ದಾವಣಗೆರೆ:
ಕಳೆದ ರಾತ್ರಿ ಜಿಲ್ಲೆಯಲ್ಲಿ ಗುಡುಗು, ಮಿಂಚು ಸಮೇತ ಸುರಿದ ಭಾರೀ ಮಳೆಯಿಂದಾಗಿ ಅಂದಾಜು 600 ಎಕರೆಗೂ ಅಧಿಕ ಭತ್ತದ ಬೆಳೆ ಹಾನಿಗೆ ಈಡಾಗಿದೆ.ನಿನ್ನೆ ರಾತ್ರಿ ಸುರಿದ ಮಳೆಯ ಆರ್ಭಟಕಕ್ಕೆ ತಾಲೂಕಿನ ಕಡ್ಲೇಬಾಳು, ಆವರಗೊಳ್ಳ, ಕಕ್ಕರಗೊಳ್ಳ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕೈಗೆ ಬಂದಿದ್ದ ಭತ್ತದ ಬೆಳೆ ನೆಲ ಕಚ್ಚಿದ್ದು, ಸಾಲು ಸಾಲು ಬೆಳೆ ಕಳೆದುಕೊಂಡಿದ್ದ ರೈತರು ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವುದರಿಂದ ರೈತನ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇನ್ನೂ ತಾಲೂಕಿನ ಬೇತೂರು, ಕಾಡಜ್ಜಿ, ಮಾಗಾನಹಳ್ಳಿ, ಬೂದಾಳ್ ಸೇರಿದಂತೆ ವಿವಿಧೆಡೆ ಜಮೀನುಗಳಲ್ಲಿ ಅಪಾರ ನೀರು ನಿಂತಿದ್ದು, ಸುಮಾರು 600 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಹಾನಿಗೆ ತುತ್ತಾಗಿದೆ. ಹೀಗಾಗಿ ತಾವು ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬಾರದ ಕಾರಣ ತೀವ್ರ ಚಿಂತೆಗೆ ಈಡಾಗಿದ್ದಾರೆ.
ಕಳೆದ ವರ್ಷ ತೀವ್ರ ಬರದಿಂದ ಕಂಗೆಟ್ಟಿದ್ದ ರೈತರು ಈ ಬಾರಿ ಅತಿವೃಷ್ಟಿಯಿಂದಾಗಿ ತತ್ತರಿಸಿ ಹೋಗಿದ್ದು, ದಿಕ್ಕೇ ತೋಚದಂತಗಿದೆ. ಮಳೆಗಾಲದ ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಭದ್ರಾ ಡ್ಯಾಂ ತುಂಬಿದ್ದರಿಂದ ಈ ಬಾರಿಯಾದರೂ ಬೆಳೆ ಕೈ ಹಿಡಿಯುವ ವಿಶ್ವಾಸದಲ್ಲಿದ್ದ ರೈತರ ನಿರೀಕ್ಷೆಯನ್ನೇ ಬುಧವಾರ ರಾತ್ರಿ ಸುರಿದ ಮಳೆಯು ಹುಸಿ ಗೊಳಿಸಿದೆ.
ಕಟಾವಿಗೆ ಬಂದಿದ್ದ ಭತ್ತವನ್ನು ಇನ್ನು 2-3 ದಿನದಲ್ಲೇ ರೈತರು ಕಟಾವು ಮಾಡಿಸುವುದಕ್ಕೂ ಸಜ್ಜಾಗಿದ್ದರು. ಆದರೆ, ಕಳೆದ ರಾತ್ರಿ 9ರಿಂದ ಸುರಿಯಲಾರಂಭಿಸಿದ ಮಳೆಯು ರೈತರ ನೆಮ್ಮದಿಯನ್ನೇ ಕಸಿದುಕೊಂಡಿದೆ. ಭಾರೀ ಗಾತ್ರದ ಹನಿಗಳ ಜೊತೆಗೆ ಜೋರಾಗಿ ಬೀಸುತ್ತಿದ್ದ ಗಾಳಿಯು ಭತ್ತದ ಬೆಳೆಯು ಮತ್ತಷ್ಟು ನೆಲ ಕಚ್ಚುವಂತೆ ಮಾಡಿದೆ. ಸದ್ಯಕ್ಕೆ ಭತ್ತದ ಗದ್ದೆಗಳು ಮುಳುಗಡೆಯಾಗುವಷ್ಟು ಅಚ್ಚುಕಟ್ಟು ಕಡೇ ಭಾಗದ ಗದ್ದೆಗಳು ಜಲಾವೃತವಾಗಿವೆ.
ಪದೇಪದೇ ಬೆಳೆ ನಷ್ಟಕ್ಕೆ ತುತ್ತಾದ ಪ್ರದೇಶಗಳಿಗೆ ಕ್ಷೇತ್ರದ ಶಾಸಕರು, ಅಧಿಕಾರಿಗಳು ಭೇಟಿ ನೀಡಿ, ಅತಿವೃಷ್ಟಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸೂಕ್ತ ಪರಿಹಾರದ ವ್ಯವಸ್ಥೆ ಮಾಡಬೇಕು. ಸರ್ಕಾರವೂ ಈ ಪರಿಸ್ಥಿತಿಯಲ್ಲಿ ಆದ್ಯತೆ ಮೇಲೆ ರೈತರ ನೆರವಿಗೆ ಧಾವಿಸಲಿ ಎಂದು ಬೆಳೆ ನಷ್ಟಕ್ಕೆ ತುತ್ತಾದ ರೈತರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