ತಿಪಟೂರು 

ಲಾಕ್‍ಡೌನ್ ಆಗಿರುವ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳನ್ನು ನಾಗರಿಕರಿಗೆ ತಲುಪಿಸುವಲ್ಲಿ ವಿಳಂಬ ಮಾಡುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತವಾರಿ ಮಂತ್ರಿ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಎಚ್ಚರಿಸಿದರು.
ತಾಲ್ಲೂಕು ಕಚೆರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಮಂತ್ರಿ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಕೋವಿಡ್-19 ಕೊರೊನಾ ಬಗ್ಗೆ ವಿವಿಧ ಇಲಾಖೆಗಳ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ತಿಪಟೂರು ತಾಲ್ಲೂಕಿನ ಪಡಿತರ ವ್ಯವಸ್ಥೆಯ ಬಗ್ಗೆ ತಿಳಿದು ಶನಿವಾರ ಬೆಳಗ್ಗೆ 52% ಪಡಿತರ ವಿತರಿಸಲಾಗಿದೆ. ಆದರೆ ಇನ್ನುಳಿದ 48% ವಿತರಿಸುವುದು ಯಾವಾಗ ಎಂದು ಪ್ರಶ್ನಿಸಿದ ಅವರು, ನ್ಯಾಯಬೆಲೆ ಅಂಗಡಿಗಳ ಮೂಲಕ ಜನರಿಗೆ ತಲುಪಬೇಕಾದ ಸಾಮಗ್ರಿ ತುರ್ತಾಗಿ ಸೇರುವಂತೆ ಕ್ರಮಕೈಗೊಳ್ಳಿ. ನಿಯಮ ಉಲ್ಲಂಘನೆ ಮಾಡುವ ಅಂಗಡಿಗಳ ವಿರುದ್ಧ ಕ್ರಮ ಜರುಗಿಸಿ.
ಈಗಾಗಲೇ ಪಡಿತರ ವಿತರಣೆ ನಡೆದಿದ್ದು, ಅಂಗಡಿ ಮಾಲೀಕರು ಸರಿಯಾಗಿ ವಿತರಣೆ ಮಾಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಇದರ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿ ನಿಲ್ಲುವುದನ್ನು ತಪ್ಪಿಸಲು ಆಯಾ ಗ್ರಾಮಗಳಿಗೆ ಪಡಿತರವನ್ನು ಕೊಂಡೊಯ್ದು ಶೀಘ್ರವಾಗಿ ಕೊಡುವ ವ್ಯವಸ್ಥೆಯನ್ನು ಮಾಡಬೇಕೆಂದು ಎಚ್ಚರಿಸಿದರು. ಸ್ಥಳೀಯವಾಗಿ ಇರುವವರಿಗೆ ಓ.ಟಿ.ಪಿ ಅವಶ್ಯಕತೆ ಇಲ್ಲ. ಬೇರೆ ಊರಿನ ಪಡಿತರ ಚೀಟಿದಾರರಿಗೆ ಓ.ಟಿ.ಪಿ ಇಂದ ಪಡಿತರ ವಿತರಿಸಿ ಎಂದು ಸೂಚಿಸಿದರು.
ಆಸ್ಪತ್ರೆಗಳಿಗೆ ರೋಗಿಗಳೆ ಬರುತ್ತಿಲ್ಲ :
ಕೊರೊನಾ ಯಾವಾಗ ಬಂತೋ ಆವಾಗಿನಿಂದ ಸಾಮಾನ್ಯ ಜ್ವರ ಮತ್ತು ಕೆಮ್ಮು ಇರುವವರು ಆಸ್ಪತ್ರೆಗಳಿಗೆ ಬರುವುದನ್ನು ನಿಲ್ಲಿಸಿದ್ದಾರೆ. ಕೂಡಲೆ ತಳಮಟ್ಟದಿಂದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರ ಸಹಾಯದಿಂದ ಗ್ರಾಮಗಳ ಮನೆಮನೆಗೆ ಭೇಟಿ ನೀಡಿ ಸೂಕ್ತವಾಗಿ ಪರೀಕ್ಷೆಗಳನ್ನು ಮಾಡಿಸುವಂತೆ ಸೂಚಿಸಿದರು. ಸ್ಥಳೀಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು. ಇದಕ್ಕಾಗಿ ನಾಳೆ ಡಿ.ಸಿ. ಕಚೇಸರಿಯಲ್ಲಿ ಎಲ್ಲಾ ಗಾರ್ಮೆಂಟ್ಸ್‍ಗಳ ಮುಖ್ಯಸ್ಥರ ಸಭೆಯನ್ನು ಕರೆದು ಸಾಧ್ಯವಾದಷ್ಟು ಮಾಸ್ಕ್ ತಯಾರಿಸಲು ಸೂಚಿಸಲಾಗುವುದು.
