ಪೋಷಕರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕಿಸಲು ಮುಂದಾಗಿ: ಜಿಎಂಎಸ್

ಹೊನ್ನಾಳಿ:

        ಪೋಷಕರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕಿಸಲು ಮುಂದಾಗಬೇಕು ಎಂದು ಸಂಸದ ಜಿ.ಎಂ. ಸಿದ್ಧೇಶ್ವರ್ ಹೇಳಿದರು.
ತಾಲೂಕಿನ ಸಿಂಗಟಗೆರೆ ಗ್ರಾಮದ ಹೊರವಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 16.64 ಕೋಟಿ ರೂ.ಗಳ ವೆಚ್ಚದಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಯ ನೂತನ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

        ಬಡವರಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಉಚಿತವಾಗಿ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಿದೆ. ಇದರಿಂದಾಗಿ ಅನೇಕ ವಸತಿ ಶಾಲೆಗಳು ನಿರ್ಮಾಣವಾಗುತ್ತಿವೆ. ಪೋಷಕರು ಇವುಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.

        ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿ ಆಗಿದ್ದ ಸಂದರ್ಭದಲ್ಲಿ “ಸರ್ವ ಶಿಕ್ಷಣ ಅಭಿಯಾನ” ಎಂಬ ಯೋಜನೆಯನ್ನು ಜಾರಿಗೆ ತಂದು ದೇಶದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಶಾಶ್ವತ ಕೊಡುಗೆ ನೀಡಿರುವುದನ್ನು ಜನತೆ ಎಂದಿಗೂ ಮರೆಯಲಾರರು. ಈ ಯೋಜನೆಯಡಿ ದೇಶದ ಪ್ರತಿ ಕುಗ್ರಾಮಗಳಲ್ಲೂ ಕೂಡ ಶಾಲಾ-ಕಾಲೇಜು ಕಟ್ಟಡಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದರು ಎಂದು ವಿವರಿಸಿದರು.

       ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಗಮನಹರಿಸಿದ್ದರು. ಶಾಲಾ ಮಕ್ಕಳಿಗೆ ಬೈಸಿಕಲ್, ಮಧ್ಯಾಹ್ನದ ಬಿಸಿಯೂಟದ ಯೋಜನೆ, ಉಚಿತ ಸಮವಸ್ತ್ರ ವಿತರಣೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿದ್ದರು ಎಂದರು. 

       ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಈ ಹಿಂದಿನ ತಮ್ಮ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಯೋಜನೆಗಳಡಿ 3.50 ಸಾವಿರ ಕೋಟಿ ರೂ.ಗಳನ್ನು ಮಂಜೂರು ಮಾಡಿಸಿ ಅನೇಕ ಜನಪರ ಶಾಶ್ವತ ಯೋಜನೆಗಳನ್ನು ಮಂಜೂರು ಮಾಡಿಸಲಾಗಿತ್ತು ಎಂದರು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಕ್ಷೇತ್ರದಲ್ಲಿ ಹೊಸದಾಗಿ 7 ಪ್ರೌಢಶಾಲೆಗಳು, ವಿಶೇಷವಾಗಿ ಅಲ್ಪಸಂಖ್ಯಾತ ಮಕ್ಕಳಿಗಾಗಿ ಕುಂದೂರು ಗ್ರಾಮಕ್ಕೆ ಉರ್ದು ಪ್ರೌಢಶಾಲೆ, ಹೊನ್ನಾಳಿ ಪಟ್ಟಣಕ್ಕೆ ಪ್ರಥಮ ದರ್ಜೆ ಕಾಲೇಜು ಹಾಗೂ ಎರಡು ಹೊಸ ಪಿಯು ಕಾಲೇಜುಗಳನ್ನು ಮಂಜೂರು ಮಾಡಿಸಿ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಹೊಸದಾಗಿ ಶಾಲಾ-ಕಾಲೇಜು ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿತ್ತು ಎಂದು ವಿವರಿಸಿದರು.

       ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಜಾಗತೀಕರಣದ ಹಿನ್ನೆಲೆಯಲ್ಲಿ ಗುಣಾತ್ಮಕ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಾದನಬಾವಿ ಗ್ರಾಮದ ಬಳಿ 10 ಎಕರೆ ಪ್ರದೇಶದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ, ಎಚ್. ಕಡದಕಟ್ಟೆ ಗ್ರಾಮದ ಬಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮತ್ತು ಅಟಲ್ ಬಿಹಾರಿ ವಸತಿ ಶಾಲೆಯನ್ನು ಮಂಜೂರು ಮಾಡಿಸಲಾಗಿತ್ತು ಎಂದು ತಿಳಿಸಿದರು.
ಈ ಹಿಂದೆ ವಸತಿ ಶಾಲೆಗಳೆಂದರೆ ಗ್ರಾಮೀಣ ಮಕ್ಕಳಿಗೆ ಕನಸಿನ ಮಾತಾಗಿತ್ತು. ಅವುಗಳ ಪ್ರವೇಶಕ್ಕೆ ಪೋಷಕರು ಹರಸಾಹಸಪಡುವ ಕಾಲವಿತ್ತು. ಆದರೆ, ಇಂದು ನನ್ನ ಕ್ಷೇತ್ರದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಲು ವಸತಿ ಶಾಲೆಗಳು ಪೂರಕವಾಗಿವೆ ಎಂದರು.

        ಇಂದು ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಾವು ನಗರ ಪ್ರದೇಶದವರಿಗಿಂತ ಕಡಿಮೆ ಇಲ್ಲ ಎಂಬುದಾಗಿ ಗುಣಮಟ್ಟದ ಶಿಕ್ಷಣ ಕಲಿತು ಇಂದು ನೈಜ ಪ್ರತಿಭೆಗಳಾಗಿ ಹೊರಹೊಮ್ಮಿ ನಾಡಿನ ಅನೇಕ ಉನ್ನತ ಮಟ್ಟದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

         ಜಿಪಂ ಸದಸ್ಯರಾದ ಸಿ. ಸುರೇಂದ್ರನಾಯ್ಕ, ದೀಪಾ ಜಗದೀಶ್, ತಾಪಂ ಅಧ್ಯಕ್ಷೆ ಸುಲೋಚನಮ್ಮ, ತಿಮ್ಮಲಾಪುರ ಗ್ರಾಪಂ ಅಧ್ಯಕ್ಷ ಮಂಜುನಾಥ್, ವಸತಿ ಶಾಲೆಯ ಪ್ರಾಚಾರ್ಯ ಪ್ರಶಾಂತ್, ಎಇಇ ಶ್ರೀಧರ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರಕೆರೆ ಎ.ಎಂ. ನಾಗರಾಜ್, ಮುಖಂಡರಾದ ಯಕ್ಕನಹಳ್ಳಿ ಜಗದೀಶ್, ದಿಡಗೂರು ಫಾಲಾಕ್ಷಪ್ಪ, ಮಹಾದೇವಪ್ಪ, ಸಿಂಗಟಗೆರೆ ಹನುಮಂತಪ್ಪ, ರುದ್ರೇಶ್, ಲಕ್ಷ್ಮಣ್‍ನಾಯ್ಕ, ಗ್ರಾಪಂ ಸದಸ್ಯರು ಸೇರಿದಂತೆ ಸಿಂಗಟಗೆರೆ, ತರಗನಹಳ್ಳಿ, ಹನುಮನಹಳ್ಳಿ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link