ತುಮಕೂರು
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಸಂಬಂಧ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯ ಪಡೆಯದೆ, ಅಗತ್ಯ ಸಿದ್ಧತೆ ಮಾಡದೆ ಒತ್ತಡ ಹೇರಿ ತರಾತುರಿಯಲ್ಲಿ ಕಾರ್ಯಕ್ರಮ ಜಾರಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗ್ರಾಪಂ ಸದಸ್ಯರು ಅಸಮಾಧಾನಗೊಂಡಿದ್ದಾರೆ.
ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯ ಯೋಜನೆ ಪೂರ್ವದ ಯಾವುದೆ ಚಟುವಟಿಕೆ ನಡೆಸದೆ ಗ್ರಾಪಂ ಸದಸ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಕತ್ತಲಲಲ್ಲಿಟ್ಟು ಎಲ್ಲಾ ಪಂಚಾಯ್ತಿಗಳಿಗೂ ಅಧಿಕಾರಿಗಳೆ ಕ್ರಿಯಾ ಯೋಜನೆ ತಯಾರಿಸಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಪ್ರಕರಣ 315 ಅನ್ನು ಉಲ್ಲಂಘಿಸಲಾಗಿದೆ ಎಂದು ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷರೂ ಆದ ಗುಬ್ಬಿ ತಾಲ್ಲೂಕು ಕಡಬ ಗ್ರಾಪಂ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ತುಮಕೂರು ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಪ್ರಧಾನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸುವ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಹಂತದ ವಿವಿಧ ಚಟುವಟಿಕೆಗಳನ್ನು ನಡೆಸಬೇಕಾಗಿದೆ. ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಇತಿಹಾಸ, ಸ್ಥಳ, ಹಳ್ಳಿಗಳ ಸಂಖ್ಯೆ, ಜನ ಸಂಖ್ಯೆ ಮಾಹಿತಿ ಸಂಗ್ರಹ. ಪ್ರಸ್ತುತ ಘನ ತ್ಯಾಜ್ಯದ ಹರಿವಿನ ಸಮೀಕ್ಷೆ ನಡೆಸಿ ಸಮರ್ಪಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಚೌಕಟ್ಟು ರಚನೆ ಮಾಡಬೇಕು ಎಂದು ಹೇಳಿದ್ದಾರೆ.
ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಸದಸ್ಯರಿಗೆ ಪ್ರಸ್ತಾವನೆಯ ವಿಚಾರ ತಿಳಿಸಲು ಸಭೆ ಹಮ್ಮಿಕೊಳ್ಳಬೇಕು. ಗ್ರಾಮಗಳ ಜನರ ಅಭ್ಯಾಸ, ಜ್ಞಾನ, ದೃಷ್ಟಿಕೋನಗಳ ಅಧ್ಯಯನ ಆಗಬೇಕು. ಯೋಜನೆಯ ಗುರಿ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು, ಸಮುದಾಯದ ಅಭಿಪ್ರಾಯ ಸಂಗ್ರಹಿಸಬೇಕು, ಗ್ರಾಪಂಗಳಲ್ಲಿ ತ್ಯಾಜ್ಯ ನಿರ್ವಹಣಾ ಸಮಿತಿ ರಚಿಸಬೇಕು.
ಗ್ರಾಮಗಳ ರಸ್ತೆ, ಬೀದಿಗಳು ಹಾಗೂ ಅವುಗಳಿಗೆ ಇರುವ ನಕ್ಷೆ, ಅಂಗಡಿ, ಕಚೇರಿ, ಮನೆಗಳ ಸಮೀಕ್ಷೆ, ತ್ಯಾಜ್ಯ ನಮೂನೆ ಅಂದರೆ, ಗುಣ ಮತ್ತು ಗಾತ್ರ ಅವಶ್ಯಕ ಪರಿಕರ, ಕಸ ಸಂಗ್ರಹಿಸುವ ವಾಹನಗಳು, ಚಲಿಸಬೇಕಾದ ದಾರಿ ಗುರುತಿಸುವಿಕೆ, ತ್ಯಾಜ್ಯ ಸಂಗ್ರಹಣಾ ಸಮಯ ನಿಗದಿಪಡಿಸುವುದು, ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ಗುರುತಿಸುವುದು ಮುಂತಾದ ಯೋಜನಾ ಪೂರ್ವ ಸಿದ್ಧತೆಗಳ ಬಗ್ಗೆ ಗ್ರಾಪಂಗಳಲ್ಲಿ ಹಾಗೂ ಗ್ರಾಮಸ್ಥರ ಜೊತೆ ಚರ್ಚಿಸಿ ಅಭಿಪ್ರಾಯ ಪಡೆದಿಲ್ಲ ಎಂದು ಕಾಡಶೆಟ್ಟಿಹಳ್ಳಿ ಸತೀಶ್ ಹೇಳಿದ್ದಾರೆ.
