ಪರಮೇಶ್ವರ್-ಕೆಎನ್‍ಆರ್ ನಡುವೆ ಮಧ್ಯವರ್ತಿಗಳಿಂದ ಹುಳಿ ಹಿಂಡುವ ಕಾರ್ಯ

ಕೊರಟಗೆರೆ

     ಪರಮೇಶ್ವರ್‍ರವರ ಈ ಬಾರಿಯ ಗೆಲುವಿಗೆ ಕೆ.ಎನ್.ರಾಜಣ್ಣನವರ ಕೊಡುಗೆ ಅಪಾರವಾಗಿದೆ. ಇವರನ್ನು ಗೆಲ್ಲಿಸಲ್ಲೆಬೇಕೆಂಬ ದೃಷ್ಟಿಕೋನದಲ್ಲಿ ಕೊರಟಗೆರೆ ಕ್ಷೇತ್ರದ 16 ವಿಎಸ್‍ಎಸ್‍ಎನ್‍ಗಳಲ್ಲಿ 9 ಸಾವಿರ ರೈತರಿಗೆ 34 ಕೋಟಿ ಸಾಲವನ್ನು ಡಿಸಿಸಿ ಬ್ಯಾಂಕ್‍ನ ಮೂಲಕ ಹಂಚಿಕೆ ಮಾಡಿ, ಇವರ ಗೆಲುವಿಗೆ ಪೂರ್ಣಸಹಕಾರ ನೀಡಿದ್ದಾರೆ. ಇವರಿಬ್ಬರ ಮಧ್ಯೆ ಹುಳಿ ಹಿಂಡುವ ಕೆಲಸ ಮಧ್ಯವರ್ತಿಗಳಿಂದ ನಡೆಯುತ್ತಿದೆ. ಇದನ್ನು ಬಿಟ್ಟು ಜಿಲ್ಲೆಯ ಇಬ್ಬರು ಪ್ರಭಾವಿ ರಾಜಕಾರಣಿಗಳ ಹೊಂದಾಣಿಕೆಗೆ ಕೈ ಜೋಡಿಸಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಹನುಮಾನ್ ಮನವಿ ಮಾಡಿಕೊಂಡರು.

     ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದೇಶಿಸಿ ಮಾತನಾಡುತ್ತಾ, ಕೆಲವರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣನವರ ಮಧ್ಯೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಅವರಿಬ್ಬರು ಬಾಲ್ಯದಿಂದ ಒಳ್ಳೆಯ ಸ್ನೇಹಿತರು. ಎಷ್ಟೋ ಬಾರಿ ದೂರವಾದರೂ ಅಷ್ಟೇ ಹತ್ತಿರವಾಗಿದ್ದಾರೆ. ಡಿಸಿಎಂ ಪರಮೇಶ್ವರ್‍ರವರ ಬಗ್ಗೆ ವೈಯಕ್ತ್ತಿಕ ನಿಂದನೆ ಮಾಡಿಲ್ಲ. ಇವರು ಇಬ್ಬರು ತುಮಕೂರು ಜಿಲ್ಲೆಯ ಕಾಂಗ್ರೆಸ್‍ಗೆ ಎರಡು ಕಣ್ಣುಗಳು ಇದ್ದ ಹಾಗೆ. ಇವರನ್ನು ಆದಷ್ಟು ಬೇಗ ಹೊಂದಾಗುವಂತೆ ಹೈಕಮಾಂಡ್ ಮಾಡಬೇಕಿದೆ ಎಂದು ಹೇಳಿದರು.

      ಹೊಳವನಹಳ್ಳಿ ವಿಎಸ್‍ಎಸ್‍ಎನ್ ಅಧ್ಯಕ್ಷ ಸೈಯಾದ್ ರಿಯಾಸತ್ ಅಲಿ ಮಾತನಾಡಿ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಯಾವುದೇ ವೈಯಕ್ತ್ತಿಕವಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‍ಗೆ ಧಕ್ಕೆಯಾಗುವಂತೆ ಹೇಳಿಕೆ ನೀಡಿಲ್ಲ. ಅವರು ಇಬ್ಬರೂ ಒಂದೇ ತಾಯಿಯ ಮಕ್ಕಳ ತರ ಇದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಲು ದುಡಿದಿದ್ದಾರೆ. ಕೆ.ಎನ್.ರಾಜಣ್ಣನವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿರುವ ಹೊಳವನಹಳ್ಳಿ ಜಿಪಂ ಸದಸ್ಯ ನಾರಾಯಣಮೂರ್ತಿರವರ ಹೇಳಿಕೆ ಖಂಡನಾರ್ಹವಾಗಿದೆ ಎಂದು ತಿಳಿಸಿದರು.

      ನಾರಾಯಣಮೂರ್ತಿರವರಿಗೆ ಕೆ.ಎನ್.ರಾಜಣ್ಣನವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ರಾಜಣ್ಣನವರ ಮಟ್ಟಕ್ಕೆ ಮಾತನಾಡುವ ಯೋಗ್ಯತೆ ಇವರಿಗೆ ಇದೇಯೇ? ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ ತಾಲ್ಲೂಕಿನ ಎಲ್ಲಾ ಸಹಕಾರಿಗಳ ಸಭೆ ಕರೆದು ತಾಲ್ಲೂಕಿನಲ್ಲಿ ಪ್ರತಿಯೊಬ್ಬ ರೈತನಿಗೂ ಕನಿಷ್ಠ 25 ಸಾವಿರದಿಂದ 2 ಲಕ್ಷದವರೆಗೂ ಸಾಲ ನೀಡಿದ್ದಾರೆ. ಆ ಹೊತ್ತು ನೀಡಿದ ಸಾಲವನ್ನು ಸರಕಾರ ಇಂದು ಮನ್ನಾ ಮಾಡಿದೆ.

     ಡಿಸಿಎಂ ಪರಮೇಶ್ವರ್ ಗೆಲ್ಲಬೇಕು ಎಂದು ರಾಜಣ್ಣ ಹಾಗೂ ಅವರ ಮಗ ರಾಜೇಂದ್ರ ಕೊರಟಗೆರೆಯಲ್ಲಿ ಎರಡು ದೊಡ್ಡ ಸಮಾವೇಶ ಮಾಡಿ, ಡಿಸಿಎಂ ಪರಮೇಶ್ವರ್‍ರವರ ಗೆಲುವಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.

     ಕಸಬಾ ವಿಎಸ್‍ಎಸ್‍ಎನ್ ಅಧ್ಯಕ್ಷ ರಾಜಣ್ಣ ಮಾತನಾಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣನವರದು ಈ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಿದೆ. ನಮ್ಮ ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಪ್ರತಿಯೊಬ್ಬ ರೈತರಿಗೂ ಬಡ್ಡಿ ಇಲ್ಲದೇ ಸಾಲ ನೀಡಿ, ಆರ್ಥಿಕವಾಗಿ ಮೇಲೆತ್ತಲು ಅವರ ಸಹಕಾರ ದೊಡ್ಡದು. ಇಂತಹ ವ್ಯಕ್ತಿಯ ಬಗ್ಗೆ ಮಾತನಾಡಿರುವುದು ಖಂಡನಾರ್ಹವಾಗಿದ್ದು ಆದಷ್ಟು ಬೇಗ ಇವರಿಬ್ಬರನ್ನು ಒಂದಾಗುವಂತೆ ಮಾಡಬೇಕು ಎಂದರು.

     ಇದೆ ಸಂದರ್ಭದಲ್ಲಿ ಹೊಳವನಹಳ್ಳಿ ಗ್ರಾಪಂ ಸದಸ್ಯರಾದ ಉಮೇಶ್‍ಕುಮಾರ್, ಶಶಿಕುಮಾರ್, ರಂಗಣ್ಣ, ಮುಖಂಡರಾದ ಜಯರಾಮಯ್ಯ, ಶಿವಕುಮಾರ್, ಕುಂಭಿನರಸಿಂಹಯ್ಯ, ಜಯರಾಜ್ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link