ಪಾಲಿಕೆ ನಿಲುವಿಗೆ ಚಿತ್ರಮಂದಿರ ಮಾಲೀಕರ ಒಪ್ಪಿಗೆ:ನಿಗದಿತ ಸ್ಥಳದಲ್ಲಿ ಭಿತ್ತಿಪತ್ರ, ಶುಲ್ಕ ಪಾವತಿ

ತುಮಕೂರು

      ಸ್ವಚ್ಛ ತುಮಕೂರು ಪರಿಕಲ್ಪನೆಯ ನಿಟ್ಟಿನಲ್ಲಿ ತುಮಕೂರು ಮಹಾನಗರ ಪಾಲಿಕೆಯ ನಿಲುವಿಗೆ ಸಹಮತ ಸೂಚಿಸಿದ ಚಲನಚಿತ್ರ ಮಂದಿರಗಳ ಮಾಲೀಕರುಗಳು, ತುಮಕೂರು ನಗರದ ನಿಗದಿತ ಸ್ಥಳಗಳಲ್ಲಿ ಅಳವಡಿಸಲ್ಪಡುವ ಬೃಹತ್ ಫಲಕಗಳಲ್ಲಿ ಮಾತ್ರ ಇನ್ನು ಮುಂದೆ ಚಲನಚಿತ್ರಗಳ ಭಿತ್ತಿಪತ್ರ ಅಂಟಿಸಲು ಹಾಗೂ ಇದಕ್ಕಾಗಿ ಪಾಲಿಕೆಗೆ ವಾರ್ಷಿಕ ಶುಲ್ಕ ಪಾವತಿಸಲು ಒಪ್ಪಿಗೆ ಸೂಚಿಸಿದರು.

      ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ ಆಯುಕ್ತ ಟಿ.ಭೂಪಾಲನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದ ಚಲನಚಿತ್ರ ಮಂದಿರಗಳ ಮಾಲೀಕರುಗಳು ಹಾಜರಿದ್ದು, ಪಾಲಿಕೆಯ ನಿಲುವಿಗೆ ಸಹಮತ ವ್ಯಕ್ತಪಡಿಸಿದರು.
ಪ್ರಮುಖ ಸ್ಥಳಗಳಲ್ಲಿ

ಫಲಕ ಅಳವಡಿಕೆ

        ಚಲನಚಿತ್ರಗಳು ಪ್ರದರ್ಶನಕ್ಕೆ ಬಂದಾಗ ಅದರ ಬಗ್ಗೆ ಜನರ ಗಮನ ಸೆಳೆಯುವುದು ಅತಿ ಮುಖ್ಯ. ಅದಕ್ಕೆ ಭಿತ್ತಿಪತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದಕಾರಣ ನಗರದ ಬಟವಾಡಿ ವೃತ್ತ, ಎಸ್.ಐ.ಟಿ. ಕಾಲೇಜು ಬಳಿ, ಶಿವಕುಮಾರ ಸ್ವಾಮೀಜಿ ವೃತ್ತ, ಶಂಕರ ಮಠದ ವೃತ್ತ, ಟೌನ್‍ಹಾಲ್ ವೃತ್ತ, ಲಾ ಕಾಲೇಜು ವೃತ್ತ, ಎಸ್.ಎಸ್.ಐ.ಟಿ. ಕಾಲೇಜು ಬಳಿ, ಗುಬ್ಬಿ ಗೇಟ್, ಶಿರಾಗೇಟ್, ಲಿಂಗಾಪುರ, ಶೆಟ್ಟಿಹಳ್ಳಿ ಗೇಟ್, ಎಚ್.ಎಂ.ಎಸ್. ಪಾಲಿಟೆಕ್ನಿಕ್ ಬಳಿ, ಉಪ್ಪಾರಹಳ್ಳಿ ಗೇಟ್, ಬಸ್ ನಿಲ್ದಾಣ, ರೈಲು ನಿಲ್ದಾಣ -ಹೀಗೆ ನಗರದ ಪ್ರಮುಖ ಸ್ಥಳಗಳಲ್ಲಿ ಭಿತ್ತಿಪತ್ರ ಅಂಟಿಸಲು ಅವಕಾಶ ಕಲ್ಪಿಸಬೇಕು ಎಂದು ಚಿತ್ರ ಮಂದಿರಗಳ ಮಾಲೀಕರುಗಳು ಪಾಲಿಕೆಗೆ ಮನವಿ ಮಾಡಿಕೊಂಡರು.

        ಈ ಮನವಿಗೆ ಸ್ಪಂದಿಸಿದ ಆಯುಕ್ತ ಭೂಪಾಲನ್, “ಈ ಎಲ್ಲ ಸ್ಥಳಗಳನ್ನು ಪಾಲಿಕೆ ಅಧಿಕಾರಿಗಳು ಪರಿಶೀಲಿಸಲಿದ್ದು, ಅಲ್ಲಿ ಬೃಹತ್ ಫಲಕವನ್ನು ಅಳವಡಿಸಬಹುದು. ಬಳಿಕ ಅದರಲ್ಲಿ ಚಿತ್ರಮಂದಿರಗಳವರು ತಮಗೆ ಸೇರಿದ ಭಿತ್ತಿಪತ್ರ ಅಂಟಿಸಬಹುದು” ಎಂದು ಒಪ್ಪಿಗೆ ಸೂಚಿಸಿದರು.

         ಇಷ್ಟೇ ಅಲ್ಲದೆ ನಿಮಗೆ ಅನುಕೂಲವಾಗುವ ಬೇರೆ ಸ್ಥಳಗಳಿದ್ದರೂ ಅಲ್ಲೂ ಅನುಮತಿ ನೀಡಲಾಗುವುದು” ಎಂದರು.ಪಾಲಿಕೆ ನೀಡುವ ಪ್ರತಿ ಸ್ಥಳದಲ್ಲೂ ತಮ್ಮ ವೆಚ್ಚದಲ್ಲೇ ಒಂದೊಂದು ಬೃಹತ್ ಪ್ರದರ್ಶನ ಫಲಕವನ್ನು ಅಳವಡಿಸಿಕೊಳ್ಳಬಹುದೆಂದು ಹಾಗೂ ಇವುಗಳಲ್ಲಿ ಭಿತ್ತಿಪತ್ರ ಅಂಟಿಸುವುದಕ್ಕೆ ಮಾತ್ರ ವಾರ್ಷಿಕ ಶುಲ್ಕ ಪಾವತಿಸಬೇಕೆಂದು ಪಾಲಿಕೆಯ ಅಧಿಕಾರಿಗಳು ಸಲಹೆ ನೀಡಿದಾಗ ಅದಕ್ಕೆ ಚಿತ್ರ ಮಂದಿರಗಳ ಮಾಲೀಕರುಗಳು ಸಮ್ಮತಿಸಿದರು.

ಸ್ಮಾರ್ಟ್‍ಸಿಟಿ ಯೋಜನೆಯ ಫಲಕಗಳನ್ನೂ ಬಳಸಿಕೊಳ್ಳಿ

        ನಗರದ ಬಸ್ ಸ್ಟಾಪ್‍ಗಳಲ್ಲಿ ಮುಂದಿನ ದಿನಗಳಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಎಲ್.ಇ.ಡಿ. ಡಿಸ್‍ಪ್ಲೇ ಬೋರ್ಡ್‍ಗಳು ಅಳವಡಿಸಲ್ಪಡಲಿವೆ. ಅವುಗಳನ್ನು ಸಹ ಚಿತ್ರಮಂದಿರಗಳವರು ಚಲನಚಿತ್ರಗಳ ಪ್ರಚಾರಕ್ಕೆ ಬಳಸಿಕೊಳ್ಳಬಹುದು” ಎಂದು ಆಯುಕ್ತರು ಮತ್ತು ಪರಿಸರ ಇಂಜಿನಿಯರ್ ಮೃತ್ಯುಂಜಯ ಸಲಹೆ ನೀಡಿದರು.