ಸಂವಿಧಾನದ 73 ನೆ ತಿದ್ದುಪಡಿಯ ಪ್ರಕರಣ 243 ಜಿ ಅನ್ವಯ ಗ್ರಾಮ ಪಂಚಾಯ್ತಿಗಳು ಸ್ವಯಂ ಸರ್ಕಾರಗಳಾಗಿ ಸ್ವಾಯತ್ತ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸಬೇಕು ಹಾಗೂ ತ್ಯಾಜ್ಯ ವಿಲೇವಾರಿ ಮೂಲತತ್ವವೂ ಕಸದ ಹುಟ್ಟಿನ ಮೂಲದಲ್ಲೆ ಕಸ ವಿಲೇವಾರಿ ಯಾಗಬೇಕು ಎಂದು ಹೇಳುತ್ತದೆ. ಗ್ರಾಪಂಗಳ ಮೂಲ ಪ್ರಕಾರಗಳಲ್ಲಿ ನೈರ್ಮಲ್ಯೀಕರಣವೂ ಒಂದು. ಘನ ತ್ಯಾಜ್ಯ ವಿಲೇವಾರಿಯ ಸಂಪೂರ್ಣ ಜವಾಬ್ದಾರಿಯನ್ನು ಗ್ರಾಪಂಗಳಿಗೆ ನೀಡಲಾಗಿದೆ. ಆದರೆ, ಜಿಲ್ಲಾ ಪಂಚಾಯ್ತಿಯವರು ಗ್ರಾಪಂಗಳಿಗೆ ಯಾವುದೆ ಸ್ವಾತಂತ್ರ್ಯವನ್ನೂ ನೀಡುತ್ತಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬಂದಿರುವ ಸ್ವಚ್ಛ ಭಾರತ್ ಮಿಷನ್‍ನ 20 ಲಕ್ಷ ರೂ. ಖರ್ಚು ಮಾಡುವುದೆ ಮೂಲ ಗುರಿಯಾಗಿಸಿಕೊಂಡಂತಿದೆ. ಘನ ತ್ಯಾಜ್ಯ ವಿಲೇವಾರಿ ನಮ್ಮ ದೇಶದಲ್ಲಿ ಒಂದು ಸಾಮಾಜಿಕ ವಿಷಯವೂ ಆಗಿರುವುದರಿಂದ ಸಾರ್ವಜನಿಕರು, ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಸೇರಿ ಚರ್ಚಿಸಿ ತಮ್ಮ ವ್ಯಾಪ್ತಿಯ ಪರಿಸರಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಲು ಗ್ರಾಪಂಗಳಿಗೆ ಬಿಡಬೇಕು. ಗ್ರಾಪಂಗಳು ಸಂವಿಧಾನಾತ್ಮಕ ಸಂಸ್ಥೆಗಳಾಗಿವೆ, ಗ್ರಾಪಂ ಕಾರ್ಯಚಟುವಟಿಕೆಗಳಲ್ಲಿ ಜಿಪಂ, ತಾಪಂಗಳು ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು, ಸಂವಿಧಾನದ ಆಶಯಗಳ ಅನುಸಾರ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಬಿಡಬೇಕು ಎಂದು ಕಾಡಶೆಟ್ಟಿಹಳ್ಳಿ ಸತೀಶ್ ಹೇಳಿದ್ದಾರೆ.
ಜಿಲ್ಲೆಯ ಕೆಲವು ಗ್ರಾಮ ಪಂಚಾಯ್ತಿಗಳು ಘನ ತ್ಯಾಜ್ಯ ಸಂಗ್ರಹಣೆ ಕೆಲಸ ಆರಂಭಿಸಿವೆ. ಕೆಲವೆಡೆ ಚುನಾಯಿತ ಪ್ರತಿನಿಧಿಗಳು ಕಾಳಜಿ ವಹಿಸಿದ್ದಾರೆ, ಉಳಿದೆಡೆ ನಿರಾಸಕ್ತಿ ಕಂಡುಬಂದಿದೆ. ತುರುವೇಕೆರೆ ತಾಲ್ಲೂಕು ಮಾಯಸಂದ್ರ ಗ್ರಾಪಂನಲ್ಲಿ ಮನೆಗಳಿಂದ ನಿತ್ಯ ಕಸ ಸಂಗ್ರಹ ಮಾಡಲಾಗುತ್ತಿದೆ. ಕಸ ಸಂಗ್ರಹಿಸಿಡಲು ಕೆಲವು ಮನೆಗಳಿಗೆ ಚೀಲಗಳನ್ನು ಕೊಡಲಾಗಿದೆ, ಮುಂದಿನ ದಿನಗಳಲ್ಲಿ ಪ್ರತಿ ಮನೆಗೆ ಎರಡು ಕಸದ ಬುಟ್ಟಿಗಳನ್ನು ನೀಡುತ್ತೇವೆ ಎಂದು ಆ ಪಂಚಾಯ್ತಿ ಅಧ್ಯಕ್ಷ ಡಿ.ಎನ್.ರಂಗಸ್ವಾಮಿ ಹೇಳಿದರು.
ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಟ್ಟಡ ಕಟ್ಟಲು ಗ್ರಾಮ ಠಾಣಾ ಜಾಗ ಗುರುತಿಸಲಾಗಿದೆ. ಅಲ್ಲಿಯ ತನಕ ಸಂಗ್ರಹಿಸುವ ಒಣ ಕಸವನ್ನು ಆಯಾ ದಿನವೆ ಗುಜರಿಯವರಿಗೆ ಮಾರಾಟ ಮಾಡಿ, ವಿಲೇವಾರಿ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಮೊದಲ ಹಂತದಲ್ಲಿ ಮಾಯಸಂದ್ರ ಗ್ರಾಮದಲ್ಲಿ ಮಾತ್ರ ಕಸ ಸಂಗ್ರಹಿಸಲಾಗುತ್ತದೆ, ಉಳಿದ ಗ್ರಾಮಗಳ ಸಂಗ್ರಹಣೆ ಕಾರ್ಯ ಆರಂಭಿಸಿಲ್ಲ, ಹಳ್ಳಿ ಜನ ಕಸವನ್ನು ತಾವೆ ತಿಪ್ಪೆಗೆ ಹಾಕಿಕೊಂಡು ಗೊಬ್ಬರ ಮಾಡಿಕೊಳ್ಳುತ್ತಾರೆ. ನಾವು ಮುಖ್ಯವಾಗಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆಗೆ ಒತ್ತು ಕೊಡಬೇಕಾಗಿದೆ, ಪ್ಲಾಸ್ಟಿಕ್, ಗಾಜು ಮುಂತಾದವುಗಳನ್ನು ಸಂಗ್ರಹಿಸುತ್ತೇವೆ, ಗ್ರಾಮ ನೈರ್ಮಲ್ಯಕ್ಕೆ ಎಲ್ಲರೂ ಒತ್ತುಕೊಡಬೇಕು ಎಂದು ಹೇಳಿದರು.
ಇಲಾಖೆಯಿಂದ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಗೆ ತ್ಯಾಜ್ಯ ವಿಲೇವಾರಿ ಬಗ್ಗೆ ತರಬೇತಿ, ಮಾಹಿತಿ ನೀಡಲಾಗಿದೆ, ಈ ಸಂಬಂದ ವಿವಿಧ ಘಟಕಗಳನ್ನು ವೀಕ್ಷಿಸಿ ತಿಳಿದುಕೊಂಡಿದ್ದೇವೆ, ಮುಂದೆ ಜನರಲ್ಲಿ ಜಾಗೃತಿ ಹೆಚ್ಚಾದಾಗ ತ್ಯಾಜ್ಯ ವಿಲೇವಾರಿ ಸುಲಭವಾಗುತ್ತದೆ ಎಂದು ರಂಗಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮ ಸ್ವಚ್ಚತೆ, ತ್ಯಾಜ್ಯ ಸಂಗ್ರಹಣೆ ಬಗ್ಗೆ ನಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೀದಿ ನಾಟಕಗಳು, ವೀಡಿಯೊ ಪ್ರದರ್ಶನದ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇವೆ, ತಕ್ಕಮಟ್ಟಿಗೆ ಜನರಲ್ಲಿ ಅರಿವು ಉಂಟಾಗಿದೆ ಎಂದು ತುಮಕೂರು ತಾಲ್ಲೂಕು ಕೆ.ಪಾಲಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರುಕ್ಮಿಣಿ ವೆಂಕಟೇಶ್ ಹೇಳಿದರು.
ಮನೆಗಳಿಂದ ಕಸ ಸಂಗ್ರಹಿಸಿ ಸದ್ಯಕ್ಕೆ ಪಾಲಸಂದ್ರದ ಹಳೆ ಕಟ್ಟಡದಲ್ಲಿ ವಿಂಗಡಿಸಿ ಸಂಗ್ರಹಿಸುತ್ತಿದ್ದೇವೆ, ತ್ಯಾಜ್ಯ ಸಂಗ್ರಹಣೆಗೆ ಶೆಡ್ ನಿರ್ಮಿಸಲು ಕಂದಾಯ ಜಾಗ ಗುರುತಿಸಲಾಗಿದೆ. ಕೆ.ಪಾಲಸಂದ್ರ ಗ್ರಾಪಂಗೆ 11 ಹಳ್ಳಿಗಳು ಸೇರಿವೆ, ಸದ್ಯಕ್ಕೆ ಪಾಲಸಂದ್ರದಲ್ಲಿ ಮಾತ್ರ ಕಸ ಸಂಗ್ರಹಣೆ ಮಾಡುತ್ತಿದ್ದೇವೆ, ಶೆಡ್ ಕಟ್ಟಿ ಅಗತ್ಯ ಸಿದ್ಧತೆ ಮಾಡಿಕೊಂಡ ನಂತರ ಉಳಿದ ಹಳ್ಳಿಗಳ ಒಣ ಕಸ ಸಂಗ್ರಹಿಸಿ ವಿಲೇವಾರಿ ಮಾಡುತ್ತೇವೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








