ಬೆಂಗಳೂರು
ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಕೆಲ ರಾಜಕೀಯ ಬೆಳವಣಿಗೆಗಳು ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆ ಕುರಿತು ಬೆಂಗಳೂರಿನ ಶಾಸಕರ ಜೊತೆ ಚರ್ಚೆ ನಡೆಸಿರುವುದಾಗಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಬೆಂಗಳೂರು ವ್ಯಾಪ್ತಿಯ ಶಾಸಕರು. ಸಂಸದರು, ವಿಧಾನ ಪರಿಷತ್ ಸದಸ್ಯರು, ಮೇಯರ್, ಉಪಮೇಯರ್ ಜೊತೆಗಿನ ಉಪಹಾರ ಕೂಟದ ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಎರಡು ಪಕ್ಷಗಳ ಕಾರ್ಪೋರೇಟ್ಗಳ ಜೊತೆ ಅನ್ಯೋನ್ಯತೆಯಿಂದ ಕೆಲಸ ಮಾಡುವಂತೆ ಎಲ್ಲ ಶಾಸಕರಿಗೆ ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಶಾಸಕರು,ಸಂಸದರು, ಮೇಯರ್ ಅವರನ್ನು ಉಪಹಾರ ಕೂಟಕ್ಕೆ ಆಹ್ವಾನಿಸಲಾಗಿತ್ತು ಎಂದು ಹೇಳಿದರು.
ಜೆಡಿಎಸ್ ಅಧ್ಯಕ್ಷ ವಿಶ್ವನಾಥ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಡುವೆ ವೈಯಕ್ತಿಕವಾಗಿ ಬಿನ್ನಭಿಪ್ರಾಯಗಳು ಇರಬಹುದು, ವಿಶ್ವನಾಥ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರಿತು ಲಘವಾಗಿ ಮಾತನಾಡಿರುವುದು ಸರಿಯಲ್ಲ, ಇನ್ನು ಮುಂದೆ ಇಂತಹ ಹೇಳಿಕೆಗಳು ಮೈತ್ರಿ ಸರ್ಕಾರಕ್ಕೆ ಆರೋಗ್ಯಕರವಲ್ಲ, ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಇದನ್ನು ಸೂಕ್ಷ್ಮವಾಗಿ ಗಮನಿಸುವುದು ಅಗತ್ಯವಾಗಿದೆ, ಮೈತ್ರಿ ಸರ್ಕಾರ ಮುಂದುವರೆಯಬೇಕಾದರೆ ಇಂತಹ ಹೇಳಿಕೆಗಳು ಒಳ್ಳೆಯ ಬೆಳವಣಿಗೆಯಲ್ಲ ಎಂದರು. ಮೇ 23ರ ನಂತರ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ,ಇದರಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.