ಖಾಲಿ ಸೈಟ್‍ಗಳನ್ನು ಸ್ವಚ್ಛಗೊಳಿಸಿ ಅದರ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡಿ : ನಗರದಲ್ಲಿ ಸೈಟ್‍ಮಾಡಿ ಬೇರೆಲ್ಲೂ ವಾಸಿಸುತ್ತ ಸೈಟ್‍ಗಳನ್ನು ತಿಪ್ಪೆಗುಂಡಿ ಮಾಡಿರುವವರ ಸೈಟ್‍ಗಳನ್ನು ನಗರಸಭೆಯಿಂದ ಸ್ವಚ್ಛಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ಸೈಟ್‍ಗಳ ಮಾಲೀಕರಿಂದ ವಸೂಲಿ ಮಾಡಿ ಎಂದು ತಿಳಿಸಿದ ಸಚಿವರು, ಗ್ರಾಮಾಂತರ ಪ್ರದೇಶಗಳಲ್ಲೂ ಸ್ವಚ್ಛತೆಯನ್ನು ಮಾಡಬೇಕೆಂದು ತಾ.ಪಂ ಇ.ಓಗೆ ತಿಳಿಸಿದರು.
ವೈದ್ಯರ ಚೀಟಿ ಇಲ್ಲದೇ ಮಾತ್ರೆಗಳನ್ನು ನೀಡಬೇಡಿ
ಸಾಮಾನ್ಯ ಜ್ವರ ಮತ್ತು ಕೆಮ್ಮಿಗೆ ಔಷಧಿ ಅಂಗಡಿಗಳವರೆ ಸ್ವಯಂ ಡಾಕ್ಟರ್‍ಗಳಾಗಿದ್ದಾರೆ ಮತ್ತು ಪ್ಯಾರಸಿಟಮಾಲ್ ಮಾತ್ರೆಗಳನ್ನು ಕೊಡಬಾರದೆಂದು ಎಚ್ಚರಿಸಿದರು.ನಗರದ ಎಲ್ಲ 31 ವಾರ್ಡ್‍ಗಳಲ್ಲೂ ಔಷಧ ಸಿಂಪಡಣೆ ಮಾಡುವ ಕೆಲಸವನ್ನು ಪೂರೈಸಲಾಗಿದೆ. ತೋಟಗಾರಿಕಾ ಇಲಾಖೆಯಿಂದ ತರಕಾರಿ ಮತ್ತು ಹಣ್ಣುಗಳನ್ನು ರೈತರಿಂದ ಖರೀದಿಸಿ ಗ್ರಾಹಕರ ಮನೆಗೆ ತಲುಪಿಸಿ ಮಾಡಿಕೊಡಲಾಗಿದೆ. ಲಾಕ್‍ಡೌನ್ ಉಲ್ಲಂಘಿಸಿ ಓಡಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಲ್ಲಿ ತನಕ 250ಕ್ಕೂ ಹೆಚ್ಚು ಪ್ರಕರಣ ದಾಖಲು ಮಾಡಲಾಗಿದೆ. ಈ ಸಂಬಂಧ 250 ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದು, 12 ವಿವಿಧ ಸ್ವರೂಪದ ಪ್ರಕರಣ ದಾಖಲು ಮಾಡಿ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಡಿವೈಎಸ್‍ಪಿ ತಿಳಿಸಿದರು.
ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನವನ್ನು ಬಿಟ್ಟು ಹೊರಗೆ ಹೋಗುವಂತಿಲ್ಲವೆಂದು ಶಾಸಕ ಬಿ.ಸಿ.ನಾಗೇಶ್ ಎಚ್ಚರಿಸಿದರು.ಸಭೆಯಲ್ಲಿ ಉಪವಿಭಾಗಾಧಿಖಾರಿ, ಡಿ.ವೈ.ಎಸ್ಪಿ. ತಹಸೀಲ್ದಾರ್, ವೃತ್ತನೀರಿಕ್ಷಕರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
