ಉಡುಪಿ
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಪೇಜಾವರದ ವಿಶ್ವೇಶರ ತೀರ್ಥ ಸ್ವಾಮೀಜಿಯವರ ಆರೋಗ್ಯ ಸ್ಥಿರವಾಗಿದ್ದು, ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಣಿಪಾಲದ ಕಸ್ತೂರಬಾ (ಕೆಎಂಸಿ) ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಶುಕ್ರವಾರ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿಶ್ವೇಶರ ತೀರ್ಥ ಸ್ವಾಮೀಜಿ ಅವರು ತೀವ್ರ ಉಸಿರಾಟದ ತೊಂದರೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬೆಳಿಗ್ಗೆ 10;30 ಕ್ಕೆ ಶ್ರೀಗಳ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿರುವ ವೈದ್ಯಕೀಯ ಮುಖ್ಯಸ್ಥರು, ‘ನಮ್ಮ ವೈದ್ಯರು ಸತತವಾಗಿ ಶ್ರೀಗಳ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಪರಿಸ್ಥಿತಿ ಸ್ವಲ್ಪ ಇನ್ನೂ ಗಂಭೀರವಾಗಿದೆ.
ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ. ಶ್ರೀಗಳನ್ನು ಕಾಣಲು ಭಕ್ತರು ಕೆಎಂಸಿ ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದಾರೆ. ಆದರೆ, ‘ಶ್ರೀಗಳನ್ನು ಕಾಣಲು ಯಾರೂ ಆಸ್ಪತ್ರೆಗೆ ಬರಬೇಡಿ, ರೋಗಿಗಳಿಗೆ ತೊಂದರೆ ಆಗುತ್ತೆ. ಶ್ರೀಗಳು ಆರೋಗ್ಯವಾಗಿದ್ದಾರೆ’ ಎಂದು ಶ್ರೀಗಳ ಆಪ್ತ ಕಾರ್ಯದರ್ಶಿ ಭಕ್ತರಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.