ನಗರದ 21 ಕುಡಿಯುವ ನೀರಿನ ಘಟಕ ಪಾಲಿಕೆ ವಶಕ್ಕೆ

ತುಮಕೂರು

      ಮಹತ್ವದ ಬೆಳವಣಿಗೆಯೊಂದರಲ್ಲಿ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರು ಬುಧವಾರ ಬೆಳಗ್ಗೆ ಪಾಲಿಕೆಯ ತಂಡದೊಂದಿಗೆ ಕಾರ್ಯಾಚರಣೆ ಕೈಗೊಂಡು ತುಮಕೂರು ನಗರದ ವಿವಿಧಡೆ ಇರುವ ಒಟ್ಟು 21 ಶುದ್ಧ ಕುಡಿಯುವ ನೀರಿನ ಘಟಕ (ಆರ್.ಓ. ಘಟಕ)ಗಳನ್ನು ಅಧಿಕೃತವಾಗಿ ಪಾಲಿಕೆಯ ವಶಕ್ಕೆ ತೆಗೆದುಕೊಂಡಿದ್ದಾರೆ.

        ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಯಾರು ನಿರ್ವಹಿಸುತ್ತಿದ್ದಾರೆ? ಇದರಲ್ಲಿ ಸಂಗ್ರಹವಾಗುವ ಮೊತ್ತ ಯಾರ ಕೈಸೇರುತ್ತಿದೆ?” ಎಂಬುದು ಈವರೆಗೆ ನಿಗೂಢವಾಗಿತ್ತು. ಈ ಸಮಸ್ಯೆಯ ಪರಿಹಾರಕ್ಕಾಗಿ ಇಚ್ಛಾಶಕ್ತಿ ಪ್ರದರ್ಶಿಸಿರುವ ಆಯುಕ್ತ ಭೂಪಾಲನ್ ಅವರು ಇವುಗಳನ್ನು ನೇರವಾಗಿ ಪಾಲಿಕೆಯ ವಶಕ್ಕೆ ತೆಗೆದುಕೊಳ್ಳುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

         ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಲಿಗೆ ಸೇರಿದ 12 ಘಟಕಗಳು, ಕೆ.ಆರ್.ಐ.ಡಿ.ಎಲ್.ಗೆ ಸೇರಿದ 2 ಘಟಕಗಳು, ಶಾಸಕರ ನಿಧಿಯಿಂದ ಸ್ಥಾಪಿಸಿದ್ದ ಒಂದು ಘಟಕ, ಸಂಸದರ ನಿಧಿಯಿಂದ ಸ್ಥಾಪಿಸಿದ್ದ ಐದು ಘಟಕಗಳು ಮತ್ತು ಪಾಲಿಕೆಗೆ ಸೇರಿದ 2 ಘಟಕಗಳು ಸೇರಿದಂತೆ ಒಟ್ಟು 22 ಘಟಕಗಳಿದ್ದು, ಇವುಗಳ ಪೈಕಿ ಸಂಸದರ ನಿಧಿಯಿಂದ ನಗರದ ಸರಸ್ವತಿ ಪುರಂನಲ್ಲಿ ನಿರ್ಮಿಸಲಾಗಿದ್ದ ಒಂದು ಘಟಕವು ಹೈಟೆನ್‍ಷನ್ ವಿದ್ಯುತ್‍ತಂತಿಯ ಕೆಳಗಡೆ ಇರುವ ಕಾರಣಕ್ಕೆ ಅದನ್ನು ಕೈಬಿಟ್ಟು ಉಳಿದ 21 ಘಟಕಗಳನ್ನು ಪಾಲಿಕೆಯ ವಶಕ್ಕೆ ಭೌತಿಕವಾಗಿ ಪಡೆಯಲಾಗಿದೆ.

ವಶಕ್ಕೆ ಪಡೆದ ಘಟಕಗಳು

        ಶಿರಾಗೇಟ್ (2 ನೇ ವಾರ್ಡ್), ಭೀಮಸಂದ್ರ ಹಳೆ ಗ್ರಾಮ (6 ನೇ ವಾರ್ಡ್), ದಿಬ್ಬೂರು ಬಸ್ ನಿಲ್ದಾಣ (6 ನೇ ವಾರ್ಡ್), ಹೌಸಿಂಗ್ ಬೋರ್ಡ್ ಕಾಲೋನಿ (9 ನೇ ವಾರ್ಡ್), ಮೆಳೆಕೋಟೆ (11 ನೇ ವಾರ್ಡ್), ಕುರಿಪಾಳ್ಯ ಮುಖ್ಯರಸ್ತೆ (13 ನೇ ವಾರ್ಡ್), ಜಗಜ್ಯೋತಿ ರಸ್ತೆ (18 ನೇ ವಾರ್ಡ್), ಎನ್.ಆರ್.ಕಾಲೋನಿ ಸರ್ಕಾರಿ ಶಾಲೆ (19 ನೇ ವಾರ್ಡ್), ಹನುಮಂತಪುರ ಉದ್ಯಾನ (21 ನೇ ವಾರ್ಡ್), ಭಾರತಿ ನಗರ (22 ನೇ ವಾರ್ಡ್), ಸತ್ಯಮಂಗಲ ಪಾಳ್ಯ (23 ನೇ ವಾರ್ಡ್), ಜಗನ್ನಾಥಪುರ (23 ನೇ ವಾರ್ಡ್), ಪುಟ್ಟಸ್ವಾಮಯ್ಯನ ಪಾಳ್ಯ (23 ನೇ ವಾರ್ಡ್), ಸರ್ಕಾರಿ ಉರ್ದು ಶಾಲೆ (24 ನೇ ವಾರ್ಡ್), ಚೆನ್ನಪ್ಪನ ಪಾಳ್ಯ (24 ನೇ ವಾರ್ಡ್), ಮರಳೂರು ದಿಣ್ಣೆ ಮೊದಲನೇ ಕ್ರಾಸ್ (29 ನೇ ವಾರ್ಡ್), ಎಚ್.ಎಂ.ಎಸ್.ಕಾಲೇಜು ಪಂಪ್ ಹೌಸ್ (31 ನೇ ವಾರ್ಡ್), ಶೆಟ್ಟಿಹಳ್ಳಿ ದೇವಾಲಯದ ಬಳಿ (32 ನೇ ವಾರ್ಡ್), ಚಂದ್ರಮೌಳೀಶ್ವರ ಬಡಾವಣೆ (33 ನೇ ವಾರ್ಡ್), ಕ್ಯಾತಸಂದ್ರ ಶಾಲಾ ಮೈದಾನ (33 ನೇ ವಾರ್ಡ್), ದೇವರಾಯಪಟ್ಟಣದ ಅಂಬೇಡ್ಕರ್ ಭವನದ ಹತ್ತಿರ (35 ನೇ ವಾರ್ಡ್) – ಈ ಸ್ಥಳಗಳಲ್ಲಿದ್ದ ಘಟಕಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

       ಈ 21 ಘಟಕಗಳ ಪೈಕಿ 18 ಘಟಕಗಳು ಹಾಲಿ ಕಾರ್ಯನಿರ್ವಹಿಸುತ್ತಿವೆ. ಇನ್ನು 3 ಘಟಕಗಳಿಗೆ ನೀರಿನ ಸೌಲಭ್ಯ ಇಲ್ಲ. ಈ ಮೂರರ ಪೈಕಿ ಒಂದು ಘಟಕಕ್ಕೆ ಹೊಸದಾಗಿ ಕೊಳವೆಬಾವಿ ಕೊರೆಸಬೇಕಾಗುತ್ತದೆ. ಇನ್ನೆರಡಕ್ಕೆ ಸಮೀಪದ ಕೊಳವೆ ಬಾವಿಗಳಿಂದ ನೀರಿನ ಸಂಪರ್ಕ ಕಲ್ಪಿಸಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.

ವಾಲ್ವ್‍ಮನ್‍ನಿಂದ ನಿರ್ವಹಣೆ

        ಸದರಿ ಘಟಕಗಳ ಕೀ ಅನ್ನು ಪಾಲಿಕೆಗೆ ಪಡೆದುಕೊಳ್ಳಲಾಗಿದೆ. ಸಂಬಂಧಿಸಿದ ಕಡತಗಳನ್ನು ಪಡೆಯಲಾಗುವುದು. ಪಾಲಿಕೆ ವಶಕ್ಕೆ ಬಂದಿರುವ ಈ 21 ಘಟಕಗಳಿಗೆ ತಲಾ ಓರ್ವ ವಾಲ್ವ್‍ಮನ್ ಅನ್ನು ನಿರ್ವಹಣೆಗಾಗಿ ತಕ್ಷಣದಿಂದಲೇ ನಿಯೋಜಿಸಲಾಗಿದೆ. ಆಯಾ ವಾರ್ಡ್ ವ್ಯಾಪ್ತಿಯ ಆಪರೇಟರ್ ಮತ್ತು ಇಂಜಿನಿಯರ್‍ಗಳು ಈ ಘಟಕಗಳ ಮೇಲುಸ್ತುವಾರಿ ನೋಡಿಕೊಳ್ಳುವರು.

         ಈ ಕಾರ್ಯಾಚರಣೆ ಸಂದರ್ಭದಲ್ಲಿ ಆಯುಕ್ತ ಟಿ.ಭೂಪಾಲನ್ ಅವರ ಜೊತೆಯಲ್ಲಿ ಪಾಲಿಕೆಯ ನೀರು ಪೂರೈಕೆ ವಿಭಾಗದ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ವಸಂತ್, ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಲಿಯ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ಈರಣ್ಣ ಮತ್ತು ಪಾಲಿಕೆಯ ಇಂಜಿನಿಯರ್‍ಗಳು ಮತ್ತು ಸಿಬ್ಬಂದಿಯವರು ಇದ್ದರು.

ಸಾರ್ವಜನಿಕ ಹೋರಾಟದ ಫಲ

        “ತುಮಕೂರು ನಗರದ ಶುದ್ಧಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆ ಯಾರದ್ದು? ಪ್ರತಿನಿತ್ಯ ಇಲ್ಲಿ ಸಂಗ್ರಹವಾಗುವ ಸಾವಿರಾರು ರೂ.ಗಳು ಯಾರ ಕೈಸೇರುತ್ತಿದೆ? ಯಾರಿಗೆ ಪಾವತಿಯಾಗುತ್ತಿದೆ? ಇಲ್ಲಿನ ಸಿಬ್ಬಂದಿಯನ್ನು ನಿಯೋಜಿಸಿದವರು ಯಾರು? ನೀರಿನ ಶುದ್ಧೀಕರಣಕ್ಕೆ ಖಾತ್ರಿ ಏನು? ಯಂತ್ರೋಪಕರಣಗಳ ನಿರ್ವಹಣೆ ಆಗುತ್ತಿದೆಯೇ?” ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟು ತುಮಕೂರಿನ ಸಾರ್ವಜನಿಕ ಹೋರಾಟಗಾರ ಆರ್.ವಿಶ್ವನಾಥನ್ ಅವರು ರಾಜ್ಯಪಾಲರು, ಮುಖ್ಯಮಂತ್ರಿಗಳು ಮೊದಲಾದವರಿಗೆ ಮನವಿ ಪತ್ರದ ಮೂಲಕ ದೂರು ಸಲ್ಲಿಸಿದ್ದರು.

           ರಾಜ್ಯಪಾಲರು ಸದರಿ ಪತ್ರವನ್ನು ಸೂಕ್ತ ಕ್ರಮಕ್ಕೆ ಸೂಚಿಸಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದರು. ಮುಖ್ಯಮಂತ್ರಿಗಳು ಮನವಿ ಪತ್ರವನ್ನು ನೇರವಾಗಿ ತುಮಕೂರು ಮಹಾನಗರ ಪಾಲಿಕೆಗೆ ರವಾನಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದರು. ಇವೆಲ್ಲ ಬೆಳವಣಿಗೆಗಳಾಗಿದ್ದರೂ ಈವರೆಗೆ ಪಾಲಿಕೆಯಿಂದ ಯಾವುದೇ ಕ್ರಮ ನಡೆದಿರಲಿಲ್ಲ. ಆದರೆ ಹೊಸ ಆಯುಕ್ತ ಟಿ.ಭೂಪಾಲನ್ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಇದೀಗ ಘಟಕಗಳನ್ನು ಅಧಿಕೃತವಾಗಿ ಪಾಲಿಕೆಯ ವಶಕ್ಕೆ ತೆಗೆದುಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link