ತುಮಕೂರು

ತುಮಕೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಬುಗುಡನಹಳ್ಳಿಯ ಜಲಸಂಗ್ರಹಾಗಾರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್ಪೇಟೆ ಕೈಗಾರಿಕಾ ಪ್ರದೇಶಕ್ಕೆ ಹೇಮಾವತಿ ನೀರನ್ನು ಹರಿಸುವುದಕ್ಕೆ ತುಮಕೂರು ಮಹಾನಗರ ಪಾಲಿಕೆಯು ವಿರೋಧ ವ್ಯಕ್ತಪಡಿಸಿದೆಯಲ್ಲದೆ, ಮೈದಾಳ ಕೆರೆಗೆ ಹೇಮಾವತಿ ಹರಿಸಿ ಆ ನೀರನ್ನು ಅಲ್ಲಿಂದ ತುಮಕೂರು ನಗರಕ್ಕೆ ಸರಬರಾಜು ಮಾಡುವ ಮಹತ್ವದ ತೀರ್ಮಾನವನ್ನು ತುಮಕೂರು ಮಹಾನಗರ ಪಾಲಿಕೆಯು ಕೈಗೊಂಡಿದೆ.
ಮೇಯರ್ ಲಲಿತಾ ರವೀಶ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಏರ್ಪಟ್ಟಿದ್ದ ತುಮಕೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ (ಸಂಖ್ಯೆ: 56/16) ಚರ್ಚಿಸಲಾಗಿದೆ.ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ (ಕೆ.ಐ.ಎ.ಡಿ.ಬಿ.) ಯು ಬುಗುಡನಹಳ್ಳಿ ಜಲಸಂಗ್ರಹಾಗಾರದಿಂದ ಡಾಬಸ್ಪೇಟೆಯ ಕೈಗಾರಿಕಾ ಪ್ರದೇಶಕ್ಕೆ ಹೇಮಾವತಿ ನೀರನ್ನು ಹರಿಸಲು ಪೈಪ್ಲೈನ್ ಕಾಮಗಾರಿಯನ್ನು ಕೈಗೊಂಡಿದೆ.
ಆದರೆ ಈ ಕಾಮಗಾರಿಯನ್ನು ಮೈದಾಳ ಕೆರೆಯವರೆಗೆ ಮಾತ್ರ ಕೈಗೊಳ್ಳಬೇಕು. ಅಲ್ಲಿಂದ ಮುಂದಕ್ಕೆ ಕಾಮಗಾರಿ ಮುಂದುವರೆಸಲು ಹಾಗೂ ತುಮಕೂರು ನಗರಕ್ಕೆ ಕುಡಿಯುವ ಸಲುವಾಗಿ ನಿಗದಿಯಾದ ಹೇಮಾವತಿ ನೀರನ್ನು ಡಾಬಸ್ಪೇಟೆಗೆ ಒಯ್ಯಲು ಪಾಲಿಕೆಯು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಿ ಈ ಬಗ್ಗೆ ಮಂಡಲಿಗೆ ಪತ್ರ ಬರೆಯಲು ನಿರ್ಧಾರಿಸಲಾಗಿದೆ.
ಮೈದಾಳಕ್ಕೆ ಹೇಮಾವತಿ
ಪ್ರಸ್ತುತ ತುಮಕೂರು ನಗರದ ಜನಸಂಖ್ಯೆ ಮತ್ತು ಮುಂದಿನ ದಿನಗಳಲ್ಲಿನ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ಕುಡಿಯುವ ನೀರು ಪೂರೈಕೆ ಮಾಡಲು ಅನುವಾಗುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿಮಂಡಲಿಯು 24/7 ಕುಡಿಯುವ ನೀರಿನ ಯೋಜನೆ ಜಾರಿಮಾಡುತ್ತಿದೆ. ಈ ಯೋಜನೆಯು ಯಶಸ್ವಿಯಾಗಬೇಕಾದರೆ ತುಮಕೂರು ನಗರಕ್ಕೆ ನಿಗದಿಪಡಿಸಲಾಗಿರುವ ಹೇಮಾವತಿ ನೀರಿನಲ್ಲೇ ಮೈದಾಳ ಕೆರೆಯನ್ನೂ ಭರ್ತಿ ಮಾಡಿಕೊಂಡು ಅಲ್ಲಿಂದ ಅ ನೀರನ್ನು ತುಮಕೂರು ನಗರಕ್ಕೆ ಬಳಸಿಕೊಳ್ಳಬಹುದಾಗಿದೆಯೆಂದು ನಿರ್ಣಯಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮೈದಾಳ ಕೆರೆಯಿಂದ ತುಮಕೂರು ನಗರದಲ್ಲಿರುವ ವಿದ್ಯಾನಗರ ವಾಟರ್ ವಕ್ರ್ಸ್ ಮತ್ತು ಸಿದ್ಧಗಂಗಾ ಮಠಕ್ಕೆ ಪ್ರತ್ಯೇಕವಾದ ಪೈಪ್ಲೈನ್ ಅಳವಡಿಸಲು ಮತ್ತು ಪಂಪ್ ಹೌಸ್ ನಿರ್ಮಿಸಲು ಪಾಲಿಕೆ ನಿರ್ಧಾರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








