ಪರಸ್ಪರ ಸಹಕಾರ, ಹಂಚುವಿಕೆ ಮತ್ತು ಕಾಳಜಿ ಭಾರತೀಯ ತತ್ವಶಾಸ್ತ್ರದ ಮೂಲ : ಎಂ. ವೆಂಕಯ್ಯನಾಯ್ಡು

ನವದೆಹಲಿ

     ಭಾರತದ ಪ್ರಾಚೀನ ಜ್ಞಾನದಲ್ಲಿನ ಉತ್ತಮ ಅಂಶಗಳನ್ನು ಸಾರಲು ಸಾಂಸ್ಕೃತಿಕ ನವೋದಯ ಅಗತ್ಯ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಪ್ರತಿಪಾದಿಸಿದ್ದಾರೆ.

    ಸತ್ಯ ಸಾಯಿ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ವೇದಾಂತ ಭಾರತಿ ಸಂಸ್ಥೆ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಸೇರಿದಂತೆ ಹತ್ತು ಭಾಷೆಗಳಲ್ಲಿ ಅನುವಾದಗೊಂಡಿರುವ ಆದಿಶಂಕರಾಚಾರ್ಯ ವಿರಚಿತ ಪ್ರಶ್ನೋತ್ತರ ಮಾಲಿಕೆಯ ಸಂಗ್ರಹ “ವಿವೇಕದೀಪಿನಿ” ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಪರಸ್ಪರ ಸಹಕಾರ, ಹಂಚುವಿಕೆ ಮತ್ತು ಕಾಳಜಿ ಭಾರತೀಯ ತತ್ವಶಾಸ್ತ್ರದ ಮೂಲವಾಗಿದೆ. ಭಾರತದ ತತ್ವಶಾಸ್ತ್ರವನ್ನು ಬಿಂಬಿಸುವ ಸಮಾಜ ನಿರ್ಮಿಸಬೇಕಾದ ಅಗತ್ಯವಿದೆ ಎಂದರು.

      ಆದಿಶಂಕರಾಚಾರ್ಯ ಮತ್ತು ಸ್ವಾಮಿ ವಿವೇಕಾನಂದರಂತಹ ಆಧ್ಯಾತ್ಮಿಕ ಗುರುಗಳನ್ನು ಭಾರತ ಜಗತ್ತಿಗೆ ನೀಡಿರುವುದು ಹೆಮ್ಮೆಯ ಸಂಗತಿ. ಅವರ ತತ್ವಗಳು ದೇಶಕ್ಕೆ ನೈತಿಕ ಬುನಾದಿ ನೀಡಿದೆ ಎಂದರು. ಪ್ರಶ್ನೋತ್ತರ ರತ್ನಮಾಲಿಕೆಯಲ್ಲಿ ಧರ್ಮ, ಸಮುದಾಯದ ಭೇದವಿಲ್ಲದ ಅನೇಕ ಸಾರ್ವತ್ರಿಕ ಮಹತ್ವದ ವಿಷಯಗಳಿದ್ದು ಅವು ನೈತಿಕ ತತ್ವಗಳನ್ನು ಪ್ರತಿಬಿಂಬಿಸುತ್ತವೆ ಎಂದು ಉಪರಾಷ್ಟ್ರಪತಿ ಹೇಳಿದರು.

      ಈ ವಿವೇಕವಾಣಿ ನಿಜಕ್ಕೂ ಸಾರ್ವತ್ರಿಕ ಎಂಬುದು ಎಲ್ಲರೂ ಒಪ್ಪುವಂತಹ ಸತ್ಯ. ಇದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆಯ ಸಂಗತಿ. ಇದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದುದು ಅತ್ಯಗತ್ಯ ಎಂದು ಉಪರಾಷ್ಟ್ರಪತಿ ಕಿವಿಮಾತು ಹೇಳಿದರು.

      ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಶಾಲಾ, ಕಾಲೇಜುಗಳಲ್ಲಿ ಸಹಿಷ್ಣುತೆ, ಒಳಗೊಳ್ಳುವಿಕೆ, ಶಾಂತಿ, ಶ್ರೇಷ್ಠತಾ ಗುಣ ಮೊದಲಾದವುಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಅವರು ಸಲಹೆ ನೀಡಿದರು. ಭಾರತದ ಪ್ರಾಚೀನ ಜ್ಞಾನವನ್ನು ಪುನರ್‌ ಶೋಧಿಸಬೇಕಿದೆ. ಅದು ವಿಶ್ವಾದ್ಯಂತ ಸಕಾರಾತ್ಮಕ ಭಾವ ಹಂಚಬಹುದಾದ ಭಂಡಾರವಾಗಿದೆ. ಅದು ಜಾಗತಿಕ ಮಟ್ಟದಲ್ಲಿ ಶಾಂತಿ, ನೈತಿಕತೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ದನಿ ಎತ್ತಲು ಸಹಕಾರಿಯಾಗಿದೆ ಎಂದರು.

        ಶ್ರೀ ಶಂಕರ ಭಾರತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಆದಿ ಶಂಕರಾಚಾರ್ಯ ವಿರಚಿತ ಸ್ತೋತ್ರಗಳಿಂದ ಮನಃಶಾಂತಿ ಪಡೆಯುವ ಜೊತೆಗೆ ಲೌಕಿಕ ಆಶಯಗಳನ್ನೂ ಈಡೇರಿಸಿಕೊಳ್ಳಬಹುದಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap