ಅಧಿಕಾರಿಗಳ ಬಗ್ಗೆ ನಿಂದನೆ: ಪಾಲಿಕೆಯಿಂದ ವ್ಯಕ್ತಿ ವಿರುದ್ಧ ಕೇಸು ದಾಖಲು

ತುಮಕೂರು

      ತನ್ನ ಮನೆ ಮುಂದಿನ ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಅಗೆದಿದ್ದ ವ್ಯಕ್ತಿಯೊಬ್ಬ ಇದನ್ನು ಪರಿಶೀಲಿಸಲು ಬಂದ ಅಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ತುಮಕೂರು ಮಹಾನಗರ ಪಾಲಿಕೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅಪರೂಪದ ಘಟನೆಯೊಂದು ನಡೆದಿದೆ.

    ತುಮಕೂರು ನಗರದ 14 ನೇ ವಾರ್ಡ್ ವ್ಯಾಪ್ತಿಯ ವಿನೋಬ ನಗರದ 2 ನೇ ಕ್ರಾಸ್‍ನಲ್ಲಿ ಏಪ್ರಿಲ್ 17 ರಂದು ಮಧ್ಯಾಹ್ನ 1-30 ರಲ್ಲಿ ಈ ಪ್ರಸಂಗ ಜರುಗಿದೆ.

    ಇಲ್ಲಿನ ನಿವಾಸಿ ರಮೇಶ್ ಎಂಬುವವರು ತಮ್ಮ ಮನೆ ಮುಂದಿನ ಟಾರ್ ರಸ್ತೆಯನ್ನು ಅಕ್ರಮವಾಗಿ ಅಗೆದು, ನೀರು ಸರಬರಾಜು ಕೊಳವೆಯನ್ನು ಜೋಡಣೆ ಮಾಡುತ್ತಿದ್ದಾರೆಂಬ ದೂರೊಂದು ಬಂದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಸೂಚನೆ ಮೇಲೆ ಮಹಾನಗರ ಪಾಲಿಕೆಯ ಜೂನಿಯರ್ ಇಂಜಿನಿಯರ್ (ಸಿವಿಲ್) ಮೋನಿಷಾ ಮತ್ತು ನೀರು ಪೂರೈಕೆ ಇಂಜಿನಿಯರ್ ರಾಠೋಡ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದರು. ಆಗ ಆ ವ್ಯಕ್ತಿಯು ಈ ಅಧಿಕಾರಿಗಳನ್ನು ತಡೆಗಟ್ಟಿ, ಇವರನ್ನೂ ಸೇರಿದಂತೆ ಡಿಸಿ, ಆಯುಕ್ತರಾದಿಯಾಗಿ ಎಲ್ಲ ಅಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಇವರುಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರೆಂದು ಹೇಳಲಾಗಿದೆ. ಈ ಇಡೀ ಪ್ರಸಂಗವನ್ನು ಮೊಬೈಲ್‍ನಲ್ಲಿ ವಿಡಿಯೊ ಮಾಡಲಾಗಿದೆ.

     ಘಟನೆಗೆ ಸಂಬಂಧಿಸಿದಂತೆ ನೀರು ಪೂರೈಕೆ ವಿಭಾಗದ ಎ.ಇ.ಇ. ವಸಂತ್ ದೂರನ್ನು ಸಲ್ಲಿಸಿದ್ದು, ತಿಲಕ್ ಪಾರ್ಕ್ ಠಾಣೆಯ ಪೊಲೀಸರು ಸಾರ್ವಜನಿಕ ಆಸ್ತಿಗೆ ಧಕ್ಕೆಯನ್ನು ತಡೆಯುವ ಕಾಯ್ದೆ ಕಲಂ 3 ಮತ್ತು ಐ.ಪಿ.ಸಿ. ಕಲಂ 186 ಮತ್ತು 504 ಪ್ರಕಾರ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಾಲಿಕೆಯಿಂದ ಎಚ್ಚರಿಕೆ

      ಪಾಲಿಕೆಯ ಅನುಮತಿ ಇಲ್ಲದೆ ಯಾವುದೇ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕೊಳಾಯಿ/ ಯುಜಿಡಿ ಸಂಪರ್ಕ ಪಡೆಯುವುದು, ರಸ್ತೆ ಅಗೆಯುವುದು, ಬೀದಿ ದೀಪಗಳನ್ನು ಹಾಳು ಮಾಡುವುದು, ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜಾಹಿರಾತು ಫಲಕಗಳನ್ನು ಅಳವಡಿಸುವುದು, ಪಾರ್ಕ್ ಗಳಲ್ಲಿ ಅಳವಡಿಸಿರುವ ಪೀಠೋಪಕರಣಗಳಿಗೆ ಹಾನಿ ಉಂಟು ಮಾಡುವುದು, ಸಾರ್ವಜನಿಕ ಆಸ್ತಿಗಳ ಸೌಂದರ್ಯವನ್ನು ಹಾಳು ಮಾಡುವುದು ಹಾಗೂ ಒಟ್ಟಾರೆ ಪಾಲಿಕೆಗೆ ಸೇರಿದ ಆಸ್ತಿಗೆ ಯಾವುದೇ ಹಾನಿ ಮಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಿ, ಅಂಥವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಎಚ್ಚರಿಕೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link