ಹೊಸಪೇಟೆ :
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಜಿ ಹಾಕಲು ಹಾಗು ಸಹಕಾರ ಸಂಘಗಳಿಂದ ಸಾಲ ಪಡೆಯಲು ರೈತರು ಪಹಣಿಗಾಗಿ ನಿತ್ಯ ತಾಲೂಕು ಕಚೇರಿಯಲ್ಲಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ಬೆಳಿಗ್ಗೆ 10.30ರಿಂದ ತಾಲೂಕು ಕಚೇರಿಯಲ್ಲಿ ಪಹಣಿಗಾಗಿ ಸಾಲುಗಟ್ಟಿ ನಿಲ್ಲುವ ರೈತರು ಇಡೀ ದಿನ ಅದು ಒಂದೇ ಕೆಲಸಕ್ಕೆ ಸೀಮಿತವಾಗುವಂತಾಗಿದೆ. ಇದರಿಂದ ದೂರದ ಹಳ್ಳಿಗಳಿಂದ ಬಂದ ರೈತರಿಗೆ ಭಾರಿ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಇದೇ ಜೂ.27 ಕಡೆಯ ದಿನವಾಗಿದ್ದರಿಂದ ಪಹಣಿ ಪಡೆಯಲು ನೂಕು ನುಗ್ಗಲು ಉಂಟಾಗಿದೆ.
ಜೊತೆಗೆ ಸಹಕಾರ ಸಂಘಗಳಿದ ಸಾಲಕ್ಕೆ ಅರ್ಜಿ ಸಲ್ಲಿಸಲು ಪಹಣಿ ಅಗತ್ಯವಾಗಿರುವುದರಿಂದ ಸರದಿ ಸಾಲಿನಲ್ಲಿ ನಿಂತು ಪಡೆಯಬೇಕಾಗಿದೆ.ಸರ್ಕಾರ ಪಹಣಿ ವಿತರಣೆಗಾಗಿ ಹೋಬಳಿ ಕೇಂದ್ರಗಳಲ್ಲಿ ಹಾಗು ಗ್ರಾ.ಪಂ ಕಚೇರಿಯಲ್ಲಿ ಪಡೆಯಲು ವ್ಯವಸ್ಥೆ ಕಲ್ಪಿಸಿದೆ. ಆದರೆ ಸರ್ವರ್ ತೊಂದರೆಗಳಿಂದ ಗ್ರಾ.ಪಂ.ಕಚೇರಿಯಲ್ಲಿ ಪಹಣಿ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಳ್ಳಿಗಳ ರೈತರು ತಾಲೂಕು ಕಚೇರಿಗೆ ಬಂದು ಪಹಣಿ ಪಡೆಯಲು ಇಡೀ ದಿನ ಸಮಯ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಾನ್ಯ ತಹಶೀಲ್ದಾರರು ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು. ರೈತರಿಗೆ ಅನುಕೂಲವಾಗುವಂತೆ ತಾಲೂಕು ಕಚೇರಿಯಲ್ಲಿ ಪಹಣಿ ಪಡೆಯಲು 2 ಕೌಂಟರ್‍ಗಳನ್ನು ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.