        ಯಾರೂ ಸಹ ಫ್ಲೆಕ್‍ಗಳನ್ನು ಬಳಸುವುದು ಬೇಡ. ತೀರಾ ಚಿಕ್ಕಚಿಕ್ಕ ಪೋಸ್ಟರ್‍ಗಳನ್ನು ನಗರದ ವಿವಿಧೆಡೆ ಅಂಟಿಸುವುದೂ ಬೇಡ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಆಗುತ್ತದೆ. ನಿಗದಿತ ಸ್ಥಳಗಳ ಫಲಕಗಳಲ್ಲಿ ಮಾತ್ರ ನೀವು ಭಿತ್ತಿಪತ್ರ ಅಂಟಿಸಿ. ನೀವು ಕಾನೂನಿನ ಪ್ರಕಾರ ಅಂಟಿಸುವ ಭಿತ್ತಿಪತ್ರಗಳ ಮೇಲೆ ಬೇರೆಯವರು ಭಿತ್ತಿ ಪತ್ರ ಅಂಟಿಸಿದರೆ, ಅಂಥವರಿಗೆ ದಂಡ ವಿಧಿಸುತ್ತೇವೆ. ಪಾಲಿಕೆಯಿಂದ ನಿಗದಿತ ಸ್ಥಳಗಳಲ್ಲಿ ಫಲಕ ಅಳವಡಿಸಲು ನಿಮಗೆ ಅವಕಾಶ ಕೊಡುತ್ತೇವೆ. ಆದರೆ ಅದರಲ್ಲಿ ಭಿತ್ತಿಪತ್ರ ಅಂಟಿಸಲು ಮಾತ್ರ ನೀವು ಪಾಲಿಕೆಗೆ ವಾರ್ಷಿಕ ಶುಲ್ಕ ನೀಡಬೇಕಾಗುತ್ತದೆ” ಎಂದು ಆಯುಕ್ತ ಭೂಪಾಲನ್ ಹೇಳಿದರು.

ಟ್ರೇಡ್ ಲೈಸೆನ್ಸ್ ಪಡೆಯಿರಿ

      ಇದೇ ಸಂದರ್ಭದಲ್ಲಿ “ಪಾಲಿಕೆ ವ್ಯಾಪ್ತಿಯಲ್ಲಿರುವ ಯಾವುದೇ ಉದ್ಯಮದವರು ಪಾಲಿಕೆಯಿಂದ ಕಡ್ಡಾಯವಾಗಿ ಟ್ರೇಡ್ ಲೈಸೆನ್ಸ್ ಪಡೆಯಬೇಕೆಂಬುದು ನಿಯಮ. ಈ ಹಿನ್ನೆಲೆಯಲ್ಲಿ ಚಲನಚಿತ್ರ ಮಂದಿರದವರೂ ಪಡೆಯಬೇಕು. ರಾಜ್ಯದ ವಿವಿಧ ಸ್ಥಳಗಳಲ್ಲಿ ಚಿತ್ರಮಂದಿರದವರೂ ಟ್ರೇಡ್ ಲೈಸೆನ್ಸ್ ಪಡೆಯುವ ಪದ್ಧತಿ ಇದೆ” ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ಸಭೆಯ ಗಮನ ಸೆಳೆದರು.

       ಇದಕ್ಕೆ ಪ್ರತಿಕ್ರಿಯಿಸಿದ ಚಿತ್ರ ಮಂದಿರಗಳ ಮಾಲೀಕರು, “ಇದು ಮನರಂಜನಾ ಕ್ಷೇತ್ರವಾಗಿರುವುದರಿಂದ ಟ್ರೇಡ್ ಲೈಸೆನ್ಸ್ ಪಡೆಯಬೇಕಾಗಿಲ್ಲ ಎಂಬ ಕಾರಣದಿಂದ ನಾವು ಪಡೆದಿಲ್ಲ. ಜೊತೆಗೆ ಈ ವಿಷಯವಾಗಿ ಸುಪ್ರಿಂಕೋರ್ಟ್‍ನ ಆದೇಶವೂ ಇದೆ” ಎಂದು ಅಭಿಪ್ರಾಯಪಟ್ಟರು.

        ಹಾಗಾದರೆ ಮೊದಲು ಸದರಿ ಆದೇಶದ ಪ್ರತಿ ತಂದು ಕೊಡಿ. ಅದನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ಆಯುಕ್ತರು ಹೇಳಿದರು. ಸಭೆಯಲ್ಲಿ ಪರಿಸರ ಇಂಜಿನಿಯರ್ ಮೋಹನ್ ಕುಮಾರ್ ಹಾಜರಿದ್ದರು. ಈ ಸಭೆಗೆ ನಗರದ ಫ್ಲೆಕ್ಸ್ ಪ್ರಿಂಟರ್ಸ್ ಮಾಲೀಕರು ಗೈರುಹಾಜರಾಗಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap