ಚಿತ್ರದುರ್ಗ:
ಭಾರತ ಕ್ರಿಕೇಟ್ ತಂಡದ ಅಪ್ರತಿಮ ಕ್ರಿಕೇಟ್ ಆಟಗಾರ ಪಲ್ಪನ್‍ಕರ್ ಬಾಲು ಒಬ್ಬ ಶ್ರೇಷ್ಟ ಕ್ರಿಕೇಟಿಗ ಎನ್ನುವುದು ಇದುವರೆವಿಗೂ ಯಾರಿಗೂ ಗೊತ್ತಿಲ್ಲದ ಕಾರಣ ರಾಜ್ಯದ ಉದ್ದಗಲಕ್ಕೂ ಪಲ್ಪನ್‍ಕರ್ ಬಾಲುರನ್ನು ದೊಡ್ಡ ಪ್ರಮಾಣದಲ್ಲಿ ಪರಿಚಯಿಸುವ ಕೆಲಸವಾಗಬೇಕು ಎಂದು ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಸಿ.ಕೆ.ಮಹೇಶ್ವರಪ್ಪ ವಿದ್ಯಾರ್ಥಿಗಳಿಗೆ ಹೇಳಿದರು.
ಪತ್ರಕರ್ತರ ಭವನದಲ್ಲಿ ಪಲ್ಪನ್‍ಕರ್ ಬಾಲು ಬದುಕು-ಬೆಳವಣಿಗೆ ಕುರಿತು ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣವನ್ನು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ನಮಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
18-3-1876 ರಂದು ಧಾರವಾಡದ ಬಡ ದಲಿತ ಕುಟುಂಬದಲ್ಲಿ ಜನಿಸಿದ ಪಲ್ವನ್‍ಕರ್ ಬಾಲು ಭಾರತ ಕ್ರಿಕೇಟ್ ತಂಡದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ ಜಾತಿಯಲ್ಲಿ ದಲಿತ ಎನ್ನುವ ಒಂದೇ ಕಾರಣಕ್ಕಾಗಿ ಎಲ್ಲಿಯೂ ಇದುವರೆವಿಗೂ ಬೆಳಕಿಗೆ ಬರಲು ಆಗಿಲ್ಲ. ಬ್ರಿಟೀಷರ ಆಳ್ವಿಕೆಯಲ್ಲಿ ಅಪ್ರತಿಮ ಕ್ರಿಕೇಟ್ ಆಟಗಾರನಾಗಿ ಹೊರಹೊಮ್ಮಿದ ಪಲ್ಪನ್‍ಕರ್ ಬಾಲು ಭಾರತ ಕ್ರಿಕೇಟ್ ತಂಡಕ್ಕೆ ಅಪಾರಸ ಕೊಡುಗೆ ನೀಡಿದ್ದಾರೆ.
ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿರುವ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರು ಕೂಡ ಅನೇಕ ವರ್ಷಗಳ ಕಾಲ ಅಪರಿಚಿತರಾಗಿದ್ದರು. ಅವರ ಬದುಕು-ಬರವಣಿಗೆ-ಹೋರಾಟವನ್ನು ಮರೆಮಾಚಲಾಗಿತ್ತು. ದಲಿತ ಚಳುವಳಿಯನ್ನು ಹುಟ್ಟು ಹಾಕಿದ ಪರಿಣಾಮ ಹಳ್ಳಿ ಹಳ್ಳಿಗಳಲ್ಲಿ ದಲಿತರ ಕಾಲೋನಿಗಳಲ್ಲಿ ಅಂಬೇಡ್ಕರ್ ಪರಿಚಯವಾಯಿತು. ಅದೇ ರೀತಿ ಕ್ರಿಕೇಟ್ ಆಟಗಾರನಾಗಿದ್ದ ಕರ್ನಾಟಕದ ಪಲ್ಪನ್‍ಕರ್ ಬಾಲುರನ್ನು ಕೂಡ ರಾಜ್ಯಾದ್ಯಂತ ಪರಿಚಯಿಸಬೇಕು ಎಂದು ತಿಳಿಸಿದರು.
ಪಲ್ಪನ್‍ಕರ್ ಬಾಲು ತಂದೆ ಹೊಟ್ಟೆ ಪಾಡಿಗಾಗಿ ಬ್ರಿಟೀಷರ ಮಿಲ್ಟ್ರಿಯಲ್ಲಿ ಚರ್ಮಗಾರಿಕೆಯ ಕೆಲಸ ಮಾಡಿಕೊಂಡಿದ್ದರು. ಪಲ್ಪನ್‍ಕರ್ ಬಾಲು ಶಾಲೆಗೆ ಹೋದವನಲ್ಲ ಅವಿದ್ಯಾವಂತ. ಇವರ ಕುಟುಂಬ ಜೀವನೋಪಾಯಕ್ಕಾಗಿ ಪೂನಾಕ್ಕೆ ತೆರಳಿದಾಗ ಕ್ರಿಕೇಟ್ ಕ್ರೀಡಾಂಗಣದಲ್ಲಿ ಪಲ್ಪನ್‍ಕರ್ ಬಾಲು ಕೆಲಸಕ್ಕೆ ಸೇರಿಕೊಂಡು ಬ್ರಿಟೀಷ್ ಅಧಿಕಾರಿಗಳು ಹಾಗೂ ಕ್ರಿಕೇಟ್ ಆಟಗಾರರು ಮೈದಾನದಲ್ಲಿ ಕ್ರಿಕೇಟ್ ಆಡುವಾಗ ಕ್ರೀಡಾಂಗಣವನ್ನು ಶುಚಿಗೊಳಿಸುವುದು ನೆಟ್ ಕಟ್ಟುವುದು ಇನ್ನು ಮುಂತಾದ ಕೆಲಸ ಮಾಡಿಕೊಂಡು ತಿಂಗಳಿಗೆ ಏಳು ರೂಪಾಯಿ ಕೂಲಿ ಪಡೆಯುತ್ತಿದ್ದನು.
ಬ್ರಿಟೀಷ್ ಬ್ಯಾಟ್ಸ್‍ಮನ್ ಗ್ರೆಗರ್ ಇತರೆ ಆಟಗಾರರು ಕ್ರೀಡಾಂಗಣಕ್ಕೆ ಆಗಮಿಸುವ ಮನ್ನವೇ ಆಗಮಿಸಿ ಪಲ್ಪನ್‍ಕರ್ ಬಾಲುಗೆ ಬೌಲಿಂಗ್ ಮಾಡಲು ಹೇಳುತ್ತಿದ್ದ. ಡಾ.ಬಿ.ಆರ್.ಅಂಬೇಡ್ಕರ್ ಮೇಲೆ ಪಲ್ಪನ್‍ಕರ್ ಬಾಲು ಅಗಾಧವಾಗ ಪರಿಣಾಮ ಬೀರಿದ್ದರು. ಅಂತಹ ಪಲ್ಪನ್‍ಕರ್ ಬಾಲುರನ್ನು ರಾಜ್ಯಾದ್ಯಂತ ಹಳ್ಳಿ ಹಳ್ಳಿ ದಲಿತರ ಕೇರಿಗಳಲ್ಲಿ ಪರಿಚಯಿಸುವ ಕೆಲಸವನ್ನು ದಲಿತ ವಿದ್ಯಾರ್ಥಿಗಳು ಮಾಡಬೇಕು ಎಂದು ಕರೆ ನೀಡಿದರು.
ಭಾರತ ಕ್ರಿಕೇಟ್ ತಂಡದಲ್ಲಿ ದೊಡ್ಡ ಹೆಸರು ಮಾಡಿದ ಪಲ್ಪನ್‍ಕರ್ ಬಾಲು ಅತಿ ಎತ್ತರದ ಸ್ಥಾನಕ್ಕೆ ಏರಿದವನು. ಕ್ರಿಕೇಟ್ ಬಾಲನ್ನೆ ನೋಡದ ಬ್ಯಾಟನ್ನೆ ಕೈಯಲ್ಲಿ ಹಿಡಿಯದಂತ ಕಾಲಘಟ್ಟದಲ್ಲಿ ಪಲ್ಪನ್‍ಕರ್ ಬಾಲು ದೇಶಕ್ಕೆ ಕ್ರಿಕೇಟ್ ಪರಿಚಯಿಸಿದನು. ಆತನ ಬಗ್ಗೆ ಇದುವರೆವಿಗೂ ಎಲ್ಲಯೂ ಚರ್ಚೆಯಾಗಿಲ್ಲ. ಒಂದು ವಿಚಾರ ಸಂಕಿರಣವೂ ನಡೆದಿಲ್ಲದಿರುವುದು ಅತ್ಯಂತ ನೋವಿನ ಸಂಗತಿ. ಅಂತೆಯೇ ಅಂಬೇಡ್ಕರ್ ಕೇವಲ ಹೋರಾಟ, ಚಳುವಳಿ ಸಾಹಿತ್ಯಕ್ಕೆ ಸೀಮಿತವಾಗಿರಲಿಲ್ಲ. ಪುರುಸೊತ್ತಾಗಿದ್ದಾಗಲೆಲ್ಲಾ ಸಂಗೀತ ಮ್ಯೂಸಿಕ್ ಕೇಳುತ್ತಿದ್ದರು. ಕ್ರೀಡೆಯ ಬಗ್ಗೆ ಅವರಲ್ಲಿ ಆಸಕ್ತಿಯಿತ್ತು. ಅದಕ್ಕಾಗಿ ಪಲ್ಪನ್‍ಕರ್ ಬಾಲು ಹಾಗೂ ಅಂಬೇಡ್ಕರ್ ಇವರುಗಳ ಬಗ್ಗೆ ದೇಶಕ್ಕೆ ಎಷ್ಟು ಪರಿಚಯಿಸಿದರೂ ಕಮ್ಮಿಯೇ ಎಂದು ಹೇಳಿದರು.
ಮೂರು ಬಾರಿ ಎಂಟೆಂಟು ವಿಕೇಟ್‍ಗಳನ್ನು ಪಡೆದಿದ್ದ ಪಲ್ಪನ್‍ಕರ್ ಬಾಲು ಕುಟುಂಬದಲ್ಲಿ ನಾಲ್ವರು ಕ್ರಿಕೇಟ್ ಆಟಗಾರರಿದ್ದರು ಎನ್ನುವುದು ವಿಶೇಷ. ಇವರ ದಾಖಲೆಯನ್ನು ಭಾರತ ಕ್ರಿಕೇಟ್ ತಂಡದಲ್ಲಿ ಯಾರು ಮುರಿದಿಲ್ಲ. ದಲಿತರಿಗೆ ಕ್ರಿಕೇಟ್‍ನಲ್ಲಿ ಆಸಕ್ತಿಯಿತ್ತು ಎನ್ನುವುದನ್ನು ಪಲ್ಪನ್‍ಕರ್ ಬಾಲು ತೋರಿಸಿದ್ದಾರೆ. ಮನಸ್ಸು ಮಾಡಿದರೆ ಬಂಡೆಗಳಲ್ಲಿಯೂ ಹಸಿರು ಚಿಗುರಿಸಬಹುದು ಎನ್ನುವುದನ್ನು ಪಲ್ಪನ್‍ಕರ್ ಬಾಲು ತೋರಿಸಿದ್ದಾರೆ ಎಂದು ಸ್ಮರಿಸಿದರು.ಚಿಕ್ಕಣ್ಣ, ಗೋಪಾಲಕೃಷ್ಣ, ಬಸವರಾಜ್, ಕೃಷ್ಣಮೂರ್ತಿ, ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸಿ.ಕೆ.ಮಹೇಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








