್.ಎಂ.ಎಸ್ ಆಧಾರದಲ್ಲಿ ಸಂಬಂಧಿಸಿದ ಅಕ್ಕಿ ಗಿರಣಿಗೆ ಭತ್ತದ ಮಾದರಿ(ಸ್ಯಾಂಪಲ್)ಗಳನ್ನು ರೈತರು ನೀಡಬೇಕು. ಅಕ್ಕಿ ಗಿರಣಿ ಮಾಲೀಕರು ರೈತರಿಂದ ಸ್ವೀಕರಿಸಿದ ಭತ್ತದ ಮಾದರಿಗಳನ್ನು ಸಂಗ್ರಹಣಾ ಏಜೆನ್ಸಿಗಳಿಂದ ನೇಮಕವಾಗುವ ಗುಣಮಟ್ಟ ಪರಿಶೀಲನಾ ಅಧಿಕಾರಿಯ ಮೂಲಕ ಗುಣಮಟ್ಟ ದೃಢೀಕರಣ ಪಡೆದ ನಂತರವೇ ಅಕ್ಕಿ ಗಿರಣಿಯವರು ಭತ್ತವನ್ನು ಖರೀದಿಸಿ ಸಂಗ್ರಹಿಸಬೇಕು. ಭತ್ತವನ್ನು ರೈತರು ತಮ್ಮ ಚೀಲಗಳಲ್ಲಿ ತಂದು ಅಕ್ಕಿ ಗಿರಣಿಗೆ ಸಲ್ಲಿಸಿದಾಗ, ಪ್ರತಿ ಕ್ವಿಂಟಾಲ್ ಚೀಲಕ್ಕೆ 6 ರೂ.ಗಳಂತೆ ಖರೀದಿ ಏಜೆನ್ಸಿಗಳು ಪಾವತಿಸಲಿವೆ ಎಂದು ಮಾಹಿತಿ ನೀಡಿದರು.
ಅಕ್ಕಿ ಗಿರಣಿ ಮಾಲೀಕರಿಂದ ಭತ್ತದ ಖರೀದಿ ವಿವರ ಲಭ್ಯವಾದ ತಕ್ಷಣ ಏಜೆನ್ಸಿ ವತಿಯಿಂದ ಭತ್ತವನ್ನು ಸರಬರಾಜು ಮಾಡಿದ ರೈತನಿಗೆ 3 ದಿನಗಳ ಒಳಗಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲಾಗುವುದು. ಹೆಚ್ಚಿನ ವಿವರಗಳಿಗೆ ಮುನೀರ್ ಬಾಷಾ, ಆಹಾರ ನಿಮಗದ ಜಿಲ್ಲಾ ವ್ಯವಸ್ಥಾಪಕರು, ಮೊ ಸಂ; 8310649796 ನ್ನು ಸಂಪರ್ಕಿಸಬಹುದು ಎಂದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಆಹಾರ ನಿಮಗದ ಜಿಲ್ಲಾ ವ್ಯವಸ್ಥಾಪಕ ಮುನೀರ್ ಬಾಷಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