ಪಕ್ಷದಲ್ಲಿ ಸಂಚಲನ ಮೂಡಿಸಿದ ಯಡಿಯೂರಪ್ಪ ಹೇಳಿಕೆ..!!

ಬೆಂಗಳೂರು

        ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂಬ ಮಾತು ಕೇಳುತ್ತಿದ್ದಂತೆಯೇ,ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ವಿಷಯದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದು ಯಡಿಯೂರಪ್ಪ ನೀಡಿರುವ ಹೇಳಿಕೆ ಬಿಜೆಪಿ ಪಾಳೆಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಒಂದು ವೇಳೆ ಸಮ್ಮಿಶ್ರ ಸರ್ಕಾರ ಉರುಳಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ತರಬೇಕು?ಎಂಬ ಕುರಿತು ಅದಾಗಲೇ ಚರ್ಚೆಗಳು ಆರಂಭ ಆಗಿವೆ.

      ಮಾಜಿ ಉಪಮುಖ್ಯಮಂತ್ರಿ,ಒಕ್ಕಲಿಗ ಸಮುದಾಯದ ಆರ್.ಅಶೋಕ್,ದಲಿತ ಸಮುದಾಯದ ನಾಯಕ,ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಮಾಜಿ ಸಚಿವ,ಒಕ್ಕಲಿಗ ಸಮುದಾಯದ ಸಿ.ಟಿ.ರವಿ ಅವರ ಹೆಸರುಗಳು ಪಕ್ಷದ ನೂತನ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ.
ಈ ಮೂರೂ ಜನರಲ್ಲಿರುವ ಸಮಾನ ಅಂಶವೆಂದರೆ ಸಂಘಪರಿವಾರದ ಬಗ್ಗೆ ಅವರಿಗಿರುವ ನಿಷ್ಟೆ.ಆದರೂ ಇಷ್ಟೆಲ್ಲದರ ನಡುವೆ ಇಂತಿಂತವರೇ ಬರಬೇಕು ಎಂದು ಬಿಜೆಪಿ ನಾಯಕರೂ ತಮ್ಮದೇ ಲೆವೆಲ್ಲಿನಲ್ಲಿ ಪ್ರಯತ್ನ ಶುರು ಮಾಡಿರುವುದು ಕುತೂಹಲ ಕೆರಳಿಸುವಂತಿದೆ.

        ಮಾಜಿ ಉಪಮುಖ್ಯಮಂತ್ರಿ,ಒಕ್ಕಲಿಗ ನಾಯಕ ಆರ್.ಅಶೋಕ್ ಅವರನ್ನು ಪ್ರತಿಬಿಂಬಿಸುವ ಮೂಲಕ ಜೆಡಿಎಸ್ ಬಲವನ್ನು ಕುಗ್ಗಿಸಬೇಕು.ಹಳೆ ಮೈಸೂರು ಭಾಗದಲ್ಲಿ ಪಕ್ಷದ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಸಂಘಪರಿವಾರದ ಹಲವು ನಾಯಕರು ಲಾಬಿ ನಡೆಸುತ್ತಿದ್ದಾರೆ.

       ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ನಾಯಕ.ಹೀಗಾಗಿ ಪ್ರಬಲ ಸಮುದಾಯಕ್ಕೆ ಸೇರಿದ ಅಶೋಕ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ತಂದರೆ ಹಳೆ ಮೈಸೂರು ಭಾಗದಲ್ಲಿ ಅನುಕೂಲವಾಗುತ್ತದೆ ಎಂಬುದು ಸಂಘಪರಿವಾರದ ನಾಯಕರ ಅಭಿಪ್ರಾಯ.
ಇನ್ನು ದಲಿತ ಸಮುದಾಯಕ್ಕೆ ಸೇರಿದ ಅರವಿಂದ ಲಿಂಬಾವಳಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ನೇಮಕ ಮಾಡಿದರೆ ಭವಿಷ್ಯದಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬುದು ಯಡಿಯೂರಪ್ಪ ಅವರ ವಾದ ಎಂಬುದು ಮೂಲಗಳ ಹೇಳಿಕೆ.

       ಲಿಂಬಾವಳಿ ಅವರು ಮೂಲತ: ಸಂಘಪರಿವಾರದಿಂದ ಬಂದವರು.ಸಂಘಪರಿವಾರದಿಂದ ಪಕ್ಷದ ಕೆಲಸಕ್ಕಾಗಿ ನಿಯೋಜಿತರಾದವರು .ಹೀಗಾಗಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತಂದರೆ ಹಲವು ಬಗೆಗಳಿಂದ ಅನುಕೂಲವಾಗುತ್ತದೆ.ಹಾಗೆಯೇ ಕಾಂಗ್ರೆಸ್ ಮತ ಬ್ಯಾಂಕ್ ಅನ್ನು ಒಡೆಯಲು ಸಾಧ್ಯವಾಗುತ್ತದೆ ಎಂಬುದು ಅವರ ವಾದ.

       ಹಾಗೆಯೇ ಸಿ.ಟಿ.ರವಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಂದರೆ ಹಿಂದುತ್ವದ ಅಜೆಂಡಾವನ್ನು ಮತ್ತಷ್ಟು ಪ್ರಖರಗೊಳಿಸಲು ಸಾಧ್ಯ.ಆ ಮೂಲಕ ಪಕ್ಷ ಹಾಗೂ ಪರಿವಾರದ ಸಿದ್ದಾಂತಕ್ಕೆ ಪೂರಕವಾದ ವ್ಯಕ್ತಿಯನ್ನು ಉನ್ನತ ಜಾಗಕ್ಕೆ ತಂದಂತಾಗುತ್ತದೆ ಎಂದು ಆರೆಸ್ಸೆಸ್‍ನ ಹಲ ನಾಯಕರು ಹೇಳುತ್ತಿದ್ದಾರೆ.ಹೀಗೆ ರಾಜ್ಯದಲ್ಲಿ ಪಕ್ಷಾಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪ ತೆರವು ಮಾಡಿದರೆ ಆ ಜಾಗಕ್ಕೆ ಯಾರನ್ನು ತರಬೇಕು?ಎಂಬ ಕುರಿತು ನಡೆಯುತ್ತಿರುವ ಚರ್ಚೆ ಬಿಜೆಪಿಯ ಒಳವಲಯಗಳಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

 

Recent Articles

spot_img

Related Stories

Share via
Copy link
Powered by Social Snap