ಪಾಲಿಕೆ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ

ದಾವಣಗೆರೆ:

       ಸಾರ್ವಜನಿಕ ಕಾಮಗಾರಿಗಳಿಗೆ ಇಟ್ಟಿರುವ ಜೀವಂತ ವ್ಯಕ್ತಿಗಳ ಹೆಸರನ್ನು ರದ್ದುಗೊಳಿಸದಿದ್ದರೆ, ಕಾನೂನು ಹೋರಾಟ ನಡೆಸಲಾಗುವುದು ಎಂದು ಭಾರತೀಯ ಜನತಾ ಪಾರ್ಟಿಯ ಕಾನೂನು ಮತ್ತು ಸಂಸದೀಯ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಎ.ಸಿ.ರಾಘವೇಂದ್ರ ಎಚ್ಚರಿಸಿದ್ದಾರೆ.

       ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ಸುಮಾರು 11 ಸಾರ್ವಜನಿಕ ಸ್ಥಳ, ರಸ್ತೆ, ಉದ್ಯಾನವನಗಳನ್ನು ಉಲ್ಲೇಖಿಸಿ, ಹೈಕೋರ್ಟ್ ಆದೇಶದಂತೆ ಕ್ರಮ ಜರುಗಿಸಬೇಕೆಂದು 2018 ನವೆಂಬರ್ 23ರಂದು ಜಿಲ್ಲಾಡಳಿತ ಹಾಗೂ ಪಾಲಿಕೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೆ ಜಿಲ್ಲಾಡಳಿತವಾಗಲೀ, ಮಹಾನಗರ ಪಾಲಿಕೆಯಾಗಲೀ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಇನ್ನು 15 ದಿನದೊಳಗೆ ಈ ಕುರಿತು ಮಾಹಿತಿ ನೀಡದಿದ್ದರೆ, ಸದರಿ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

        ಸರ್ಕಾರಿ ಅನುದಾನದಲ್ಲಿ ನಿರ್ಮಾಣವಾಗಿರುವ ಸಾರ್ವಜನಿಕ ಕಾಮಗಾರಿಗಳಿಗೆ ಜೀವಂತ ವ್ಯಕ್ತಿಗಳ ಹೆಸರಿಡಬಾರದೆಂಬ ಹೈಕೋರ್ಟ್ ಆದೇಶವನ್ನು ಮಹಾನಗರ ಪಾಲಿಕೆ ಪಾಲಿಸಬೇಕಾಗಿದೆ. 2011ರಲ್ಲಿ ಚನ್ನಗಿರಿಯ ಸಾರ್ವಜನಿಕ ಕ್ರೀಡಾಂಗಣಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೆಸರು ನಾಮಕರಣ ಮಾಡಿದ ಜಿಲ್ಲಾಧಿಕಾರಿಗಳ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ ಎಂದರು.
ಅಲ್ಲದೆ, ಜೀವಂತವಿರುವ ರಾಜಕೀಯ ನಾಯಕರ, ಜನಪ್ರತಿನಿಧಿಗಳ ಹೆಸರನ್ನು ಸಾರ್ವಜನಿಕ ಸ್ಥಳ, ರಸ್ತೆ, ಕಟ್ಟಡಗಳಿಗೆ ಇಡುವಂತಿಲ್ಲ. ಸರ್ಕಾರಿ ಅನುದಾನ ಬಳಸದೆ, ತಾವೇ ಸ್ವಂತ ಹಣದಿಂದ ಮಾಡಿಸಿದ ಕಾಮಗಾರಿಗಳಿಗೆ ಮಾತ್ರ ತಮ್ಮ ಅಥವಾ ಕುಟುಂಬಸ್ಥರ ಹೆಸರಿಟ್ಟುಕೊಳ್ಳಬಹುದೆಂದು ಹೈಕೋರ್ಟ್ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಇದು ಎಲ್ಲಾ ಸರ್ಕಾರಿ ಕಾಮಗಾರಿಗಳಿಗೂ ಅನ್ವಯವಾಗುತ್ತದೆ ಎಂದು ಹೇಳಿದರು.

        ನಗರದಲ್ಲಿ ಸರ್ಕಾರಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಖಾಸಗಿ ಬಸ್ ನಿಲ್ದಾಣ, ಕುಂದುವಾಡ ಕೆರೆ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಸಭಾಂಗಣ, ದೇವರಾಜ ಅರಸು ಬಡಾವಣೆಯಲ್ಲಿರುವ ಜಿಲ್ಲಾ ನ್ಯಾಯಾಲಯ ಪಕ್ಕದ ಉದ್ಯಾನವನ, ಆಶ್ರಯ ಮನೆಗಳ ಕಾಲೋನಿ, ಜಿಲ್ಲಾ ಕ್ರೀಡಾಂಗಣಕ್ಕೆ ಜೀವಂತವಿರುವ ಜನಪ್ರತಿನಿಧಿಗಳ ಹೆಸರಿಡಲಾಗಿದೆ. ಈ ರೀತಿ ಸರ್ಕಾರಿ ಅನುದಾನದಲ್ಲಿ ನಿರ್ಮಿಸಿರುವ ಸಾರ್ವಜನಿಕ ರಸ್ತೆ, ಸ್ಥಳ, ಉದ್ಯಾನವನ, ಸಭಾಂಗಣ, ಬಸ್ ನಿಲ್ದಾಣ ಮತ್ತಿತರೆ ಕಾಮಗಾರಿಗಳಿಗೆ ಜೀವಂತವಿರುವ ಜನಪ್ರತಿನಿಧಿಗಳ ಹೆಸರಿಟ್ಟಿರುವುದು ಕಾನೂನುಬಾಹಿರವಾಗಿದ್ದು, ಇವುಗಳನ್ನು ರದ್ದುಗೊಳಿಸಿ ಬೇರೆ ಹೆಸರು ನಾಮಕರಣ ಮಾಡಲಿಕ್ಕೆ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

         ಸುದ್ದಿಗೋಷ್ಠಿಯಲ್ಲಿ ಪ್ರಕೋಷ್ಟದ ಎ.ಸಿ.ರಾಘವೇಂದ್ರ, ಡಿ.ಪಿ.ಬಸವರಾಜ, ಎ.ಎಸ್.ಮಂಜುನಾಥ, ಶಂಕರರಾವ್, ಶ್ರೀನಿವಾಸ ಮಾಯಕೊಂಡ, ಮಂಜುಳಾ, ಜಿ.ಸಿ.ವಸುಂಧರಾ, ಲಿಂಬಾ ನಾಯ್ಕ, ಪಿ.ಯು.ಶಿವಕುಮಾರ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap