ಸ್ಮಾರ್ಟ್ ಸಿಟಿ ಕಾಮಗಾರಿಗಳ ಅಧ್ವಾನದ ಬಗ್ಗೆ ಪಾಲಿಕೆ ಸದಸ್ಯರ ಆಕ್ರೋಶ

ಕಳಪೆ ಕಾಮಗಾರಿ ಬಿಲ್ಲು ತಡೆಹಿಡಿಯಲು ಸಂಸದ ಜಿಎಸ್‍ಬಿ ಸೂಚನೆ

ತುಮಕೂರು

    ನಗರದಲ್ಲಿ ನಡೆದಿರುವ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ಅತ್ಯಂತ ಕಳಪೆ ಎಂಬುದು ಸಾರ್ವಜನಿಕ ದೂರಾಗಿದೆ. ಕಳಪೆ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರ ಬಿಲ್ಲು ಪಾವತಿ ಮಾಡದೆ ತಡೆಹಿಡಿಯುವಂತೆ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಿಗೆ ಸಂಸದ ಜಿ.ಎಸ್.ಬಸವರಾಜು ಹೇಳಿದರು.

     ನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಸಭೆಯಲ್ಲಿ ಮಾತನಾಡಿದ ಸಂಸದರು, ಕಾಮಗಾರಿಗಳು ತೀರಾ ಕಳಪೆಯಾಗಿವೆ ಎಂದು ಜನ ದೂರುತ್ತಿದ್ದಾರೆ. ಅವುಗಳ ಉಸ್ತವಾರಿ ಮಾಡುತ್ತಿರುವ ಅಧಿಕಾರಿಗಳಿಗೆ ಇದು ಗಮನಕ್ಕೆ ಬಂದಿಲ್ಲವೆ ಎಂದು ಪ್ರಶ್ನಿಸಿದರು. ತಾಂತ್ರಿಕ ಸಮಿತಿ ಪರಿಶೀಲಿಸಿ ನೀಡುವ ವರದಿ ಆಧರಿಸಿ, ಕಳಪೆಯೋ, ಅಲ್ಲವೊ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಳಪೆಯಾಗಿದ್ದರೆ ಗುತ್ತಿಗೆದಾರರ ಬಿಲ್ಲು ತಡೆಹಿಡಿಯಿರಿ ಎಂದರು.

     ನಾಗರೀಕರ ದೂರು, ಪತ್ರಿಕೆಗಳ ವರದಿ ಗಮನಿಸಿದಂತೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ, ಸಕಾಲಕ್ಕೆ ಮುಗಿವ ಸೂಚನೆಗಳಿಲ್ಲ. ಕೆಲವೆಡೆ ಸಿಮೆಂಟ್ ಕಾಮಗಾರಿಗೆ ಸರಿಯಾಗಿ ಕ್ಯೂರಿಂಗ್ ಮಾಡುತ್ತಿಲ್ಲ, ಜನ ಆಕ್ರೋಶ ಗೊಂಡಿದ್ದಾರೆ, ನನ್ನನು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಮಸ್ಯೆಗಳು ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೆ ಎಂದ ಸಂಸದರು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಮಗಾರಿ ನಿರ್ವಹಿಸಬೇಕು ಎಂದು ಸೂಚಿಸಿದರು.

    ನಗರದಲ್ಲಿ ಬೀದಿ ದೀಪ ನಿರ್ವಹಣೆ ಸಂಬಂಧ ಎಲ್‍ಇಡಿ ಬಲ್ಬ್ ಅಳವಡಿಸಿ ನಿರ್ವಹಿಸಲು 7 ವರ್ಷಕ್ಕೆ 94.9 ಕೋಟಿ ರೂ. ಗಳ ಟೆಂಡರ್ ನೀಡಲಾಗಿದೆ, ಮಂಜುಶ್ರೀ ಎಲೆಕ್ಟ್ರಿಕಲ್ಸ್‍ನವರು ಈ ಗುತ್ತಿಗೆ ಪಡೆದಿದ್ದಾರೆ. ಇದು ದುಬಾರಿಯಾಯಿತು. ಈವರೆಗಿನ ನಿರ್ವಹಣೆ ವೆಚ್ಚಕ್ಕೆ ಹೋಲಿಸಿದರೆ ಸುಮಾರು 45 ಕೋಟಿ ರೂ. ಹೆಚ್ಚುವರಿ ಹಣ ಖರ್ಚು ಮಾಡುವಂತಾಗುತ್ತದೆ. ಈ ಬಗ್ಗೆ ಪರಿಶೀಲಿಸಬೇಕು. ಇದಕ್ಕಾಗಿ ತಜ್ಞರ ಒಂದು ಸಮಿತಿ ರಚಿಸಬೇಕು ಎಂದು ಸಂಸದರು ಸಲಹೆ ಮಾಡಿದರು. ಸಭೆಯಲ್ಲಿ ಹಾಜರಿದ್ದ ನಗರಪಾಲಿಕೆ ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಿದರು.

     ಗುತ್ತಿಗೆದಾರರು ಕಂಬಗಳಿಗೆ ಎಲ್‍ಇಡಿ ಬಲ್ಬ್‍ಗಳನ್ನು ಕಟ್ಟಿ ನಿರ್ವಹಿಸುತ್ತಾರೆ. ಆದರೆ, ಬಲ್ಬ್ ಅಳವಡಿಸಲು ಈಗಿರುವ ವಿದ್ಯುತ್ ಕಂಬಗಳ ಬದಲಿಗೆ ಪ್ರತ್ಯೇಕ ಕಂಬಗಳನ್ನು ನೆಡಬೇಕಾಗುತ್ತೆ. ಜೊತೆಗೆ ನಗರದ ವಿವಿಧೆಡೆ 8 ಫೀಡರ್‍ಗಳ ವಿದ್ಯುತ್ ಮಾರ್ಗದ ಲೈನುಗಳನ್ನು ಅಂಡರ್‍ಗ್ರೌಂಡ್‍ನಲ್ಲಿ ಅಳವಡಿಸುವ ಕಾರಣ ಹಾಲಿ ಇರುವ ಕಂಬಗಳನ್ನ ಬಲ್ಬ್ ಅಳವಡಿಸಲಷ್ಟೇ ಬಳಸಬೇಕಾಗುತ್ತದೆ.

     ಆದರೆ, ವಿದ್ಯುತ್ ತಂತಿ ಇಲ್ಲದ ಕಂಬಗಳು ಉರುಳಿಬೀಳುವ ಸಾಧ್ಯತೆಗಳಿವೆ ಎಂದು ಕೆಲ ಸದಸ್ಯರು ಅನುಮಾನ ವ್ಯಕ್ತಪಡಿಸಿದರು.ನಗರದಲ್ಲಿ ಹಾಲಿ 36 ಸಾವಿರ ಬೀದಿ ದೀಪಗಳ ಅಳವಡಿಕೆ ಆಗಬೇಕಾಗಿದೆ, ಜೊತೆಗೆ ಹೆಚ್ಚುವರಿಯಾಗಿ ಇನ್ನೂ 5 ಸಾವಿರ ದೀಪ ಅಳವಡಿಕೆ ಮಾಡಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದರು. ಸ್ಮಾರ್ಟ್ ಲಕ್ಷಣದ ಕಂಬಗಳನ್ನು ನೆಟ್ಟು ಬಲ್ಬ್ ಅಳವಡಿಸಬೇಕು.

     ಬಡಾವಣೆ ರಸ್ತೆಗಳಲ್ಲಿ 8 ಮೀಟರ್ ಎತ್ತರದ, ಮುಖ್ಯ ರಸ್ತೆಗಳಲ್ಲಿ 9 ಮೀಟರ್ ಎತ್ತರದ ಕಂಬ ಹಾಕಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಹೂಳೆತ್ತುವ ಕಾಮಗಾರಿಗೆ ಆಕ್ಷೇಪ

      ಕುಡಿಯುವ ನೀರು ಸಂಗ್ರಹಿಸುವ ಬುಗುಡನಹಳ್ಳಿ ಕೆರೆ ಹೂಳೆತ್ತುವ ಕಾಮಗಾರಿಯಿಂದ ಹಣ ಪೋಲಾಗುತ್ತದೆ ಹೊರತು ಉಪಯೋಗ ಆಗಲಾರದು, ಇದರ ಬದಲು ನಗರ ವ್ಯಾಪ್ತಿಯ ಕೆರೆಗಳನ್ನು ನೀರು ಸಂಗ್ರಹಿಸಲು ಸಿದ್ಧಪಡಿಸಿ ಎಂದು ಸಂಸದ ಬಸವರಾಜು ಅಧಿಕಾರಿಗಳಿಗೆ ತಿಳಿಸಿದರು.

    ಅಮಾನಿಕೆರೆ, ದೇವರಾಯಪಟ್ಟಣ ಕೆರೆ, ಮರಳೂರು ಕೆರೆ, ಶೆಟ್ಟಿಹಳ್ಳಿ ಕೆರೆ, ಗಾರೆನರಸಯ್ಯನ ಕಟ್ಟೆ ಮುಂತಾದ ಕೆರೆಗಳ ಒತ್ತೂವರಿ ತೆರವುಗೊಳಿಸಿ ನೀರು ಸಂಗ್ರಹ ಮಾಡಲು ಸಿದ್ಧಗೊಳಿಸಿ ಎಂದರು.ಸಭೆಯ ಆರಂಭದಲ್ಲಿ ನಗರಪಾಲಿಕೆ ಸದಸ್ಯರು ಸ್ಮಾರ್ಟ್ ಸಿಟಿ ಕಾಮಗಾರಿಗಳ ಕಾರ್ಯವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಆಯಾ ವಾರ್ಡ್ ನಗರಪಾಲಿಕೆ ಸದಸ್ಯರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ, ಕಾಮಗಾರಿಯಿಂದ ಅಲ್ಲಿ ಆಗುತ್ತಿರುವ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಒಂದು ರಸ್ತೆಯನ್ನು ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಲು ಕೈಗೆತ್ತಿಕೊಂಡಿರಿ ಅದನ್ನು ಈವರೆಗೂ ಪೂರ್ಣಗೊಳಿಸಿಲ್ಲ. ಅದರ ಜೊತೆ ಇನ್ನಷ್ಟು ಕಾಮಗಾರಿ ಆರಂಭಿಸಿ ಯಾವುದೂ ಮುಗಿಯದಂತಹ ಸ್ಥಿತಿ ನಿರ್ಮಾಣ ಮಾಡಿದಿರಿ ಎಂದು ಸದಸ್ಯ ಲಕ್ಷ್ಮೀನರಸಿಂಹರಾಜು ಆಕ್ಷೇಪ ವ್ಯಕ್ತಪಡಿಸಿದರು.

    ಟೆಂಡರ್ ಕರೆದು ವರ್ಕ್ ಆರ್ಡರ್ ಕೊಡಬೇಕು ಇಲ್ಲಾಂದರೆ ಹಣ ಬಿಡುಗಡೆಯಾಗುವುದಿಲ್ಲ, ಹಾಗಾಗೆ ಹೆಚ್ಚಿನ ಕಾಮಗಾರಿ ಆರಂಭವಾಗಿವೆ ಎಂದು ಸ್ಮಾರ್ಟ್ ಸಿಟಿ ಲಿ.ನ ಎಂ.ಡಿ. ಅಜಯ್ ಹೇಳಿದರು.5ನೇ ವಾರ್ಡ್ ವ್ಯಾಪ್ತಿಯ ಎಂ.ಜಿ. ರಸ್ತೆಯ ಕನ್ಸರ್‍ವೆನ್ಸಿಯಲ್ಲಿ ವಾಹನಗಳ ಪಾರ್ಕಿಂಗ್‍ಗೆ ನಗರಪಾಲಿಕೆಯಿಂದ ಸಿದ್ಧ ಮಾಡಿದ್ದರೂ, ಮತ್ತೆ ಅದೇ ಕೆಲಸಕ್ಕೆ ಸ್ಮಾರ್ಟ್ ಸಿಟಿಯಿಂದ ಟೆಂಡರ್ ಕರೆದು ಬಿಲ್ ಮಾಡಲಾಗಿದೆ ಎಂದು ಸದಸ್ಯ ಮಹೇಶ್ ಆರೋಪಿಸಿದರು.

    ಕನ್ಸರ್‍ವೆನ್ಸಿಗಳು ಕಸ ತುಂಬಿ ಹಾಳಾಗಿದ್ದು ಅವುಗಳ ದುರಸ್ಥಿ ಮಾಡಲಾಗಿದೆ ಎಂದು ಎಂ.ಡಿ. ಅಜಯ್ ಸಮಜಾಯಿಷಿ ನೀಡಲು ಹೊರಟಾಗ ಸದಸ್ಯರು ಆಕ್ಷೇಪ ಮಾಡಿ, ಅವ್ಯವಹಾರ ನಡೆದಿದೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.

    ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಸಕಾಲದಲ್ಲಿ ಮುಗಿಸದೆ, ತೆಗೆದ ಹಳ್ಳ ಮುಚ್ಚದೆ ಸಾರ್ವಜನಿಕರಿಗೆ ತೊಂದರೆ ಮಾಡಲಾಗಿದೆ, ಕಾಮಗಾರಿ ವೇಳೆ ಯಾವುದೇ ಸುರಕ್ಷಾ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಸದಸ್ಯೆ ಗಿರಿಜಾ ಧನಿಯಾಕುಮಾರ್ ಹೇಳಿದರು.

     ನಗರದಲ್ಲಿ ಸ್ಮಾರ್ಟ್ ಸಿಟಿಯಿಂದ ಯಾವ ಕಾಮಗಾರಿಗಳು ನಡೆಯುತ್ತಿವೆ, ಅವುಗಳ ಬಗ್ಗೆ ಅಧಿಕಾರಿಗಳು ಪಾಲಿಕೆ ಸ್ಯರಿಗೆ ಮಾಹಿತಿ ನೀಡವುದಿಲ್ಲ, ವಾರ್ಡ್ ಜನ ಕೇಳಿದರೆ ಅವರಿಗೆ ಮಾಹಿತಿ ನೀಡಲಾಗದ ಅಸಹಾಯಕ ಸ್ಥಿತಿ ಸದಸ್ಯರಿಗೆ ಎದುರಾಗುತ್ತದೆ, ಯಾವುದೇ ಕೆಲಸ ಸಾರ್ವಜನಿಕರಿಗೂ ತಿಳಿಯುವಂತಾಗಬೇಕು, ನಾಗರೀಕರ ಸಭೆ ನಡೆಸಿ ಎಂದು ಕೆಲ ಸದಸ್ಯರು ಒತ್ತಾಯ ಮಾಡಿದರು.

     ಶೀಘ್ರವಾಗಿ ವಾರ್ಡ್‍ವಾರು ಆಯಾ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳ ಸಭೆ ನಡೆಸುವುದಾಗಿ ಎಂ. ಡಿ. ಅಜಯ್ ಹೇಳಿದರು.ನಗರ ಪಾಲಿಕೆ ಮೇಯರ್ ಲಲಿತಾ ರವೀಶ್, ಉಪಮೇಯರ್ ರೂಪಶ್ರೀ ಶೆಟ್ಟಳ್ಳಯ್ಯ, ಉಪವಿಭಾಗಾ ಧಿಕಾರಿ ಶಿವಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link