ಮಿಶನ್ “ ವರಾಹ ” : ಪಾಲಿಕೆಗೆ ನಯಾಪೈಸೆ ಖರ್ಚಿಲ್ಲ…!!!

ತುಮಕೂರು:

ವರದಿ: ಭೂಷಣ್ ಮಿಡಿಗೇಶಿ

        ಹುಬ್ಬೇರಿಸದಿರಿ…ಈಗ ತುಮಕೂರು ನಗರದ ವ್ಯಾಪ್ತಿಯಲ್ಲಿ ಹಂದಿ ಮರಿಗಳ ಹೊಸಾ ತಳಿಗಳ ಆಗಮನವಾಗುತ್ತಿದೆ.ಇಲ್ಲಿ ಮೊದಲಿನಿಂದಲೂ ತಿಂದುಂಡು ಹೂಂಕರಿಸುತ್ತಿದ್ದ ಹಳೆಯ ಹಂದಿಗಳು ತಮಿಳುನಾಡು ಮತ್ತು ರಾಜ್ಯದ ಇತರೆಡೆಗೆ ರವಾನೆಯಾಗುತ್ತಿದ್ದಂತೆ ದಾವಣಗೆರೆ, ಚಿತ್ರದುರ್ಗ ಮತ್ತಿತರ ಕಡೆಗಳಲ್ಲಿ ಕಾರ್ಯಾಚರಣೆ ಮಾಡಿ ಹಿಡಿದಿರುವ ಹೊಸ ಹಂದಿಗಳ ಆಗಮನವಾಗುತ್ತಿದೆ ಎಂಬ ಸುದ್ದಿ ನಗರದಲ್ಲಿ ಹಬ್ಬಿದೆ.

        ಇಲ್ಲಿಯತನಕ ಮಹಾನಗರಪಾಲಿಕೆಯಿಂದ ಐದು ದಿನಗಳ ಕಾಲ ಸತತವಾಗಿ ಹಂದಿಗಳನ್ನು ಹಿಡಿಯಲಾಗಿದೆ. ಸರಿಸುಮಾರು ಮುನ್ನೂರರಿಂದ ನಾಲ್ಕುನೂರು ದೊಡ್ಡಹಂದಿಗಳನ್ನು ಈಗಾಗಲೇ ಹಿಡಿಯಲಾಗಿದೆ ಎಂಬ ಮಾಹಿತಿ ಮಹಾನಗರಪಾಲಿಕೆಯ ವತಿಯಿಂದ ಲಭ್ಯವಾಗಿದೆ. ತಮಿಳುನಾಡಿನಿಂದ ಬಂದಿದ್ದ ಹಂದಿ ಹಿಡಿಯುವವರ ತಂಡ ಮೂರು ದಿನದ ಕಾಯಾಚರಣೆಯಲ್ಲಿ ಸಾಕಷ್ಟು ಹಂದಿಗಳನ್ನು ತಮ್ಮ ಲಾರಿಗೆ ಏರಿಸಿಕೊಂಡು ಹೋಗಿದ್ದಾರೆ. ಹಾಗೆಯೇ ಹಂದಿಗಳ ಮಾಲೀಕರಿಂದ ಕಲ್ಲೇಟುಗಳನ್ನೂ ತಿಂದಿದ್ದಾರೆ ಎಂಬ ಸುದ್ದಿಯೂ ಇದೆ. ಇದೇ ರೀತಿ ಚಿಕ್ಕನಾಯನಹಳ್ಳಿಯಿಂದ ಬಂದಿದ್ದ ಹಂದಿ ಹಿಡಿಯುವವರ ಗುಂಪು ಕೂಡಾ ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ನೂರಾರು ಹಂದಿಗಳನ್ನು ಸಾಗಿಸಿಕೊಂಡು ಹೋಗಿದ್ದಾರೆ.

ಪಾಲಿಕೆಗೆ ನಯಾಪೈಸೆ ಖರ್ಚಿಲ್ಲ..!!

       ಇದು ವಿಚಿತ್ರವಾದರೂ ಸತ್ಯ.ಹಂದಿ ಹಿಡಿಯಲು ಮಹಾನಗರಪಾಲಿಕೆಯ ಖಜಾನೆಗೆ ಯಾವುದೇ ಆರ್ಥಿಕ ನಷ್ಟವಿಲ್ಲ.ಹಂದಿ ಹಿಡಿಯುವವರ ತಂಡ ಎಷ್ಟು ಬೇಕಾದರೂ ಹಂದಿಗಳನ್ನು ಹಿಡಿದುಕೊಂಡು ಹೋಗಬಹುದು.ಹಿಡಿದ ಹಂದಿ ಅವರ ಪಾಲಿಗೆ ಸೇರುತ್ತದೆ.ಹಾಗಾಗಿಯೇ ಇತರೆ ಜಿಲ್ಲೆಗಳ ಹಂದಿಗಳು ಇಲ್ಲಿ…ಇಲ್ಲಿನ ಹಂದಿಗಳು ಅಲ್ಲಿ ಮತ್ತೆ ಓಡಾಡುವ ಅವಕಾಶ ಇರಬಹುದೆನ್ನುವ ಗುಮಾನಿ ಜಾಸ್ತಿಯಾಗಿದೆ.ಹಂದಿ ಹಿಡಿಯುವವರು ಅತ್ಯಂತ ಗುಪ್ತವಾಗಿ ಕಾರ್ಯಾಚರಣೆ ಮಾಡಬೇಕಾಗುತ್ತದೆ.ಹಂದಿ ಹಿಡಿಯುವವರ ತಂಡದ ವಾಸನೆ ನಗರದಲ್ಲಿ ಎಲ್ಲಿಯೇ ಸಿಕ್ಕರೂ ಹಂದಿಗಳ ಮಾಲೀಕರು ಹುಷಾರಾಗಿಬಿಡುತ್ತಾರೆ.ಒಂದು ಏರಿಯಾದಲ್ಲಿ ಹಂದಿಗಳ ಕಾರ್ಯಾಚರಣೆ ನಡೆಯುತ್ತಿದ್ದರೆ ಮತ್ತೊಂದು ಏರಿಯಾದ ಕಡೆ ಹಂದಿಗಳನ್ನು ಓಡಿಸಿ ತಪ್ಪಿಸಿಕೊಳ್ಳುವಂತೆ ಮಾಡುವ ಚಾಣಾಕ್ಷತೆಯನ್ನು ಮಾಲೀಕರು ಹೊಂದಿದ್ದಾರೆ ಎನ್ನಲಾಗುತ್ತಿದೆ.

        ದೊಡ್ಡ ಹಂದಿಗಳಾದರೆ ಸುಲಭವಾಗಿ ಬಲೆಗೆ ಸಿಕ್ಕಿಬಿಡುತ್ತವೆ. ಆದರೆ ಸಣ್ಣ ಮರಿಗಳು ಬಲೆಯ ರಂಧ್ರದೊಳಗೆ ತಪ್ಪಿಸಿಕೊಂಡು ಮತ್ತೆ ಅಲ್ಲಿಯೇ ತಳವೂರುವ ಅವಕಾಶಗಳು ಜಾಸ್ತಿ. ನರಗದ ರಿಂಗ್ ರೋಡ್, ಗೋಕುಲ, ಬಡ್ಡಿಹಳ್ಳಿ ಸುತ್ತಮುತ್ತಲೂ ಹಂದಿಮರಿಗಳ ಸಂಖ್ಯೆ ಜಾಸ್ತಿಯಾಗಿದೆ. ಚಿಕ್ಕ ಹಾಲುಮರಿಗಳು ರಸ್ತೆಯ ಇಕ್ಕೆಲಗಳಲ್ಲಿ ಓಡಾಡುತ್ತವೆ. ತಾಯಿ ಹಂದಿಯನ್ನು ಕಾರ್ಯಾಚರಣೆಯಲ್ಲಿ ಹಿಡಿದುಕೊಂಡ ಕಾರಣ ಸಾಕಷ್ಟು ಸಂಖ್ಯೆಯ ಹಂದಿಮರಿಗಳ ದರ್ಶನ ವಾರ್ಡುಗಳಲ್ಲಿ ಲಭ್ಯವಾಗುತ್ತಿದೆ ಎನ್ನುತ್ತಾರೆ ರಿಂಗ್ ರೋಡಿನಲ್ಲಿ ತರಕಾರಿ ಮಾರುವ ರಾಜಣ್ಣ.

 ಹಂದಿ ಹಿಡಿಯಲೂ ನೂಕು ನುಗ್ಗಲು..!!

      ಹಂದಿ ಹಿಡಿಯುವ ಕಾರ್ಯ ಒಂದು ತರಹ ದುಡಿಮೆಯ ಮಾರ್ಗವಾಗಿ ಮಾರ್ಪಟ್ಟಿದೆ. ಹಿಡಿದ ಹಂದಿಗಳು ಹಿಡಿದವರ ಪಾಲೇ ಆಗುವುದರಿಂದ ತಂಡತಂಡಗಳಾಗಿ ಹಂದಿ ಹಿಡಿಯಲು ನಗರಕ್ಕೆ ಬರುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಹಂದಿ ಹಿಡಿಯುವ ತಂಡವನ್ನು ಗುರ್ತಿಸಲು ತೆರೆಮರೆಯ ಕಸರತ್ತುಗಳು ಕೂಡಾ ನಡೆಯುತ್ತಿವೆ ಎಂಬ ಗುಮಾನಿಗಳಿವೆ.

       ಪೋಲಿಸರ ಕಣ್ಗಾವಲಿನಲ್ಲಿ ಇಲ್ಲಿಯತನಕ ಹಂದಿ ಹಿಡಿಯುವ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಮಹಾನಗರಪಾಲಿಕೆಯ ಅಧಿಕಾರಿಗಳು ಮುಖ್ಯ ರಸ್ತೆಗಳಲ್ಲಿ ಪೊಲೀಸರ ಜೊತೆ ಇರುವುದರಿಂದ ಇವರ ಮೇಲೆ ಕಲ್ಲೆಸೆತದಂತಹ ಹಲ್ಲೆಗಳು ನಡೆಯುವುದು ಕಡಿಮೆ. ಆದರೆ ಪೊದೆಗಳಲ್ಲಿ ಮತ್ತು ಖಾಲಿ ನಿವೇಶನಗಳ ಒಳಭಾಗದಲ್ಲಿ ಹಂದಿ ಹಿಡಿಯುವ ತಂಡಗಳ ಮೇಲೆ ಕಲ್ಲೆಸೆತ ನಡೆಯುವುದು ಸಾಮಾನ್ಯ. ಇತ್ತೀಚೆಗೆ ಇಂತಹ ಹಲ್ಲೆಗಳು ನಿಂತಿವೆ. ಆದರೆ ಪಾಲಿಕೆಯ ಬಳಿ ಯಾವಾಗಲೂ ಒಂದು ಕಣ್ಣಿಟ್ಟು ಹಂದಿ ಹಿಡಿಯುವವರ ತಂಡ ಬಂದ ಕೂಡಲೇ ಬೇರೆ ಭಾಗಗಳಿಗೆ ಹಂದಿಗಳನ್ನು ಓಡಿಸುವ ಕಾರ್ಯತಂತ್ರ ಮಾತ್ರ ನಡೆಯುತ್ತಿದೆ ಎಂಬ ಸುದ್ದಿ ಸತ್ಯಕ್ಕೆ ಹತ್ತಿರವಾಗಿದೆ.

ಡಾ.ನಾಗೇಶ್ ಕುಮಾರ್ ಹೇಳಿದ್ದೇನು????

          ಹಂದಿ ಹಿಡಿಯುವ ಕಾರ್ಯಾಚರಣೆಯನ್ನು ಅತ್ಯಂತ ಗುಪ್ತವಾಗಿ ಮತ್ತು ರಹಸ್ಯವಾಗಿ ಮಾಡಬೇಕಾದ ಅನಿವಾರ್ಯತೆಯಿದೆ. ಮಹಾನಗರಪಾಲಿಕೆಯ ಬಳಿ ಹಂದಿಗಳ ಮಾಲಿಕರು ಸದಾ ಓಡಾಡುತ್ತಾ ಗಮನಹರಿಸುತ್ತಿರುತ್ತಾರೆ. ಹಂದಿ ಹಿಡಿಯುವ ತಂಡದ ವಾಹನ ಅಥವಾ ಹಿಡಿಯುವವರ ಸುಳಿವು ಸಿಕ್ಕಿದ ಕೂಡಲೇ ಜಾಗೃತವಾಗುವ ಇವರು ಹಂದಿಗಳನ್ನು ಬೇರೆಡೆಗೆ ಸಾಗಿಸಿಬಿಡುತ್ತಾರೆ. ಹಂದಿ ಹಿಡಿಯುವ ಕಾರ್ಯಾಚರಣೆಯಲ್ಲಿ ನಾಗರಿಕರು ಪಾತ್ರವೂ ಅತ್ಯಂತ ಮುಖ್ಯ. ಒಟ್ಟಾರೆಯಾಗಿ ನಗರವನ್ನು ಹಂದಿಗಳಿಂದ ಮುಕ್ತವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap